ಮುಖ್ಯಮಂತ್ರಿಗಳೇ, ಈ ಬಾರಿ ಒತ್ತುವರಿ ತೆರವು ಕಾರ್ಯವನ್ನು ಮೂರ್ನಾಲ್ಕು ದಿನಗಳು ನಡೆಸಿ ನಿಲ್ಲಿಸಿದರೆ ಆಗುವುದಿಲ್ಲ. ನೀವು ಕಠಿಣವಾಗಿ ವರ್ತಿಸಬೇಕು. ಒತ್ತುವರಿ ಬಗ್ಗೆ ವಿಸ್ತೃತವಾದ ವರದಿ ಪಡೆದು ಕ್ರಮ ಕೈಗೊಳ್ಳಬೇಕು: ಕುಮಾರಸ್ವಾಮಿ
ಬೆಂಗಳೂರು(ಸೆ.15): ನಗರದ ದುಸ್ಥಿತಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದು ಕಾರಣ. ಜತೆಗೆ, ಈಗಿನ ಸರ್ಕಾರದ ನಿರ್ಲಕ್ಷ್ಯದ ಪಾಲೂ ಇದ್ದು, ದಾಖಲೆ ಮಳೆಯ ನೆಪ ಹೇಳಿ ತಪ್ಪಿಸಿಕೊಳ್ಳದೆ ಈಗಲಾದರೂ ಒತ್ತುವರಿ ಬಗ್ಗೆ ವಿಸ್ತೃತ ವರದಿ ಪಡೆದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ನಿಯಮ 69ರಡಿ ಅತಿವೃಷ್ಟಿ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಅವರು, ನೆರೆ ವಿಷಯದಲ್ಲಿ ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ತಿಳಿಸಲಾಗಿದೆ. ಹೀಗಿದ್ದರೂ ವಸತಿ ಪ್ರದೇಶಗಳು ಮುಳುಗುವವರೆಗೂ ಅಧಿಕಾರಿಗಳು ಏಕೆ ಒತ್ತುವರಿ ತೆರವು ಮಾಡಿಲ್ಲ ಎಂದು ಕಿಡಿ ಕಾರಿದರು.
ರಾಜಕಾಲುವೆ, ಕೆರೆ ಒತ್ತುವರಿ ಮಾಡಿದ 600 ಕಟ್ಟಡಗಳಿಗೆ ನೋಟಿಸ್: ತುಷಾರ್ ಗಿರಿನಾಥ್
ಮುಖ್ಯಮಂತ್ರಿಗಳೇ, ಈ ಬಾರಿ ಒತ್ತುವರಿ ತೆರವು ಕಾರ್ಯವನ್ನು ಮೂರ್ನಾಲ್ಕು ದಿನಗಳು ನಡೆಸಿ ನಿಲ್ಲಿಸಿದರೆ ಆಗುವುದಿಲ್ಲ. ನೀವು ಕಠಿಣವಾಗಿ ವರ್ತಿಸಬೇಕು. ಒತ್ತುವರಿ ಬಗ್ಗೆ ವಿಸ್ತೃತವಾದ ವರದಿ ಪಡೆದು ಕ್ರಮ ಕೈಗೊಳ್ಳಬೇಕು. ತೆರವು ವೇಳೆ ಬಡ ಕುಟುಂಬಗಳ ಬಗ್ಗೆ ಮಾನವೀಯತೆಯಿಂದ ವರ್ತಿಸಬೇಕು. ತಮ್ಮದಲ್ಲದ ತಪ್ಪಿಗೆ ಅವರಿಗೆ ಶಿಕ್ಷೆ ಕೊಡದೆ ತಪ್ಪಿತಸ್ಥರ ಅಧಿಕಾರಿಗಳು ಹಾಗೂ ಕಟ್ಟಡ ನಿರ್ಮಾಣದಾರರನ್ನು ಹುಡುಕಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ದುಸ್ಥಿತಿಗೆ ಬಿಡಿಎ ಹೊಣೆ
ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ (ಬಿಡಿಎ) ಕಾರಣ. ಆ ಪ್ರಾಧಿಕಾರಕ್ಕೆ ಒಂದು ಸ್ಪಷ್ಟತೆ ಇಲ್ಲ, ನೀಲನಕ್ಷೆ ಇಲ್ಲ. ಇದ್ದ ಎಲ್ಲಾ ಕೆರೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿ, ಕಾಲುವೆಗಳನ್ನು ಮುಚ್ಚಿ ಬೆಂಗಳೂರು ಸೌಂದರ್ಯವನ್ನು ನಾಶ ಮಾಡಿತು. ಕೆರೆಗಳಿದ್ದಿದ್ದರೆ ಈ ರೀತಿ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿಪಡಿಸಿದ್ದರೇ ನೀರಿನ ಸಮಸ್ಯೆನೇ ಆಗುತ್ತಿರಲಿಲ್ಲ. ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆನೇ ಇರಲಿಲ್ಲ ಎಂದರು.
ಸಿದ್ದರಾಮಯ್ಯ ಸಲಹೆಗೆ ಸಹಮತ
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗಬೇಕಾದರೂ ಮಾಡಿಲ್ಲ. ಈ ಬಗ್ಗೆ ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಅವರ ಮಾತಿಗೆ ನನ್ನ ಸಹಮತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.