ಕನ್ನಡ ಪುಸ್ತಕಲೋಕದ ಅತಿದೊಡ್ಡ ಹಬ್ಬ: ನ.20ರಿಂದ 'ವೀರಲೋಕ ಪುಸ್ತಕ ಸಂತೆ - 6'; ರಾಜ್ಯಪಾಲರ ಉಪಸ್ಥಿತಿ!

Published : Nov 18, 2026, 06:20 PM IST
Veeraloka Pustaka Sante

ಸಾರಾಂಶ

ಜಯನಗರದ ಶಾಲಿನಿ ಮೈದಾನದಲ್ಲಿ ನವೆಂಬರ್ 20 ರಿಂದ 22ರವರೆಗೆ 6ನೇ ಆವೃತ್ತಿಯ 'ವೀರಲೋಕ ಪುಸ್ತಕ ಸಂತೆ' ನಡೆಯಲಿದೆ. ಈ ಮೂರು ದಿನಗಳ ಸಾಹಿತ್ಯ ಹಬ್ಬದಲ್ಲಿ ಹೊಸ ಪುಸ್ತಕಗಳ ಬಿಡುಗಡೆ, ಸಾಹಿತ್ಯ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಬೆಂಗಳೂರು (ನ.18): ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಯಾದ ವೀರಲೋಕ ಬುಕ್ಸ್ ವತಿಯಿಂದ ಆಯೋಜಿಸಲಾಗುವ ನಾಡಿನ ಜನಪ್ರಿಯ ಸಾಹಿತ್ಯ ಹಬ್ಬ ‘ವೀರಲೋಕ ಪುಸ್ತಕ ಸಂತೆ’ಯ 6ನೇ ಆವೃತ್ತಿಗೆ ನವೆಂಬರ್ 20ರಂದು ಅದ್ಧೂರಿ ಚಾಲನೆ ಸಿಗಲಿದೆ. ನವೆಂಬರ್ 20, 21 ಮತ್ತು 22ರಂದು ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಈ ಪುಸ್ತಕ ಜಾತ್ರೆ ನಡೆಯಲಿದೆ.

ಕಳೆದ ಐದು ಆವೃತ್ತಿಗಳಲ್ಲಿ ಲಕ್ಷಾಂತರ ಪುಸ್ತಕಗಳನ್ನು ಓದುಗರಿಗೆ ತಲುಪಿಸಲಾಗಿದ್ದು, ಈ ಬಾರಿಯ ಸಂತೆ ಇನ್ನಷ್ಟು ವಿಶೇಷತೆಗಳಿಂದ ಕೂಡಿರಲಿದೆ ಎಂದು ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ನ. 20ರಂದು ರಾಜ್ಯಪಾಲರಿಂದ ಉದ್ಘಾಟನೆ

ನವೆಂಬರ್ 20ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ವೀರಲೋಕದ 5 ನೂತನ ಕೃತಿಗಳನ್ನು (ಕರ್ಕಿ ಕೃಷ್ಣಮೂರ್ತಿ, ಕುಸುಮ ಆಯರಹಳ್ಳಿ, ರಾಘವ್ ವಿಶ್ವಾಸಿ, ನರೇಂದ್ರ ರೈ ದೇರ್ಲ, ಡಾ. ಎಂ. ವೆಂಕಟಸ್ವಾಮಿ ಅವರ ಕೃತಿಗಳು) ಲೋಕಾರ್ಪಣೆ ಮಾಡಲಿದ್ದಾರೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಎಸ್. ದಿವಾಕರ್ ಸಂತೆಯ ಗೌರವ ಪುರಸ್ಕೃತರಾಗಿದ್ದು, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಪುರುಷೋತ್ತಮ ಬಿಳಿಮಲೆ, ಸಾಹಿತಿ ಜೋಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೂರು ದಿನಗಳ ಪ್ರಮುಖ ಆಕರ್ಷಣೆಗಳು:

ಹೊಸ ಪುಸ್ತಕಗಳ ಬಿಡುಗಡೆ: ನ. 20ರ ಸಂಜೆ 10 ಪ್ರಕಾಶನಗಳ 10 ಪುಸ್ತಕಗಳು, ನ. 22ರಂದು ನಟಿ ರಂಜನಿ ರಾಘವನ್ ಅವರಿಂದ ‘ನೇಚರ್ ಆರ್ಕೆಸ್ಟ್ರಾ’ ಕೃತಿ, ‘ಮೇಡ್ ಇನ್ ಜರ್ಮನಿ’ ಅಡಿಯಲ್ಲಿ 3 ಅನುವಾದಿತ ಕೃತಿಗಳು ಹಾಗೂ ವೀರಲೋಕ ದೀಪಾವಳಿ ಕಥಾ ಸ್ಪರ್ಧೆ-2026ರ ಬಹುಮಾನ ವಿತರಣೆ ನಡೆಯಲಿದೆ.

13ಕ್ಕೂ ಹೆಚ್ಚು ಸಾಹಿತ್ಯ ಸಂವಾದ: ಪ್ರತಿಭಾ ನಂದಕುಮಾರ್, ಎಸ್. ದಿವಾಕರ್, ವೈ.ಎಸ್.ವಿ. ದತ್ತ, ಟಿ.ಆರ್. ಅನಂತರಾಮು, ಡುಂಡಿರಾಜ್ ಸೇರಿದಂತೆ ಹಿರಿಯ-ಕಿರಿಯ ಸಾಹಿತಿಗಳಿಂದ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.

ಸಾಂಸ್ಕೃತಿಕ ಸಂತೆ: ಪ್ರತಿದಿನ ಸಂಜೆ ನ. 20ರಂದು ಗಝಲ್ ಹಾಗೂ ಜಾನಪದ ಸಂತೆ, ನ. 21ರಂದು ರಂಗಗೀತೆಗಳ ‘ರಂಗ ಸಂತೆ’ ಮತ್ತು ನ. 22ರಂದು ಎಂ.ಡಿ. ಪಲ್ಲವಿ ತಂಡದಿಂದ ‘ಸಂಗೀತ ಸಂತೆ’ ಆಯೋಜಿಸಲಾಗಿದೆ.

ನ. 22ರಂದು ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ

ನವೆಂಬರ್ 22ರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿ.ಆರ್. ಸುದರ್ಶನ್, ಶಾಸಕ ಎ.ಪಿ. ರಂಗನಾಥ ಮತ್ತು ನಟ ಡಾ. ಶ್ರೀಧರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ‘ಜೀವರತಿ’ ಕಾದಂಬರಿಯ ಲೇಖಕಿ ಜ.ನಾ. ತೇಜಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುಸ್ತಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವೀರಲೋಕ ಬುಕ್ಸ್ ಕೋರಿದೆ. ಹೆಚ್ಚಿನ ಮಾಹಿತಿಗೆ 7022122121 ಅಥವಾ 8861212172 ಸಂಪರ್ಕಿಸಬಹುದು.

PREV
Read more Articles on
click me!

Recommended Stories

ಪಟಾಕಿ ಸಿಡಿದು ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ ಚಿಕಿತ್ಸೆ ಫಲಿಸದೇ ಸಾವು
ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ; ಹಿತೇಂದ್ರ ಚೀಫ್ ಪೊಲೀಸ್ ಕಮಿಷನರ್, ಸೀಮಂತ್ ಕುಮಾರ್ ಎತ್ತಂಗಡಿ!