
ಬೆಂಗಳೂರು / ಮೈಸೂರು (ನ.18): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ (Nagarhole Tiger Reserve) ರಸ್ತೆಬದಿಯಲ್ಲಿ ನಿಂತಿದ್ದ ಕಾಡಾನೆಯನ್ನು ಕೆಣಕಿ, ಕಲ್ಲು ತೂರಿ ವಿಕೃತಿ ಮೆರೆದಿದ್ದ ಬೈಕ್ ಸವಾರರಿಗೆ ಈಗ ಸಂಕಷ್ಟ ಎದುರಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ವತಃ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮಧ್ಯಪ್ರವೇಶಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಬದಿಯಲ್ಲಿ ನಿಂತಿದ್ದ ಕಾಡಾನೆಯ ಮೇಲೆ KA 09 HY 0257 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತೂರಿ ಕಿರುಕುಳ ನೀಡಿದ್ದರು. ಈ ವಿಡಿಯೋವನ್ನು ಹಂಚಿಕೊಂಡಿದ್ದ ‘ಟ್ರಾವೆಲ್ ವೈನಾಡ್’ (Travel Wayanad) ಸಾಮಾಜಿಕ ಜಾಲತಾಣ ಖಾತೆಯು, ಇಂತಹ ಬೇಜವಾಬ್ದಾರಿ ವರ್ತನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಸಿತ್ತು:
ಜೀವಕ್ಕೆ ಕುತ್ತು: ಕೆರಳಿದ ಕಾಡಾನೆ ತಿರುಗಿ ಬಿದ್ದರೆ ವಾಹನಗಳು ಮತ್ತು ಅಮಾಯಕ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬರಲಿದೆ.
ಆನೆಗಳ ಮೇಲೆ ದುಷ್ಪರಿಣಾಮ: ಮನುಷ್ಯರ ಕಿರುಕುಳದಿಂದ ಒತ್ತಡಕ್ಕೊಳಗಾಗುವ ಆನೆಗಳು ಆತ್ಮರಕ್ಷಣೆಗೆ ಮುಂದಾದಾಗ ಅವುಗಳಿಗೆ ‘ಪುಂಡಾನೆ’ ಪಟ್ಟ ಕಟ್ಟಿ ಸೆರೆಹಿಡಿಯಲಾಗುತ್ತದೆ.
ಈ ವೈರಲ್ ವಿಡಿಯೋವನ್ನು ವೈಯಕ್ತಿಕವಾಗಿ ವೀಕ್ಷಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. "ವನ್ಯಜೀವಿಗಳ ಮೇಲೆ ಕ್ರೌರ್ಯ ಎಸಗಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ. ಸಾರ್ವಜನಿಕ ಸುರಕ್ಷತೆ ಹಾಗೂ ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೂಡಲೇ ವಿಡಿಯೋದಲ್ಲಿರುವ ದ್ವಿಚಕ್ರ ವಾಹನ (KA 09 HY 0257) ಹಾಗೂ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆಹಚ್ಚಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 (Wildlife Protection Act, 1972) ರಡಿ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಪಡೆ ಮುಖ್ಯಸ್ಥರಾದ (HoFF) ಬಿ.ಪಿ. ರವಿ ಅವರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.