ಹೂಳೆತ್ತುವಲ್ಲಿ ಶೇ.100 ಅವ್ಯವಹಾರ: ಸಿದ್ದರಾಮಯ್ಯ

By Girish Goudar  |  First Published May 20, 2022, 5:13 AM IST

*   80 ಕೋಟಿ ವೆಚ್ಚ ಎಂದು ಬಿಬಿಎಂಪಿ ಲೆಕ್ಕ
*  ಹಾಗಾದರೆ ಮಳೆ ಅನಾಹುತ ಹೇಗಾಯಿತು?
*  ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ
 


ಬೆಂಗಳೂರು(ಮೇ.20): ರಾಜ್ಯ ಸರ್ಕಾರದ ಇಚ್ಛಾ ಶಕ್ತಿ ಕೊರತೆ ಹಾಗೂ ಸ್ಥಳೀಯ ಸಂಸ್ಥೆಗಳ ಸಮನ್ವಯತೆ ಲೋಪದಿಂದ ಬೆಂಗಳೂರು ನಗರದಲ್ಲಿ ಮಳೆ ಅನಾಹುತಗಳು ಹೆಚ್ಚಾಗಿ ಜನರು ನರಳುವಂತಾಗಿದೆ. ಚರಂಡಿಗಳ ಹೂಳೆತ್ತಲು .80 ಕೋಟಿ ಖರ್ಚು ಮಾಡಿರುವುದಾಗಿ ಸುಳ್ಳು ಲೆಕ್ಕ ತೋರಿಸಿದ್ದು, ಕೇವಲ 40 ಪರ್ಸೆಂಟ್‌ ಬದಲಿಗೆ 100 ಪರ್ಸೆಂಟ್‌ ಅವ್ಯವಹಾರ ನಡೆದಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಳೆ ಹಾನಿ ಹಿನ್ನೆಲೆಯಲ್ಲಿ ಶಿವಾಜಿನಗರ ಬ್ರಾಡ್‌ವೇ ಮಳೆ ನೀರು ಕಾಲುವೆ, ಹಫೀಜಿಯಾ ಶಾಲೆ, ಸೆಪ್ಪಿಂಗ್ ರಸ್ತೆ, ಕಾಮರಾಜ ರಸ್ತೆ, ಅಲಸೂರು ಗುಪ್ತಾ ಬಡಾವಣೆ, ಬ್ಯಾಟರಾಯನಪುರ ಹಾಗೂ ಗಾಂಧಿನಗರ ಕ್ಷೇತ್ರದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.

Tap to resize

Latest Videos

Karnataka Politics: ಸಿದ್ದರಾಮಯ್ಯ ದಲಿತ ಸಾಲ ಮನ್ನಾ ಹೇಳಿಕೆಗೆ ಬಿಜೆಪಿ ಕಿಡಿ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿಗಳ ನಿರ್ವಹಣೆಗಾಗಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಅನುದಾನ ಹಾಗೂ ಎಂಜಿನಿಯರ್‌ ಸಿಬ್ಬಂದಿ ಇದ್ದಾರೆ. ಈ ತಂಡ .80 ಕೋಟಿ ವೆಚ್ಚದಲ್ಲಿ ಹೂಳೆತ್ತಿರುವುದಾಗಿ ಹಣ ಬಿಲ್‌ ಮಾಡಿದ್ದಾರೆ. ಆದರೆ ಎಲ್ಲೆಲ್ಲಿ ಹೂಳೆತ್ತಲಾಗಿದೆ? ಎತ್ತಿರುವ ಹೂಳನ್ನು ಗುತ್ತಿಗೆದಾರರು ಎಲ್ಲಿ ವಿಲೇವಾರಿ ಮಾಡಿದ್ದಾರೆ? ಎಂಬ ಲೆಕ್ಕ ಇಲ್ಲ. ಹೀಗಾಗಿ ಈ ಹಣವನ್ನು ಯಾರಾರ‍ಯರು ನುಂಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕು. ಇದು ಕೇವಲ 40 ಪರ್ಸೆಂಟ್‌ ಕಮಿಷನ್‌ ವ್ಯವಹಾರ ಅಲ್ಲ. 100 ಪರ್ಸೆಂಟ್‌ ವ್ಯವಹಾರ ಎಂದು ಕಿಡಿ ಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಶಾಸಕ ರಿಜ್ವಾನ್‌ ಅರ್ಷದ್‌ ಹಾಜರಿದ್ದರು.

ರಿಯಲ್‌ ಎಸ್ಟೇಟ್‌ ಸರ್ಕಾರ

ಶಾಶ್ವತವಾಗಿ ಸಮಸ್ಯೆ ಬಗೆಹರಿಯಲು ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ನಮ್ಮ ಅವಧಿಯಲ್ಲಿ ಅಕ್ರಮ ಕಟ್ಟಡಗಳ ತೆರವು ಪ್ರಾರಂಭಿಸಿದ್ದೆವು. ಆದರೆ ಈ ಸರ್ಕಾರದಲ್ಲಿ ಅಂತಹ ಒಂದೂ ದಿಟ್ಟತನದ ಕ್ರಮ ನಡೆದಿಲ್ಲ. ಪೂರ್ವ ಮುಂಗಾರು ಉತ್ತಮ ಮಳೆ ಸುರಿಸಲಿದ್ದು, ಹವಾಮಾನ ವೈಪರೀತ್ಯವೂ ಜತೆಯಾಗಲಿದೆ ಎಂದು ಬೆಳಗಾವಿ ಅಧಿವೇಶನದಲ್ಲೇ ವಿಚಾರ ಮಂಡಿಸಿದ್ದೆ. ಹವಾಮಾನ ವೈಪರಿತ್ಯದಿಂದ ಕೃಷಿ ಕ್ಷೇತ್ರವಷ್ಟೇ ಅಲ್ಲ, ನಗರಗಳ ಜನರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ನಾವು ಎಚ್ಚರಿಸಿದರೂ ರಿಯಲ್‌ ಎಸ್ಟೇಟ್‌ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಜನಜೀವನ ಧ್ವಂಸಗೊಳ್ಳುವಂತಾಗಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

‘ಮಳೆ ನೀರು ಕಾಲುವೆ ಅಭಿವೃದ್ಧಿ ಮಾಡಿಲ್ಲ’

ಬೆಂಗಳೂರಿನ ಎಂಟು ವಲಯಗಳೂ ಸೇರಿದಂತೆ ಸುಮಾರು 700 ಪಾಯಿಂಟ್‌ಗಳಿವೆ. ಈ ಪಾಯಿಂಟ್‌ಗಳಲ್ಲಿ ಮಾತ್ರವೇ ರಾಜಕಾಲುವೆ, ಮಳೆ ನೀರು ಕಾಲುವೆಗಳ ಸಮಸ್ಯೆ ಇದೆ. ಇವುಗಳನ್ನು ವೈಜ್ಞಾನಿಕವಾಗಿ ಬಗೆಹರಿಸಿದ್ದರೆ ಸಮಸ್ಯೆ ನಿವಾರಣೆಯಾಗುತ್ತಿತ್ತು. ಇದಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ನಾನು .1217 ಕೋಟಿ ಮೊತ್ತದಲ್ಲಿ 212 ಕಿ.ಮೀ ಉದ್ದದ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡಲು ಪ್ರಾರಂಭಿಸಿದ್ದೆವು. ನಮ್ಮ ಅವಧಿಯಲ್ಲೇ ಶೇ.50ರಷ್ಟು ಚರಂಡಿ, ಕಾಲುವೆಗಳನ್ನು ಅಭಿವೃದ್ಧಿ ಪಡಿಸಿದ್ದೆವು ಎಂದು ಸಿದ್ದರಾಮಯ್ಯ ತಿಳಿಸಿದರು.

ನಾರಾಯಣಪುರ ಕಾಲುವೆ ಕಾಮಗಾರಿಯಲ್ಲಿ 425 ಕೋಟಿ ಅಕ್ರಮ: ಸದನ ಸಮಿತಿಗೆ ಸಿದ್ದು ಆಗ್ರಹ

ಪ್ರಸ್ತುತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಕಳೆದ ವರ್ಷ ಬೆಂಗಳೂರಿನ ಮಳೆ ನೀರು ಕಾಲುವೆ ಹಾಗೂ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು .1500 ಕೋಟಿ ಖರ್ಚು ಮಾಡುವುದಾಗಿ ತಿಳಿಸಿದ್ದರು. ಇದುವರೆಗೆ ಈ ಕುರಿತು ಒಂದು ರೂಪಾಯಿಯನ್ನೂ ಬಿಡುಗಡೆಯೂ ಮಾಡಿಲ್ಲ, ಖರ್ಚು ಮಾಡಿಲ್ಲ ಎಂದು ಟೀಕಿಸಿದರು.

ನಮ್ಮ ಅವಧಿಯಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದು ಹೇಳುವುದಿಲ್ಲ. ಆದರೆ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸರಿಪಡಿಸುತ್ತಿದ್ದೆವು. ಆದರೆ ಇವರು ಉದ್ದೇಶಪೂರ್ವಕವಾಗಿ ಬಿಬಿಎಂಪಿ ಚುನಾವಣೆ ಮುಂದೂಡಿ, ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಂಗಳೂರನ್ನು ಸಿಂಗಾಪೂರ್‌, ಸ್ಮಾರ್ಚ್‌ಸಿಟಿ ಮಾಡುತ್ತೇವೆ ಎನ್ನುತ್ತಿದ್ದರು. ಯಡಿಯೂರಪ್ಪ ಎರಡು ವರ್ಷದಲ್ಲಿ ಬೆಂಗಳೂರಿನ ಚಿತ್ರವಣವನ್ನೇ ಬದಲಿಸುತ್ತೇನೆ ಎಂದಿದ್ದರು. ಇದೇನಾ ಬದಲಾವಣೆ? ಎಂದು ಪ್ರಶ್ನಿಸಿದರು.
 

click me!