ಊರಲ್ಲಿ ಪಂಚಾಯಿತಿ ಸೇರಿಸಿ ಲಾಯರ್ ಓದಿದೆ/ ಬಡತನದಿಂದ ಬಂದವರು ಮಾತ್ರ ವಿದ್ಯಾರ್ಥಿಗಳಿಗೆ ಯೋಜನೆ ರೂಪಿಸಲು ಸಾಧ್ಯ/ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತು/ ವಕೀಲರಾದ ಕತೆ ಹೇಳಿದ ಸಿದ್ದರಾಮಯ್ಯ
ಬಾಗಲಕೋಟೆ(ಡಿ. 08) ಸಿದ್ದರಾಮಯ್ಯ ತಾವು ಲಾಯರ್ ಆದ ಕತೆಯನ್ನು ಬಾಗಲಕೋಟೆಯಲ್ಲಿ ಬಿಚ್ಚಿಟ್ಟಿದ್ದಾರೆ. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ತಮ್ಮ ಜೀವನದ ಅನೇಕ ವಿಚಾರಗಳನ್ನು ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಲುಮತ ನೌಕರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಪ್ಪ ಹೆಬ್ಬೆಟ್ಟು, ನಮ್ಮ ಅಣ್ತಮಂದಿರೆಲ್ಲಾ ಅರ್ಧಂಬರ್ಧ ಓದಿದ್ರು ಸಿದ್ದರಾಮಯ್ಯ ಹಣೆಯಲ್ಲಿ ಸಿಎಂ ಆಗ್ತಿನಿ ಅಂತ ಬರ್ದಿತ್ತು ನಮ್ಮ ತಮ್ಮಂದಿರ ಹಣೆಯಲ್ಲಿ ಬರೆಯಲಿಲ್ಲ ಅಂತ ಅಲ್ಲ.. ಇದನ್ನೆಲ್ಲಾ ಬುದ್ಧಿವಂತರು ಹೇಳ್ತಾರೆ.. ನಾನು ಲಾಯರ್ ಓದೋಕೆ ಹೋದ್ರೆ ಶಾನಭೋಗರು ಒಪ್ಪಲಿಲ್ಲ ಎಂದರು.
ನಮ್ಮಪ್ಪ ಕುರುಬರ ಲಾಯರ್ ಆಗೋದಿಲ್ಲ ಅಂತ ಹೇಳಿದ್ರು. ಊರಲ್ಲಿ ಪಂಚಾಯತಿ ಸೇರಿಸಿ ನಾನು ಲಾಯರ್ ಓದಿದೆ. ಕೊನೆಗೆ ನನಗೆ ಲಾಯರ್ ಬೇಡ ಅಂತ ಶಾನಭೋಗ ನನ್ನ ಬಳಿ ಬಂದ. ಚನ್ನಪ್ಪಯ್ಯ ನನ್ನ ಮುಂದೆ ವಿಟ್ನೆಸ್ ಆಗಿದ್ದ, ಆತನನ್ನ ಮೂರು ಗಂಟೆ ವಿಚಾರಣೆ ಮಾಡಿಸಿದ್ದೆ. ಬಳಿಕ ಶಾನಭೋಗರಿಗೆ ಏನ್ರಿ ಕುರುಬರಿಗೆ ಲಾಯರ್ ಗಿರಿ ಮಾಡೋಕಾಗತ್ತ ಅಂತ ಕೇಳಿದ್ದೇ ಎಂದು ಅಂದಿನ ದಿನಮಾನಗಳನ್ನು ವಿವರಿಸಿದರು.
ಸಿದ್ದರಾಮಯ್ಯ ಪೂರ್ಣ ಕಾಂಗ್ರೆಸ್ಸಿಗರಲ್ಲ, ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ
ಪ್ರತಿಭೆ ಯಾರಪ್ಪನ ಮನೆ ಸ್ವತ್ತಲ್ಲ. ಕುರಿಯೋನಿಗ್ಯಾಕೆ ಓದು ಅಂತಿದ್ರು. ಈಗ ಕಾಲ ಹಾಗಿಲ್ಲ. ಎಲ್ಲರೂ ಓದಬಹುದು. ಅಂಬೇಡ್ಕರ್ ಹುಟ್ಟದೆ ಇದ್ದಿದ್ರೆ ಸಂವಿಧಾನ ಬರುತ್ತಿರಲಿಲ್ಲ. ಅಂಬೇಡ್ಕರ್ ಸಂವಿಧಾನದಿಂದಲೇ ನಾನು ಸಚಿವ, ಸಿಎಂ ಆದೆ, ಇಲ್ಲದೆ ಹೋದ್ರೆ ಇಂದಿನ ಪ್ರಧಾನಿಯೂ ಸಹ ಪ್ರಧಾನಿ ಆಗ್ತಿರಲಿಲ್ಲ ಎಂದರು
ವಿದ್ಯೆ ಯಾರ ಸ್ವತ್ತೂ ಅಲ್ಲ. ಇಂದು ಸಮಾಜದಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡಿರೋದು ಹೆಮ್ಮೆ ತರುವ ವಿಚಾರ. ನಮ್ಮ ಜಾತಿ ವ್ಯವಸ್ಥೆ ಹಿನ್ನೆಲೆ ಶೂದ್ರರು ವಿದ್ಯೆಯಿಂದ ದೂರ ಉಳಿದ್ರು. ಬ್ರಿಟಿಷರ ಕಾಲದಿಂದ ಎಲ್ಲರಿಗೂ ವಿದ್ಯೆ ಸಿಗಲಾರಭಿಸಿತು. ಸಂವಿಧಾನದಲ್ಲಿ ಶಿಕ್ಷಣ ಕಡ್ಡಾಯ ಅಂತ ಮಾಡಲಾಯಿತು. ನಾನು ಶಾಲೆಗೆ ಸೇರಿರಲಿಲ್ಲ.. 5ನೇ ತರಗತಿಗೆ ಸೇರಿದೆ..1 ರಿಂದ 4 ಓದಿಲ್ಲ. ಮರಳಿನ ಮೇಲೆ ಅಕ್ಷರಾಭ್ಯಾಸ ಕಲಿತೆ. ನಮ್ಮೂರಿನ 22 ಜನರಲ್ಲಿ ಮೂವರನ್ನ ಮಾತ್ರ 5 ನೇ ತರಗತಿಗೆ ರಾಜಪ್ಪ ಮೇಷ್ಟ್ರು ಸೇರಿಸಿದ್ರು. ಇಲ್ಲದೆ ಹೋದ್ರೆ ನಾನು ಲಾಯರ್, ಸಚಿವ, ಸಿಎಂ ಸಹ ಆಗ್ತಿರಲಿಲ್ಲ ಎಂದು ಹೇಳಿದರು.
ಹೀಗಾಗಿಯೇ ವಿದ್ಯಾರ್ಥಿಗಳಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದೇನೆ. ಶ್ರೀಮಂತ ಮನೆತನದಿಂದ ಬಂದವರಿಗೆ ಕಷ್ಟ ಗೊತ್ತಿಲ್ಲ. ನಮ್ಮ ರಾಜಕಾರಣಿಗಳು ಶ್ರೀಮಂತ ಕುಟುಂಬದಿಂದ ಬಂದಿರೋದ್ರಿಂದ ಕಷ್ಟ ಗೊತ್ತಿಲ್ಲ. ಶಾಲೆಯಲ್ಲಿ ಎವರೆಜ್ 50 ರಿಂದ 60 ಅಂಕ ಪಡೆದ್ರು ನಾನು ಸಿಎಂ ಆಗಲಿಲ್ವಾ..? ಜೀವನದಲ್ಲಿ ಛಲದಿಂದ ಏನು ಬೇಕಾದ್ರೂ ಸಾಧಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.