* ಅವಿಧೇಯತೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಿ
* ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನ ಹಿಜಾಬ್ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ
* ವಿದ್ಯಾರ್ಥಿಗಳು ವಿದ್ಯಾಕೇಂದ್ರಕ್ಕೆ ಬರುತ್ತಿದ್ದಾರೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದಾರೊ?
ಹುಬ್ಬಳ್ಳಿ(ಫೆ.02): ಹಿಜಾಬ್(Hijab) ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್(Pramod Mutalik), ಸರ್ಕಾರ ವಿಳಂಬ ಮಾಡದೆ, ಅವಿಧೇಯತೆ ತೋರುವವರ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ(Udupi) ಸರ್ಕಾರಿ ಮಹಿಳಾ ಕಾಲೇಜಿನ ಹಿಜಾಬ್ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ. ಇವತ್ತು ಹಿಜಾಬ್ ಬೇಕು ಎನ್ನುವವರು ನಾಳೆ ಬೇರೆ ಬೇಡಿಕೆ ಇಡಬಹುದು. ವಿದ್ಯಾರ್ಥಿಗಳು(Students) ವಿದ್ಯಾಕೇಂದ್ರಕ್ಕೆ ಬರುತ್ತಿದ್ದಾರೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದಾರೊ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ವಿದ್ಯಾಸಂಸ್ಥೆಯಲ್ಲಿ ಎಲ್ಲರಿಗೂ ಒಂದೇ ನಿಯಮಾವಳಿ ಇರುತ್ತದೆ. ಅದನ್ನು ಪಾಲಿಸಬೇಕಾಗುತ್ತದೆ. ವಿನಾಕಾರಣ ವಿವಾದ(Controversy) ಸೃಷ್ಟಿಸುವುದು ಸರಿಯಲ್ಲ. ಅಷ್ಟಕ್ಕೂ ಹಿಜಾಬ್ ಧರಿಸಿಯೇ ಬರುತ್ತೇವೆ ಎಂದಾದರೆ ಅಂಥವರು ಪಾಕಿಸ್ತಾನಕ್ಕೆ ಹೋಗಲಿ. ಅಂಥ ವಿದ್ಯಾರ್ಥಿಗಳ ಮನವಿ ಆಲಿಕೆ ಮಾಡುತ್ತ ಕಾಲಹರಣ ಮಾಡುವ ಬದಲು ಟಿಸಿ ಕೊಟ್ಟು ಕಳಿಸಬೇಕು ಎಂದರು.
undefined
Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
ಇನ್ನು ಕೋವಿಡ್(Covid19) ನಿಯಮಾವಳಿ ಎಲ್ಲೆಡೆ ಸಡಿಲಿಕೆ ಮಾಡಲಾಗಿದೆ. ಬಾರ್, ಕ್ಲಬ್, ಪಬ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಹಿಂದೂಗಳ ಜಾತ್ರೆಗೆ ನಿರ್ಬಂಧ ತೆರವು ಮಾಡದೆ ಇರುವುದು ಎಷ್ಟುಸರಿ? ಕೂಡಲೆ ಸರ್ಕಾರ ಕ್ರಮ ಕೈಗೊಂಡು ಜಾತ್ರೆ, ಹಬ್ಬ ಹರಿದಿನಕ್ಕೆ ಅನುಮತಿ ನೀಡಬೇಕು. ಫೆ. 4ರೊಳಗೆ ಸೂಕ್ತ ತೀರ್ಮಾನ ಪ್ರಕಟಿಸಬೇಕು. ಇಲ್ಲದಿದ್ದರೆ ಫೆ. 4ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗೆ ಘೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಈ ವೇಳೆ ಸಂಘಟನೆ ಕಾರ್ಯದರ್ಶಿ ಮಂಜುನಾಥ ಕಾಟಕರ, ಜಿಲ್ಲಾಧ್ಯಕ್ಷ ಅಣ್ಣಪ್ಪ ದೀವಟಗಿ, ಹುಬ್ಬಳ್ಳಿ ಅಧ್ಯಕ್ಷ ಬಸವರಾಜ ದುರ್ಗದ ಸೇರಿ ಇತರರಿದ್ದರು.
ಮಂತಾತರ ನಿಷೇಧಕ್ಕೆ ಪೂರಕವಾಗಿ ಶ್ರೀರಾಮಸೇನೆಯಿಂದ ಟಾಸ್ಕ್‌ಫೋರ್ಸ್
ಹುಬ್ಬಳ್ಳಿ: ಮತಾಂತರ ನಿಷೇಧ ಕಾನೂನು ಹಿಂದೂಗಳಿಗೆ ಕಣ್ಣೊರೆಸುವ ತಂತ್ರವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರೀರಾಮ ಸೇನಾ ವತಿಯಿಂದ ಟಾಸ್ಕ್‌ಫೋರ್ಸ್ ರಚಿಸಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದರು.
ಕಳೆದ ವರ್ಷದ ಡಿ. 22 ರಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಮ್ಮ ಟಾಸ್ಕ್‌ಫೋರ್ಸ್ ಈ ಕಾನೂನಿಗೆ ಪೂರಕವಾಗಿ ಕೆಲಸ ಮಾಡಲಿದೆ. ಇದರಲ್ಲಿ ವಕೀಲರು, ಮಹಿಳೆಯರು, ಯುವಕರು ಇರಲಿದ್ದಾರೆ. ಮತಾಂತರ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನೆರವು ನೀಡಲಿದ್ದಾರೆ. ಮತಾಂತರ ನಡೆವ ಸ್ಥಳದ ಕುರಿತು, ಯಾರು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಲಿದ್ದೇವೆ ಎಂದರು.
ಕ್ರಿಶ್ಚಿಯನ್(Christian) ಸಮುದಾಯ ವ್ಯವಸ್ಥಿತವಾಗಿ ಮತಾಂತರ ಪ್ರಕ್ರಿಯೆ ನಡೆಸುತ್ತದೆ. ಬಲವಂತ ಮತಾಂತರದ ಮೂಲಕ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ಮಾಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ದಲಿತನಾಗಿದ್ದರೆ, ಕ್ರಿಶ್ಚಿಯನ್ನರ ಪ್ರಕಾರ ಆತ ಇಸಾಯಿ ಧರ್ಮದ ಅನುಯಾಯಿ ಆಗಿರುತ್ತಾರೆ. ಇಂತಹ ನುಸುಳುಕೋರತನ ತಡೆಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಅದಕ್ಕಾಗಿ ಶ್ರೀರಾಮ ಸೇನೆ ಟಾಸ್ಕ್‌ಫೋರ್ಸ್ ಮೂಲಕ ಈ ಕಾನೂನಿಗೆ ಬಲ ತುಂಬಲಿದೆ ಎಂದರು.
ಇನ್ನು ಧರ್ಮಸ್ಥಳ, ಇಸ್ಕಾನ್, ರವಿಶಂಕರ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮ ಸೇರಿ ಇತರೆಡೆ ಹೊಸ ವರ್ಷವನ್ನು ಕೇಕ್ ಕತ್ತರಿಸಿ ಆಚರಣೆ ಮಾಡಲಾಗುತ್ತದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ. ಈ ವರ್ಷ ಏನಾದರೂ ಇದೇ ರೀತಿ ಆಚರಣೆಗೆ ಮುಂದಾದರೆ ಆಕ್ಷೇಪಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪರಮಾತ್ಮಜೀ ಮಹಾರಾಜ ಸ್ವಾಮೀಜಿ, ಅಪ್ಪಣ್ಣ ದಿವಟಗಿ ಸೇರಿ ಇತರರಿದ್ದರು.