ದೇಶದ ನೆಮ್ಮದಿಗೆ ಆರ್‌ಎಸ್‌ಎಸ್‌ ಕಾರಣ: ಜಗದೀಶ ಶೆಟ್ಟರ್‌

By Kannadaprabha News  |  First Published Oct 8, 2021, 3:37 PM IST

*  ರೈತರ ಹೆಸರಿನಲ್ಲಿ ಹೋರಾಟ ಮಾಡಿದರೆ ಯಾವುದೇ ಪ್ರಯೋಜನ ಆಗಲ್ಲ
*  ಆರ್‌ಎಸ್‌ಎಸ್‌ ಇಲ್ಲದಿದ್ದರೆ ನಮ್ಮ ದೇಶ ಎರಡು ಮೂರು ಪಾಕಿಸ್ತಾನವಾಗುತ್ತಿತ್ತು 
*  ಜನತೆಯ ತೊಂದರೆಗೆ ಸ್ಪಂದಿಸುವ ಮೂಲಕ ಜನಸೇವೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು 
 


ಹುಬ್ಬಳ್ಳಿ(ಅ.08): ಆರ್‌ಎಸ್‌ಎಸ್‌(RSS) ಇಲ್ಲದಿದ್ದರೆ ಇಲ್ಲಿ ವರೆಗೆ ನಮ್ಮ ದೇಶ ಎರಡು ಮೂರು ಪಾಕಿಸ್ತಾನವಾಗುತ್ತಿತ್ತು(Pakistan) ಎಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar), ದೇಶದಲ್ಲಿ ಜನತೆ ನೆಮ್ಮದಿಯಿಂದ ಇರಲು ಸಂಘವೇ ಕಾರಣ ಎಂದು ಹೇಳಿದ್ದಾರೆ.

ಹು-ಧಾ ಸೆಂಟ್ರಲ್‌ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ಜನ್ಮದಿನ ನಿಮಿತ್ತ ನಡೆದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹಾಗೂ ಸಿದ್ದರಾಮಯ್ಯ(Siddaramaiah) ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಸಂಘ, ಬಿಜೆಪಿ(BJP) ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಂಘಕ್ಕೆ ಅವರ ಮಾತಿನಿಂದ ಯಾವುದೇ ಹಾನಿ ಇಲ್ಲ. ಜನ ಎಲ್ಲವನ್ನೂ ಗಮನಿಸುತ್ತಾರೆ. ಇವತ್ತು ಸಮಾಜದ ಜನ ನೆಮ್ಮದಿಯಿಂದ ಇರಲು ಸಂಘ ಹಾಗೂ ಕಾರ್ಯಕರ್ತರ ಸೇವೆಯೇ ಕಾರಣ. ನಿಮ್ಮಿಬ್ಬರ ಹೇಳಿಕೆ ನೋಡಿ ಜನ ಮತ ಹಾಕಲಾರರು. ಇದರಿಂದ ನೀವೂ ಉದ್ಧಾರ ಆಗಲ್ಲ. ಸಂಘ ಟೀಕಿಸಿದರೆ ಮತ ಬೀಳುತ್ತದೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದರು.

Tap to resize

Latest Videos

ಪ್ರಧಾನಿ ನರೇಂದ್ರ ಮೋದಿಯವರ ಸುಧೀರ್ಘ ಆಡಳಿತದ ಅವಧಿಯಲ್ಲಿ ಎಂದಿಗೂ ಆಡಳಿತ ವಿರೋಧಿ ಅಲೆ ಕಂಡು ಬರದಿರುವುದು ಸಮರ್ಥ ಆಡಳಿತಕ್ಕೆ ಸಾಕ್ಷಿ. ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದೆ ಸರ್ಕಾರ ನಡೆಸಲಾಗಿದೆ. ಕಾಂಗ್ರೆಸ್‌(Congress) ಹಾಗೂ ಇತರೆ ಪಕ್ಷಗಳಿಗೆ ಮುಂದೆ ಕೂಡ ವಿರೋಧ ಪಕ್ಷದ ಸ್ಥಾನದಲ್ಲೆ ಮುಂದುವರಿಯುವ ಭೀತಿ ಇದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ರೈತರ ಹೆಸರಲ್ಲಿ ಸ್ಪಾನ್ಸರ್‌ ಹೋರಾಟ ಮಾಡಿಸುತ್ತಿದೆ. ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತ ಸಾಗಿದರೆ ಯಾವುದೇ ಪ್ರಯೋಜನ ಆಗಲ್ಲ. ಬದಲಾಗಿ ವ್ಯವಸ್ಥೆ ಮತ್ತಷ್ಟು ಹದಗೆಡಲು ಕಾರಣವಾಗುತ್ತದೆ. ಸ್ಪಾನ್ಸರ್‌ ಹೋರಾಟದಲ್ಲಿ ಹೋಗುವ ರೈತರಿಗೂ ಒಳ್ಳೆಯದಾಗಲ್ಲ ಎಂದರು.

'ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಆರ್‌ಎಸ್ಸೆಸ್‌ ಆಡಳಿತ ಹೆಚ್ಚು'

ಸರ್ಕಾರ ರೈತರ(Farmers) ಪರವಾಗಿದೆ. ಯಾವುದೇ ಸರ್ಕಾರ ಕೈಗೊಳ್ಳದಂತ ಖಾತೆಗೆ ನೇರವಾಗಿ ಹಣ ಹೋಗುವ ನಿರ್ಧಾರವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಕೈಗೊಂಡಿದೆ. ಇದನ್ನು ರೈತರು ಮರೆಯಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊರೋನಾ(Coronavirus) ಎರಡು ಅಲೆಯನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ. ಆರ್ಥಿಕ, ಸಾಮಾಜಿಕವಾಗಿ ಬೀರಬಹುದಾದ ದುಷ್ಪರಿಣಾಮವನ್ನು ದೇಶ ಹಿಮ್ಮೆಟ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಜಾನೆಯನ್ನು ತುಂಬಿಸುವುದೇ ಕಷ್ಟವಾದ ಸಂದರ್ಭದಲ್ಲಿ ಇಡೀ ದೇಶಕ್ಕೆ ಉಚಿತವಾಗಿ ಲಸಿಕೆಯನ್ನು ನೀಡಲಾಯಿತು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪಕ್ಷದ ಕಾರ್ಯಕರ್ತರು ನಿರಂತರವಾಗಿ ಜನತೆಯ ಸಂಪರ್ಕದಲ್ಲಿ ಇರುತ್ತಾರೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ ಜನತೆಯ ತೊಂದರೆಗೆ ಸ್ಪಂದಿಸುವ ಮೂಲಕ ಜನಸೇವೆ ಮಾಡುತ್ತಾರೆ ಎಂದರು.

ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷ ಸಂತೋಷ ಚೌಹಾಣ್‌, ಅಭಿಯಾನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದಿಸಿ ಸೆಂಟ್ರಲ್‌ ಕ್ಷೇತ್ರದಿಂದ 10200 ಪತ್ರಗಳನ್ನು ಬರೆಯಲಾಗಿದೆ. ನಮೋ ಆ್ಯಪ್‌, ಲಸಿಕಾ ಅಭಿಯಾನ, ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಏರ್ಪಡಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಮಾಜಿ ಸಚಿ​ವ ಜಗದೀಶ ಶೆಟ್ಟರ್‌ ಗೋಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು. ಈ ವೇಳೆ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಮುಖಂಡರಾದ ಗೋಪಾಲ ಬದ್ದಿ, ರಾಜಕುಮಾರ ಬಸವಾ ಇದ್ದರು. ಮಹೇಶ ಬುರ್ಲಿ ಸ್ವಾಗತಿಸಿದರು.
 

click me!