ಕೊಯ್ಲು ಮಾಡಿರುವ ಹೆಸರು- ಉದ್ದು ಒಣಗಿಸಲು ಪರದಾಟ, ತೇವಾಂಶ ಕೊರತೆಯಿಂದ ಮಾರಾಟಕ್ಕೂ ತೊಂದರೆ
ಬಸವರಾಜ ಹಿರೇಮಠ
ಧಾರವಾಡ(ಸೆ.15): ನಾಲ್ಕ ಎಕರೆ ಉದ್ದು ಹಾಕಿದ್ದೇ. ಮಳಿ ಸಲುವಾಗಿ ಹಳ್ಳಾ ದಾಟಿ ಹೋಗಿ ಉದ್ದ ಕೀಳಾಕ್ ಆಳೂ ಬರವಾಲ್ರು. ಹಿಂಗಾಗಿ ಮಳ್ಯಾಗ ಹೆಚ್ಚಿನ ಖರ್ಚಾದರೂ ಚಿಂತೆ ಇಲ್ಲ ಎಂದ್ ಉದ್ದು ಕೀಳೋ ದೊಡ್ಡ ಮಶಿನ್ ತಗೊಂಡ ಹೋಗಿ ಪೀಕು ತಕ್ಕೊಂಡ ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಮಳಿ ನಿಲತೈತಿ ಅಂತ ಹಂಗ ಬಿಟ್ಟಿದ್ರ 20 ಚೀಲ ಉದ್ದು ನೀರಾಗ ನಿಂತು ನಮ್ಮ ಬಾಳೆ ಮೂರಾಬಟ್ಟೆ ಆಗತಿತ್ತು...! ಇದು ತಾಲೂಕಿನ ಯಾದವಾಡ ಗ್ರಾಮದ ರೈತ ಮೃತ್ಯುಂಜಯ ಅವರ ಮಾತು.
undefined
15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಒಂದೆಡೆ ಪ್ರವಾಹ ಸೃಷ್ಟಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ, ಇನ್ನೊಂದೆಡೆ ನಿರಂತರ ಮಳೆಯಿಂದ ಗೋಡೆ ನೆನೆದು ನೂರಾರು ಜನರು ಸೂರು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಕೊಯ್ಲಿಗೆ ಬಂದ ಬೆಳೆಗಳು ನಾಶವಾಗಿವೆ. ಕೆಲವೇ ದಿನಗಳಲ್ಲಿ ಬರಬೇಕಾದ ಬೆಳೆಗಳು ನೀರಲ್ಲಿ ನಿಂತು ಕೊಳೆಯುತ್ತಿವೆ. ಅದರಲ್ಲೂ ಕೆಲವು ರೈತರು ಕಷ್ಟಪಟ್ಟು ಹೊಲದಲ್ಲಿನ ಬೆಳೆಗಳನ್ನು ಮನೆಗೆ ತಂದಿದ್ದಾರೆ. ತಂದರೂ ಅವರಿಗೆ ತೇವಾಂಶದ ಕೊರತೆಯಿಂದ ಮಾರಾಟ ಮಾಡಲಾಗದ ಸ್ಥಿತಿ ಉಂಟಾಗಿದೆ.
ಧಾರವಾಡದಲ್ಲಿ ಮಳೆಗೆ ಮನೆಗೋಡೆ ಕುಸಿತ: ಗಾಯಾಳುಗಳನ್ನ ವಿಚಾರಿಸಿದ ತಹಶೀಲ್ದಾರ್
ಧಾರವಾಡ ತಾಲೂಕಿನಲ್ಲಿ ಹೆಸರು, ಉದ್ದು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು ರೈತರು ಮಳೆಯಿಂದ ಸಂಕಷ್ಟಅನುಭವಿಸುತ್ತಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆಯೇ ಕೊಯ್ಲು ಮಾಡಿರುವ ಹೆಸರು ಮತ್ತು ಉದ್ದು ಬೆಳೆಗಾರರು ನಿತ್ಯ ಬಿಸಿಲಿಗಾಗಿ ಕಾಯುವಂತಾಗಿದೆ. ಇನ್ನೇನು ಬಿಸಿಲು ಬಿತ್ತು ಎನ್ನುವಷ್ಟರಲ್ಲಿ ಮಳೆರಾಯನ ಆಗಮನ. ಮಳೆ ಬರುವ ತಡ ಎಲ್ಲಿದ್ದರೂ ಓಡಿ ಬಂದು ತಾಡಪತ್ರಿ ಹೊಚ್ಚಲೇಬೇಕು. ಇಲ್ಲದೇ ಹೋದಲ್ಲಿ ಮತ್ತೆ ಮಳೆಗೆ ಕಾಳು ತೇವವಾಗುವ ಭಯ. ಸದ್ಯ ಹೆಸರು ಮತ್ತು ಉದ್ದಿಗೆ ಕ್ವಿಂಟಲ್‌ಗೆ . 7 ಸಾವಿರಕ್ಕೂ ಹೆಚ್ಚಿನ ಬೆಲೆ ಇದೆ. ಆದರೆ ತೇವಾಂಶದ ಹಿನ್ನೆಲೆಯಲ್ಲಿ ದಲ್ಲಾಳಿಗಳು ಸಹ ತೆಗೆದುಕೊಳ್ಳುತ್ತಿಲ್ಲ. ರೈತರಿಗೆ ಹಣಕಾಸಿನ ತೊಂದರೆಯಾಗಿದ್ದು ಕಡಿಮೆ ದರಕ್ಕೂ ಮಾರಾಟ ಮಾಡಿರುವ ಉದಾಹರಣೆಗಳಿವೆ.
ಇದು ಬೆಳೆ ತೆಗೆದ ರೈತರ ಸಂಕಟವಾದರೆ ಇನ್ನು ಕೆಲವೇ ದಿನಗಳಲ್ಲಿ ಕೊಯ್ಲಿಗೆ ಬಂದ ಬೆಳೆಗಳು ನೀರಲ್ಲಿ ನಿಂತ ಕೊಳೆಯುತ್ತಿವೆ. ಧಾರವಾಡದ ಮಲೆನಾಡು ಭಾಗದ ನಿಗದಿ, ದೇವರ ಹುಬ್ಬಳ್ಳಿ, ಅಂಬ್ಲಿಕೊಪ್ಪ ಹಾಗೂ ಬಯಲು ಸೀಮೆಯ ಅಮ್ಮಿನಬಾವಿ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ ಸುತ್ತಮುತ್ತಲೂ ಮುಂಗಾರು ಬೆಳೆಗಳು ಅಕ್ಷರಶಃ ನೀರಲ್ಲಿ ನಿಂತಿವೆ. ಹೊಲದಲ್ಲಿನ ನೀರು ಬಸಿದು ಹೋಗದ ಹಿನ್ನೆಲೆಯಲ್ಲಿ ಬೆಳೆಗಳು ಕೊಳೆಯುವ ಹಂತಕ್ಕೆ ಬಂದಿದೆ.
ಸೂರು ಕಳೆದುಕೊಂಡರು:
ಧಾರವಾಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ಹಿಂದೆಂದೂ ಬೀಳದಷ್ಟುಮನೆಗಳು ನೆಲಕ್ಕೆ ಉರುಳಿವೆ. ಕಳೆದ ಸೆ. 1ರಿಂದ 13ರ ವರೆಗೆ 31.3 ಮಿಮೀ ವಾಡಿಕೆ ಮಳೆಯ ಪೈಕಿ ಆಗಿದ್ದು 126.4 ಮಿಮೀ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಮನೆಗಳಿರುವ ಕಾರಣ ನಿರಂತರ ಮಳೆಯಿಂದ ನೆನೆದು ಕುಸಿಯುತ್ತಿವೆ. ಬುಧವಾರವಷ್ಟೇ ತಡಕೋಡದಲ್ಲಿ ಎರಡು ಮನೆಗಳ ಗೋಡೆ ಕುಸಿದು ಐವರು ಗಾಯಗೊಂಡಿದ್ದಲ್ಲದೇ ಅವಿಭಕ್ತ ಕುಟುಂಬವೊಂದು ಬೀದಿಗೆ ಬಿದ್ದಿದೆ. ಅಂಕಿ-ಅಂಶಗಳ ಪ್ರಕಾರ ಸೆ. 1ರಿಂದ 14 ದಿನಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 540 ಮನೆಗಳು ಭಾಗಶಃ ಹಾನಿಯಾಗಿದೆ. ಒಟ್ಟಾರೆ ಈ ವರ್ಷದ ಮಳೆಗೆ 1200 ಮನೆಗಳಿಗೆ ಹಾನಿಯಾಗಿದೆ.
ಹುಬ್ಬಳ್ಳಿ-ಧಾರವಾಡ: ನಿರಂತರ ಮಳೆಗೆ ಮತ್ತೆ ಪ್ರವಾಹದ ಭೀತಿ..!
ಬೆಳೆಹಾನಿ, ಮನೆ ಹಾನಿ ಜತೆಗೆ ರಸ್ತೆ, ಸೇತುವೆ, ಅಂಗನವಾಡಿ, ಶಾಲಾ ಕಟ್ಟಡಗಳು ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಧಾರವಾಡದಲ್ಲಿ ತುಪರಿಹಳ್ಳ ಹರಿದು ಮುಂದೆ ನವಲಗುಂದ ತಾಲೂಕು ಸೇರುತ್ತದೆ. ಅದು ಹರಿಯುವ ಹಾರೋಬೆಳವಡಿ, ಕಬ್ಬೇನೂರು ಹಾಗೂ ಸಮೀಪದ ರೈತರ ಹೊಲಗಳಲ್ಲಿ ತೀವ್ರ ನಷ್ಟಮಾಡಿದ್ದು ರೈತರು ಮಮ್ಮಲ ಮರಗುತ್ತಿದ್ದಾರೆ. ಅದೃಷ್ಟವಶಾತ್ ಹಾರೋಬೆಳವಡಿ ಬಳಿ ಕಳೆದ ಬಾರಿ ಮೇಲ್ಸೇತುವೆ ನಿರ್ಮಾಣವಾದ ಕಾರಣ ಪ್ರವಾಹದ ಭೀತಿ ಉಂಟಾಗಿಲ್ಲ. ನೀರು ಸರಾಗವಾಗಿ ಹರಿಯುತ್ತಿದ್ದು ಹೆಚ್ಚೆಂದರೆ ಹೊಲಗಳಿಗೆ ಹಾನಿ ಮಾಡುತ್ತಿದೆ.
ಸೆ. 1 ರಿಂದ ಸೆ. 13ರ ವರೆಗೆ ಆಗಿರುವು ಮಳೆ ಮಿಲಿ ಮೀಟರ್‌ನಲ್ಲಿ
ತಾಲೂಕು ವಾಡಿಕೆ ಆದ ಮಳೆ
ಧಾರವಾಡ 21.3 117.8
ಹುಬ್ಬಳ್ಳಿ 26.4 135.9
ಕಲಘಟಗಿ 37.3 120.8
ಕುಂದಗೋಳ 21.1 150.4
ನವಲಗುಂದ 36.5 101.1
ಹುಬ್ಬಳ್ಳಿ ನಗರ 22.1 82.2
ಅಳ್ನಾವರ 43.5 130.4
ಅಣ್ಣಿಗೇರಿ 46.9 168.9
ಜಿಲ್ಲೆ 31.1 126.4