ಆನ್‌ಲೈನ್‌ ಶಿಕ್ಷಣ ಸಮಸ್ಯೆ ಆಲಿ​ಸಲು ವಿದ್ಯಾರ್ಥಿ ಮನೆಗೆ ಸಚಿವ ಸುರೇ​ಶ್‌ ಕುಮಾರ್‌

By Kannadaprabha News  |  First Published Aug 5, 2020, 12:37 PM IST

ಶಿಕ್ಷಕರು-ಮಕ್ಕಳ ನಡುವೆ ನಿರಂತರ ಸಂಪರ್ಕ| ಮಕ್ಕಳ ಮನೆಗೇ ಉಪಾಹಾರ: ಸಚಿವ ಸುರೇಶ್‌ ಕುಮಾರ್‌| ಕೊರೋನಾ ಕಾಲದಲ್ಲಿ ಮಕ್ಕಳ ಕಲಿಕೆಗೆ ‘ವಿದ್ಯಾಗಮ’ ಯೋಜ​ನೆ| ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯ ವೃದ್ಧಿಸುವುದೂ ಸೇರಿದಂತೆ ವಿವಿಧ ಉದ್ದೇಶದ ‘ವಿದ್ಯಾಗಮ’ ನಿರಂತರ ಕಲಿಕಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ|


ಕೊಪ್ಪ(ಆ.05): ಆನ್‌​ಲೈನ್‌ ಶಿಕ್ಷ​ಣದಿಂದ ಗ್ರಾಮೀಣ ಪ್ರದೇ​ಶದ ಮಕ್ಕ​ಳಿ​ಗಾ​ಗು​ತ್ತಿ​ರುವ ಸಮ​ಸ್ಯೆ​ಯನ್ನು ವಿವ​ರಿಸಿ ತಮಗೆ ಆಡಿಯೋ ಸಂದೇಶ ಕಳು​ಹಿ​ಸಿದ್ದ ಹೊರಳೆ ಗ್ರಾಮದ ಎಸ್ಸೆ​ಸ್ಸೆಲ್ಸಿ ವಿದ್ಯಾರ್ಥಿ ಆದ​ಶ್‌ರ್‍ ಮನೆಗೆ ಸ್ವತಃ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಮಂಗ​ಳ​ವಾರ ಭೇಟಿ ನೀಡಿ​ದ್ದಾರೆ. 

ಇದೇ ವೇಳೆ, ಕೊಪ್ಪ ತಾಲೂ​ಕಿ​ನ ಮೇಗುಂದಾ ಹೋಬಳಿಯ ಗುಡ್ಡಗಾಡು ಪ್ರದೇಶಗಳಿಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳ ಸಮಸ್ಯೆ ಆಲಿ​ಸಿ​ದ​ರು. ಇತ್ತೀಚೆಗೆ ಮೇಗೂರು ಗ್ರಾಮದ ಹೊರಳೆ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಎಚ್‌.ಆರ್‌. ಆದಶ್‌ರ್‍ ಆನ್‌ಲೈನ್‌ ತರಗತಿಗಳಿಂದ ಕುಗ್ರಾಮಗಳ ವಿದ್ಯಾ​ರ್ಥಿ​ಗ​ಳಿ​ಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಇತ್ತೀ​ಚೆಗೆ ಆಡಿಯೋ ಸಂದೇಶ ಕಳು​ಹಿ​ಸಿ​ದ್ದ. ಈ ಹಿನ್ನೆ​ಲೆ​ಯಲ್ಲಿ ವಿದ್ಯಾ​ರ್ಥಿ​ಗಳ ಸಮ​ಸ್ಯೆ​ಯನ್ನು ಖುದ್ದಾಗಿ ಅರಿ​ಯ​ಬೇ​ಕೆಂಬ ಉದ್ದೇ​ಶ​ದಿಂದ ಸಚಿ​ವರು ಹೊರಳೆ ಗ್ರಾಮಕ್ಕೆ ಭೇಟಿ ನೀಡಿ​ದರು. ನಂತರ ಶಿಕ್ಷಣ ಅಧಿ​ಕಾ​ರಿ​ಗಳು, ಜನ​ಪ್ರ​ತಿ​ನಿ​ಧಿ​ಗ​ಳೊಂದಿಗೆ ಸಮಾ​ಲೋ​ಚ​ನೆ​ಯನ್ನೂ ನಡೆ​ಸಿ​ದ್ದಾರೆ. 

Tap to resize

Latest Videos

ಕೊರೋನಾ ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಆರೋಪ: ಸಿದ್ದುಗೆ ಸಿ.ಟಿ. ರವಿ ಟಾಂಗ್‌

ಕೊರೋನಾ ಕಾಲದಲ್ಲಿ ಮಕ್ಕಳ ಕಲಿಕೆಗೆ ‘ವಿದ್ಯಾಗಮ’ ಯೋಜ​ನೆ

ಮಕ್ಕಳ ನಿರಂತರ ಕಲಿಕೆ, ಶಿಕ್ಷಕರು- ಮಕ್ಕಳ ನಿರಂತರ ಸಂಪರ್ಕ, ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮನೆಗೇ ಮಧ್ಯಾಹ್ನದ ಉಪಾಹಾರ ಸಾಮಗ್ರಿ ಪೂರೈಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯ ವೃದ್ಧಿಸುವುದೂ ಸೇರಿದಂತೆ ವಿವಿಧ ಉದ್ದೇಶದ ‘ವಿದ್ಯಾಗಮ’ ನಿರಂತರ ಕಲಿಕಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಎಂ.ಕೆ. ಶ್ರೀಧರ್‌ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ಯೋಜನೆ ರೂಪಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪಾಠಪ್ರವಚನಗಳತ್ತ ಸೆಳೆಯಲು ‘ವಿದ್ಯಾಗಮ’ ನಿರಂತರ ಕಲಿಕಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ಎಲ್ಲ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿದ್ದಾರೆ. ಕೆಲವರ ಮನೆಯಲ್ಲಿ ದೂರದರ್ಶನಗಳಿದ್ದರೆ, ಕೆಲವರ ಮನೆಗಳಲ್ಲಿ ಫೋನ್‌ ಸೆಟ್‌ಗಳಿವೆ. ಫೋನ್‌ ಇದ್ದರೆ ನೆಟ್‌ ಸಂಪರ್ಕ ಇರುವುದಿಲ್ಲ. ಟಿವಿಗಳಿದ್ದರೆ ವಿದ್ಯುತ್‌ ಸಂಪರ್ಕ ಇರುವುದಿಲ್ಲ. ಹಲವಾರು ಮಕ್ಕಳಿಗೆ ಇದಾವುದರ ಸೌಲಭ್ಯವೂ ಇರುವುದಿಲ್ಲ. ಆದ್ದರಿಂದ ಎಲ್ಲ ಸ್ತರದ ಮಕ್ಕಳ ಕಲಿಕೆಯು ನಿರಂತರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಯೋಜನೆಯ ಉದ್ದೇಶಗಳು:

ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮನೆಗಳಿಗೆ ಮಧ್ಯಾಹ್ನದ ಉಪಾಹಾರ ಸಾಮಗ್ರಿ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮತ್ತು ವಲಸೆ ಮಕ್ಕಳ ಅವಶ್ಯಕತೆಗಳಿಗೆ ವಿಶೇಷ ಆದ್ಯತೆ ನೀಡುವುದು, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರರ ಸಕ್ರಿಯ ತೊಡಗಿಸುವಿಕೆ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಯೋಜನೆಯ ಪ್ರಮುಖ ಅಂಶಗಳು:

ಪ್ರತಿ ಶಾಲೆಯ 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ತರಗತಿಗಳು ರೂಪಿತವಾಗುತ್ತವೆ. ತರಗತಿ ವಿಧ 1-ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದ(ಮೊಬೈಲ್‌ ರಹಿತ) ಮಕ್ಕಳ ತರಗತಿ, ತರಗತಿ ವಿಧ 2- ಇಂಟರ್‌ನೆಟ್‌ ರಹಿತ ಮೊಬೈಲ್‌ ಫೋನ್‌ ಹೊಂದಿರುವ ತರಗತಿ, ತರಗತಿ ವಿಧ 3-ಇಂಟರ್‌ನೆಟ್‌ ಸಹಿತ ಕಂಪ್ಯೂಟರ್‌/ ಟ್ಯಾಬ್‌/ ಸ್ಮಾರ್ಟ್‌ ಫೋನ್‌ ಹೊಂದಿರುವ ತರಗತಿ, 1ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಹಾಗೂ 8 ರಿಂದ 10ನೇ ತರಗತಿ ಮಕ್ಕಳನ್ನು ವಾಸ ಸ್ಥಳದ ಭೌಗೋಳಿಕ ಪ್ರದೇಶವನ್ನು ಆಧರಿಸಿ ಹಂಚಿಕೆಯನ್ನು ಮಾಡಲಾಗುತ್ತದೆ.

ಮಾರ್ಗದರ್ಶಿ ಶಿಕ್ಷಕರು ’ನೆರೆಹೊರೆ’ ಗುಂಪುವಾರು ಮಕ್ಕಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಭೇಟಿ ಮಾಡಿ ಮಕ್ಕಳ ಕಲಿಕಾ ಪ್ರಗತಿ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಚರ್ಚಿಸುವುದು. ವಿದ್ಯಾವಂತ ಯುವಕ/ಯುವತಿಯರನ್ನು ಗುರುತಿಸಿ ಸ್ವಯಂಸೇವಕರನ್ನಾಗಿ ಬಳಸಿಕೊಂಡು ಮಾರ್ಗದರ್ಶಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನೆರೆಹೊರೆ ಗುಂಪಿನ ಮಕ್ಕಳಿಗೆ ಪಾಠ ಪ್ರವಚನ ಬೋಧನಾ ಸಹಾಯ ಪಡೆದುಕೊಳ್ಳುವುದು.

ಲಭ್ಯತೆಯ ಆಧಾರದಲ್ಲಿ ಮಾರ್ಗದರ್ಶಿ ಶಿಕ್ಷಕರು ಜೂಮ್‌/ ಸಿಸ್ಕೋ ವೆಬೆಕ್ಸ್‌/ ಗೂಗಲ್‌ ಕ್ಲಾಸ್‌ ರೂಮ್‌ ಮುಂತಾದ ಇಂಟರ್ನೆಟ್‌ ಅಪ್ಲಿಕೇಷನ್‌ (ಅ್ಯಪ್‌)ಗಳನ್ನು ಬಳಸಿ ವಿಡಿಯೋ ಕಾನ್ಫರೆನ್ಸ್‌ ಬೋಧನೆ ಮಾಡುತ್ತಾರೆ.
1ರಿಂದ 10ನೇ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಪಾಠಗಳನ್ನು ಪರಿಣಿತ ಶಿಕ್ಷಕರ ಬೋಧನೆಯ ವಿಡಿಯೋ ತಯಾರಿಸಿ ಯು-ಟ್ಯೂಬ್‌ ಚಾನಲ್‌ ’ಮಕ್ಕಳ ವಾಣಿ’ ಯಲ್ಲೂ ಅಪ್‌ಲೋಡ್‌ ಮಾಡಲಾಗುವುದು.
 

click me!