Union Budget 2022: ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಬಜೆಟ್‌ ಪೂರಕ: ಶೆಟ್ಟರ್‌

By Kannadaprabha News  |  First Published Feb 2, 2022, 5:53 AM IST

*  ಎಲ್ಲ ರಾಜ್ಯಗಳ ಆರ್ಥಿಕ ಬಲವರ್ಧನೆಗೆ 1 ಲಕ್ಷ ಕೋಟಿ ದೀರ್ಘಕಾಲದ ಸಾಲ
*  ವೈದ್ಯಕೀಯ ಕ್ಷೇತ್ರ ಮೂಲ ಸೌಕರ್ಯ ಹೆಚ್ಚಿಸಲು ಆಯವ್ಯಯದಲ್ಲಿ ಅನುದಾನ
*  ದೇಶದ ಸರ್ವತೋಮುಖ ಅಭಿವೃದ್ಧಿಯ ನೀಲನಕ್ಷೆ
 


ಹುಬ್ಬಳ್ಳಿ(ಫೆ.02):  ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಂತೆ ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌(Union Budget) ಪೂರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಹೇಳಿದ್ದಾರೆ. ನದಿಜೋಡಣೆಗೆ ಒತ್ತು ನೀಡಿರುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಮಂಡಿಸಿದ 2022- 23ನೇ ಆಯ್ಯವಯ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ದೇಶ ಹಾಗೂ ಒಂದು ತೆರಿಗೆ ಜತೆಗೆ ಒಂದು ದೇಶ ಒಂದು ಮಾರುಕಟ್ಟೆ ಎಂಬ ನೀತಿಗೆ ಬಜೆಟ್‌ ಮುನ್ನುಡಿ ಬರೆದಿದೆ. ಎಲ್ಲ ರಾಜ್ಯಗಳ ಆರ್ಥಿಕ ಬಲವರ್ಧನೆಗೆ 1 ಲಕ್ಷ ಕೋಟಿ ದೀರ್ಘಕಾಲದ ಸಾಲ ನೀಡಲಾಗಿದೆ ಎಂದು ವಿವರಿಸಿದ್ದಾರೆ.

Tap to resize

Latest Videos

Budget 2022: ತೆರಿಗೆದಾರರ ಮೇಲೆ ನೇರ ಪರಿಣಾಮ ಬೀರೋ 8 ಬಜೆಟ್ ಘೋಷಣೆಗಳು ಯಾವುವು? ಇಲ್ಲಿದೆ ಮಾಹಿತಿ

ಕೋವಿಡ್‌(Covid-19) ಸಂದರ್ಭದಲ್ಲೂ ದೇಶದ ಆರ್ಥಿಕತೆ ಹಳಿ ತಪ್ಪದ ಹಾಗೆ ಕೇಂದ್ರ ಸರ್ಕಾರ(Central Government)ಎಚ್ಚರ ವಹಿಸಿದೆ. ಆಯುಷ್ಮಾನ್‌ ಭಾರತ ಯೋಜನೆ ಅನುಷ್ಠಾನದ ಜತೆಗೆ ವೈದ್ಯಕೀಯ ಕ್ಷೇತ್ರ ಮೂಲ ಸೌಕರ್ಯ ಹೆಚ್ಚಿಸಲು ಆಯವ್ಯಯದಲ್ಲಿ ಅನುದಾನ ನೀಡಲಾಗಿದೆ.

ಖಾಸಗಿ ಕಂಪನಿಗಳು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಂಎಸ್‌ಎಂಇ ಹಾಗೂ ಸ್ಟಾರ್ಟ್‌ಅಪ್‌ಗಳ ಸೌಲಭ್ಯಗಳನ್ನು ಪ್ರಸಕ್ತ ವರ್ಷಕ್ಕೂ ಮುಂದುವರಿಸಲಾಗಿದೆ. ಡಿಜಿಟಲ್‌ ಇಂಡಿಯಾ ಯೋಜನೆ ಭಾಗವಾಗಿ ದೇಶದ ಎಲ್ಲ ಪೋಸ್ಟ್‌ ಆಫೀಸ್‌ಗಳನ್ನು ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ. ಪೋಸ್ಟ್‌ ಆಫೀಸ್‌ಗಳು ಎಟಿಎಂ ಹಾಗೂ ಈ ಬ್ಯಾಂಕಿಂಗ್‌(Banking) ಮೂಲಕ ಹಣ ವರ್ಗಾವಣೆ ಮಾಡಲು ಸಶಕ್ತವಾಗಿವೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿದೆ.

ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ನದಿಗಳ ಜೋಡಣೆ ಕೇಂದ್ರ ಬಜೆಟ್‌ ಅವಕಾಶ ನೀಡಿದೆ. ಮೊದಲ ಹಂತವಾಗಿ ಕಾವೇರಿ, ಗೋದಾವರಿ, ಕೃಷ್ಣಾ,ಪೆನ್ನಾರ್‌ ಜೋಡಣೆ ಮಾಡಲಾಗುವುದು. ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿದ್ದು, 3 ವರ್ಷದಲ್ಲಿ 400 ವಂದೇ ಮಾತರಂ ರೈಲು ಹಾಗೂ 100 ಟರ್ಮಿನಲ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಒಟ್ಟಾರೆ ಉತ್ತಮ ಬಜೆಟ್‌ ಇದಾಗಿದೆ ಎಂದು ಬಣ್ಣಿಸಿದ್ದಾರೆ.

ದೇಶದ ಸರ್ವತೋಮುಖ ಅಭಿವೃದ್ಧಿಯ ನೀಲನಕ್ಷೆ

ಆರ್ಥಿಕ ವರ್ಷದ ಮುಂಗಡಪತ್ರವು ಮುಂದಿನ 25 ವರ್ಷಗಳ ದೇಶದಲ್ಲಿ ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ನೀಲನಕ್ಷೆಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(Karnataka Entrepreneurship Institute) ಅಭಿಪ್ರಾಯಪಟ್ಟಿದೆ.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಬಜೆಟ್‌ ಘೋಷಣೆಯ ನೇರ ಪ್ರಸಾರವನ್ನು ವೀಕ್ಷಿಸಿ ನಂತರ ಸಂಸ್ಥೆಯ ಪ್ರಕಟಣೆ ಹೊರಡಿಸಿದೆ.

Union Budget 2022 ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ನಿರಾಣಿ

ಹಣಕಾಸು ಸಚಿವರೇ ಘೋಷಿಸಿದಂತೆ ಈ ನೀಲನಕ್ಷೆಯ ಎಲ್ಲ ಆಯಾಮಗಳನ್ನು ಕ್ರೋಢೀಕರಿಸಿ ಈ ಮುಂಗಡಪತ್ರ ಮಂಡಿಸಲಾಗಿದೆ. ಇದು ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸ್ವಾಗತಾರ್ಹವಾದ ಮುಂಗಡ ಪತ್ರವಾಗಿದೆ.
ಮಹಿಳೆಯರ(Woman) ಕಲ್ಯಾಣಕ್ಕಾಗಿ ಗತಿಶಕ್ತಿ ಯೋಜನೆಯಡಿ ಜಾಗತಿಕ ಮಟ್ಟದ ಮೂಲ ಸೌಕರ್ಯಗಳನ್ನು ಹೊಂದಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡಲಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ನಗರಗಳಲ್ಲಿ ಜನವಸತಿ ಹೆಚ್ಚುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಅಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ಘೋಷಿಸಲಾಗಿದೆ. ವಂದೇ ಭಾರತ ರೈಲು ಯೋಜನೆಯಡಿ 400 ಹೊಸ ರೈಲು ಆರಂಭಿಸುವ ಯೋಜನೆಯಿದ್ದು, ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ಬಳಸಿ 2 ಸಾವಿರ ಕಿಮೀ ರೈಲು ನೆಟ್ವರ್ಕ್ ಅಭಿವೃದ್ಧಿಗೊಳಿಸಲಾಗುವುದು. ಇನ್ನಷ್ಟು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಇವುಗಳಿಗೆ ಆದಾಯ ತೆರಿಗೆ ವಿನಾಯಿತಿ ಅವಧಿಯನ್ನು 2023ರ ವರೆಗೆ ವಿಸ್ತರಿಸಲಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸಂಸ್ಥೆ ಅಧ್ಯಕ್ಷ ವಿನಯ ಜೆ. ಜವಳಿ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ, ಮಾಜಿ ಅಧ್ಯಕ್ಷ ವಸಂತ ಲದವಾ, ರಮೇಶ ಎ ಪಾಟೀಲ, ಸಿಎಗಳಾದ ಸಮೀರ ಓಸ್ವಾಲ, ವೈ.ಎಂ. ಖಟಾವಕರ, ವಿನಾಯಕ ಭಟ್‌, ಶೇಷಗಿರಿ ಕುಲಕರ್ಣಿ ಹಾಗೂ ಸಂಸ್ಥೆಯ ಸದಸ್ಯರಾದ ವೀರಣ್ಣ ಕಲ್ಲೂರ, ಎಸ್‌.ಎಂ. ಸೋಮನಗೌಡರ, ಸಿ.ಎನ್‌. ಕರಿಕಟ್ಟಿ, ಜಯಪ್ರಕಾಶ ಟೆಂಗಿನಕಾಯಿ, ಎಂ.ಕೆ. ಪಾಟೀಲ, ರಾಜಾ ದೇಸಾಯಿ ಉಪಸ್ಥಿತರಿದ್ದರು.
 

click me!