ಕನಕಪುರದಲ್ಲಿ ಎಸಿ ಕೋರ್ಟ್: ವಕೀಲರ ಹೋರಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲ

By Kannadaprabha News  |  First Published Nov 25, 2023, 8:25 PM IST

ಕನಕಪುರದಲ್ಲಿ ಎಸಿ ಕೋರ್ಟ್ ನಡೆಸುವುದನ್ನು ವಿರೋಧಿಸಿ ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. 


ರಾಮನಗರ (ನ.25): ಕನಕಪುರದಲ್ಲಿ ಎಸಿ ಕೋರ್ಟ್ ನಡೆಸುವುದನ್ನು ವಿರೋಧಿಸಿ ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಭವನಕ್ಕೆ ಆಗಮಿಸಿದ ಕುಮಾರಸ್ವಾಮಿಯವರು ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ ಕನಕಪುರದಲ್ಲಿ ಎಸಿ ಕೋರ್ಟ್ ನಡೆಸುತ್ತಿರುವ ವಿಚಾರವನ್ನು ಸದನದಲ್ಲಿ ಪ್ರಶ್ನಿಸಿ ಜಿಲ್ಲಾ ಕೇಂದ್ರದಲ್ಲಿಯೇ ಅದು ಮುಂದುವರೆಯುವಂತೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಉಪವಿಭಾಗಾಧಿಕಾರಿಗಳು ಕನಕಪುರ ತಾಲೂಕು ಆಡಳಿತ ಸೌಧ ಕಚೇರಿಯಲ್ಲಿ ಕಂದಾಯ ಮೇಲ್ಮನವಿ ಪ್ರಕರಣ ನಡೆಸುವ ಆದೇಶ ಹೊರ ಬಿದ್ದಿದೆ. ಈ ರೀತಿಯ ತೀರ್ಮಾನ ಯಾವ ಜಿಲ್ಲೆಯಲ್ಲಿಯೂ ಉಪವಿಭಾಗಾಧಿಕಾರಿಗಳ ಮಟ್ಟದಲ್ಲಿ ನಡೆದಿಲ್ಲ. ಇದು ಅಧಿಕಾರಿಗಳ ಹುಡುಗಾಟಿಕೆಯಾದರೆ, ಸರ್ಕಾರದ ತುಘಲಕ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಕನಕಪುರದಲ್ಲಿ ಎಸಿ ಕೋರ್ಟ್ ನಡೆಸಲು ಸರ್ಕಾರ ಅಥವಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರ. ಇಲ್ಲವೆ ಉಪವಿಭಾಗಾಧಿಕಾರಿಗಳ ಸ್ವಯಂ ನಿರ್ಧಾರವೊ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಏಕಾಏಕಿ ತೀರ್ಮಾನ ಮಾಡಿರುವುದರಿಂದ ಬೇರೆ ತಾಲೂಕುಗಳಲ್ಲಿಯೂ ಎಸಿ ಕೋರ್ಟ್ ನಡೆಸುವಂತೆ ಒತ್ತಾಯ ಕೇಳಿ ಬರಬಹುದು. 

Tap to resize

Latest Videos

ಎಂಪಿ ಚುನಾವಣೆವರೆಗೂ ಸರ್ಕಾರದ ಜಾತಿಗಣತಿ ನಾಟಕ: ಎಚ್‌ಡಿಕೆ

ಹಾಗಾಗಿ ಈ ವಿಚಾರವನ್ನು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿ ಚರ್ಚೆ ಮಾಡುವುದಾಗಿ ತಿಳಿಸಿದರು. ಕನಕಪುರ ತಾಲೂಕಿನ ಭೂ ವ್ಯಾಜ್ಯಗಳ ದಾಖಲೆಗಳು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇದೆ. ಆದರೆ, ಸರ್ಕಾರಿ ಕಚೇರಿಯಲ್ಲಿಯೇ ಇತ್ತೀಚೆಗೆ ಹಲವಾರು ಕುಟುಂಬಗಳ ಆಸ್ತಿಯ ದಾಖಲೆಗಳು ಕಳವಾಗಿರುವುದನ್ನು ಗಮನಿಸಿದ್ದೇವೆ. ಇಲ್ಲಿರುವ ದಾಖಲೆಗಳನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿಂದ ಮತ್ತೆ ವಾಪಸ್ ತರಬೇಕಾಗುತ್ತದೆ. ಈ ವೇಳೆ ಯಾವ ದಾಖಲೆಗಳು ಏನಾಗುತ್ತದೆಯೋ ಅಂತ ಹೇಳಲು ಆಗುವುದಿಲ್ಲ ಎಂದು ಕುಮಾರಸ್ವಾಮಿರವರು ದಾಖಲೆಗಳು ಕಳವಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಕ್ಯಾಬಿನೆಟ್ ಡಿಕೆಶಿ ಪಾದದಡಿ ಇದೆ: ಕಾಂಗ್ರೆಸ್ ಸರ್ಕಾರವು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದಿರುವುದನ್ನು ನೋಡಿದರೆ ಇವರೆಲ್ಲ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ? ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಹಾಸನದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿವಕುಮಾರ್ ಅವರ ಪಾದದಡಿ ಇದೆ. ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ. ಈಗಾಗಲೇ ಹಲವಾರು ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪುಗಳಿವೆ. ಈ ರೀತಿ ತನಿಖೆಗಳಿದ್ದಾಗ, ಇದಕ್ಕೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರಲ್ಲದೆ, ಸಿದ್ದರಾಮಯ್ಯ ನವರು ಪಾಪ ಹಲವಾರು ವಕೀಲ ವೃತ್ತಿ ಮಾಡೋರಿಗೆ ಉಪನ್ಯಾಸ ಮಾಡಿರೋರು ಅವರ ಕ್ಯಾಬಿನೆಟ್‌ನಲ್ಲೇ ಇಂತಹ ತೀರ್ಮಾನ ಮಾಡಿರುವುದು ಸರಿಯೇ? ಎಂದು ವ್ಯಂಗ್ಯವಾಡಿದರು.

ಡಿಕೆಶಿ ಸಿಬಿಐ ಕೇಸ್ ವಾಪಸಿನ ನಿರ್ಧಾರಕ್ಕೆ ಛೀಮಾರಿ ಬೀಳಲಿದೆ: ಎಚ್‌.ಡಿ.ಕುಮಾರಸ್ವಾಮಿ

‘ಸುಪ್ರೀಂ’ ಛೀಮಾರಿ ಬೀಳಲಿದೆ: ಇನ್ನು ರಾಮನಗರದಲ್ಲೂ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ,ಸಿಬಿಐ ತನಿಖೆ ನಡೆಸುತ್ತಿ ರೋ ಇಂಥ ಸೂಕ್ಷ್ಮ ವಿಚಾರ ಸುಪ್ರಿಂ ಕೋರ್ಟಿನಲ್ಲಿರುವಾಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆ ಪ್ರಕರಣವನ್ನು ವಾಪಸ್‌ ಪಡೆಯುವ ನಿರ್ಧಾರ ಮಾಡಿರುವುದು ಅಕ್ಷಮ್ಯ. ಇದಕ್ಕೆ ಕೋರ್ಟ್‌ನಿಂದ ಛೀಮಾರಿ ಬಿದ್ದರೂ ಬೀಳಬಹುದು ಎಂದರಲ್ಲದೇ, ಮುಂದಿನ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ ಎಂದರು.

click me!