Kudremukh National Park: ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ನಿಯಂತ್ರಣ ಕಾರ್ಯಾಚರಣೆ

By Kannadaprabha News  |  First Published Feb 23, 2023, 7:56 AM IST

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಬ್ಬಿದ ಕಾಡ್ಗಿಚ್ಚಿನ ಪರಿಣಾಮ ನದಿ, ಹೊಳೆಗಳಲ್ಲಿ ಧಿಡೀರನೆ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಇನ್ನೊಂದೆಡೆ ಬೆಂಕಿ ಹತೋಟಿಗೆ ಹರಸಾಹಸ ನಡೆಯುತ್ತಿದೆ.


ಬೆಳ್ತಂಗಡಿ (ಫೆ.23) : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಬ್ಬಿದ ಕಾಡ್ಗಿಚ್ಚಿನ ಪರಿಣಾಮ ನದಿ, ಹೊಳೆಗಳಲ್ಲಿ ಧಿಡೀರನೆ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಇನ್ನೊಂದೆಡೆ ಬೆಂಕಿ ಹತೋಟಿಗೆ ಹರಸಾಹಸ ನಡೆಯುತ್ತಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ(Kudremukh National Park)ದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ(Urjalubetta), ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪರಿಸರವನ್ನು ವ್ಯಾಪಿಸಿರುವ ಬೆಂಕಿ(Forest fire) ಹತೋಟಿಗೆ ತರಲು ವನ್ಯಜೀವಿ ವಿಭಾಗ ಹರಸಾಹಸ ನಡೆಸುತ್ತಿದೆ. ಬೆಂಕಿ ಕಾಣಿಸಿಕೊಂಡಿರುವ ಪ್ರದೇಶ ಕುದುರೆಮುಖಕ್ಕೆ ಸಮೀಪವಾದರೂ ಅದು ಬೆಳ್ತಂಗಡಿ(Beltangady) ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದೆ. ಬೆಂಕಿ ಬಿದ್ದಿರುವ ಪ್ರದೇಶಕ್ಕೆ ಏಳೆಂಟು ಕಿಮೀ. ದೂರವನ್ನು ತಂಡವು ಟ್ರಕ್ಕಿಂಗ್‌ ಮೂಲಕ ಪಯಣಿಸಬೇಕು. ಮಂಗಳವಾರದಿಂದ ಇಲ್ಲಿ ಬೆಂಕಿ ಹತೋಟಿಗೆ ತರಲು ಪ್ರಯತ್ನ ನಡೆದಿದೆ. ಬೆಂಕಿ ಉಂಟಾಗಿರುವ ಪ್ರದೇಶಕ್ಕೆ ತೆರಳಬೇಕಾದರೆ ಗುಡ್ಡ, ಬೆಟ್ಟಹತ್ತಿ ಹೋಗಲು ಹಲವು ತಾಸು ಸಮಯಬೇಕು. ಇಂತಹ ದುರ್ಗಮ ಪ್ರದೇಶದಲ್ಲಿ ಬುಧವಾರವೂ ಬೆಂಕಿ ನಂದಿಸುವ ಕಾರ್ಯ ಭರದಿಂದ ನಡೆದಿದೆ.

Tap to resize

Latest Videos

ಪಾದಯಾತ್ರಿಗಳಿಂದ ಪಶ್ಚಿಮ ಘಟ್ಟಗಳ ಸಾಲು ಚಾರ್ಮಾಡಿ ಘಾಟಿಯಲ್ಲಿ ರಾಶಿ-ರಾಶಿ ಕಸ!

ಕುದುರೆಮುಖ ಭಾಗದಿಂದ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹುಲ್ಲುಗಾವಲು ವ್ಯಾಪ್ತಿಯ ಅಲ್ಲಲ್ಲಿ ಬೆಂಕಿ ಪಸರಿಸಿರುವ ಕುರಿತು ಮಾಹಿತಿ ಇದೆ. ಮಲವಂತಿಗೆ ಗ್ರಾಮದ ಕೊಲ್ಲಿ ಪ್ರದೇಶದಲ್ಲಿ, ಚಾರ್ಮಾಡಿ ಪರ್ಲಾಣಿ ಪರಿಸರ ಹಾಗೂ ಕೊಟ್ಟಿಗೆಹಾರ ವಿಭಾಗದ ಅಣ್ಣಪ್ಪ ಬೆಟ್ಟಸಮೀಪ ಉಂಟಾಗಿದ್ದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ ಎಂದು ಅರಣ್ಯ ಇಲಾಖೆ(Forest depertment) ತಿಳಿಸಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್‌ಎಫ್‌ ಒ ಸ್ವಾತಿ, ಡಿಆರ್‌ಎಫ್‌ಒ ಕಿರಣ್‌ ಪಾಟೀಲ…, ರಂಜಿತ್‌, ರವೀಂದ್ರ ಅಂಕಲಗಿ, ನಾಗೇಶ್‌, ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು, ಭರತೇಶ್‌, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ 50ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.

ಹುಲ್ಲಿಗೆ ಹಿಡಿದ ಬೆಂಕಿ: ಹುಲ್ಲುಗಾವಲು ಪ್ರದೇಶದಲ್ಲೇ ಪಸರಿಸಿರುವ ಬೆಂಕಿ ಬಹಳ ವೇಗವಾಗಿ ವ್ಯಾಪಿಸುತ್ತಿದೆ.ಇಂತಹ ಕಡೆ ಇದನ್ನು ಹತೋಟಿಗೆ ತರುವುದು ಸುಲಭವಲ್ಲ.ಒಂದು ಕಡೆ ಬೆಂಕಿ ಆರಿದರೆ ಇನ್ನೊಂದು ಕಡೆಯಿಂದ ಬೆಂಕಿ ಹಿಡಿಯುತ್ತದೆ. ಆದರೆ ಕೆಲವೆಡೆ ಬೆಂಕಿ ರೇಖೆ ನಿರ್ಮಿಸಿರುವುದು ಹೆಚ್ಚಿನ ಹತೋಟಿಗೆ ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ. ಒಣ ಹುಲ್ಲಿಗೆ ಬೆಂಕಿ ಹಿಡಿದಿರುವ ಕಾರಣ ಮರಮಟ್ಟುಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಬೆಂಕಿ ಇನ್ನಷ್ಟುಪಸರಿಸುತಿದ್ದರೆ ಮರಮಟ್ಟುಗಳು ನಾಶವಾಗುವ ಸಾಧ್ಯತೆ ಇತ್ತು. ವನ್ಯಜೀವಿ ವಿಭಾಗದ ಸಕಾಲಿಕ ಕೆಲಸದಿಂದ ಬೆಂಕಿ ಕಾಡಿಗೆ ಪಸರಿಸುವುದು ತಪ್ಪಿದೆ.

ವನ್ಯಜೀವಿ(Wildlife)ಗಳಿಗೆ ಸಂಕಷ್ಟ: ಬೆಂಕಿಯಿಂದ ಅರಣ್ಯದಲ್ಲಿ ವಾಸಿಸುವ ಅನೇಕ ವನ್ಯಜೀವಿಗಳಿಗೆ ಸಂಕಷ್ಟಬಂದೊದಗುತ್ತದೆ ಕೆಲವು ಸರೀಸೃಪಗಳು ನಾಶವಾಗಿರುವ ಸಾಧ್ಯತೆಯೂ ಇದೆ. ಬೆಂಕಿಯ ಶಾಖಕ್ಕೆ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿನತ್ತ ಬರುವ ಸಾಧ್ಯತೆಯೂ ಇದೆ. ಇದಕ್ಕೆ ಪೂರಕ ಎಂಬಂತೆ ಮಂಗಳವಾರ ರಾತ್ರಿ ಮಲವಂತಿಗೆ ಸಮೀಪದ ಕಡಿರುದ್ಯಾವರ ಗ್ರಾಮದ ಎರ್ಮಾಲ್‌ ಪಲ್ಕೆ ಪರಿಸರದಲ್ಲಿ ಕಾಡಾನೆಗಳು ಘೀಳಿಡುವ ಸದ್ದು ಕೇಳಿ ಬಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನವಿಲ್ಲ: ಧಗಧಗನೇ ಉರಿಯುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ಇಲಾಖೆ ಇಂದಿಗೂ ಕತ್ತಿ,ಕೋಲು, ಸೊಪ್ಪುಗಳ ಹಳೆ ಪದ್ಧತಿಯನ್ನು ಬಳಸುತ್ತಿದೆ, ವಿನಾ ಯಾವುದೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿಲ್ಲ. ಬೆಂಕಿ ನಂದಿಸುವ ಕಾರ್ಯಕ್ಕೆ ಸಿಬ್ಬಂದಿಗೆ ಬೇಕಾದ ಶೂ, ಜಾಕೆಟ್‌, ಬೆಂಕಿ ರಕ್ಷಕ ವ್ಯವಸ್ಥೆಗಳು ಇಲ್ಲ. ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಅರಣ್ಯ ಪ್ರದೇಶದ ಮುಖ್ಯ ರಸ್ತೆಗಿಂತ ಹಲವು ಕಿಮೀ ದೂರದಲ್ಲಿ ಬೆಂಕಿ ಕಾಣಿಸಿಕೊಂಡರೆ ಅಲ್ಲಿ ಯಾವುದೇ ವಾಹನ ಅಥವಾ ಅಗ್ನಿಶಾಮಕ ದಳವು ಹೋಗಲು ಸಾಧ್ಯವಿಲ್ಲ. ಸಿಬ್ಬಂದಿ ಕಾಲ್ನಡಿಗೆ ಮೂಲಕವೇ ತೆರಳ ಬೇಕಾಗಿದ್ದು ಅವರು ತಲುಪುವಾಗ ಬೆಂಕಿ ಸಾಕಷ್ಟುಪರಿಸರವನ್ನು ಪಸರಿಸುತ್ತದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂರು ಕಡೆಗಳಲ್ಲಿ ಗುಡ್ಡಗಳ ಹುಲ್ಲುಗಾವಲು ಪ್ರದೇಶದಲ್ಲಿ ಬೆಂಕಿ ಕಂಡುಬಂದಿದ್ದು, ಇದರಲ್ಲಿ ಬೆಳ್ತಂಗಡಿ ವಿಭಾಗದ ಎರಡು ಗುಡ್ಡಗಳಲ್ಲಿ ಶೇ. 80ಕ್ಕಿಂತ ಅಧಿಕ ಬೆಂಕಿ ನಂದಿಸುವ ಕೆಲಸ ನಿರ್ವಹಿಸಲಾಗಿದ್ದು ಬೆಂಕಿ ಇನ್ನಷ್ಟುಪಸರಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಕುದುರೆಮುಖ ಪ್ರದೇಶದ ಕಡೆಯಿಂದಲೂ ಬೆಂಕಿ ಆರಿಸುವ ಕೆಲಸ ನಡೆಯುತ್ತಿದೆ.ಅಗತ್ಯ ಬಿದ್ದರೆ ಗುರುವಾರವು ಕಾರ್ಯಾಚರಣೆ ನಡೆಯಲಿದೆ

ಸ್ವಾತಿ,ಆರ್‌.ಎಫ್‌.ಒ. ವನ್ಯಜೀವಿ ವಿಭಾಗ, ಬೆಳ್ತಂಗಡಿ.

ಅರಣ್ಯಕ್ಕೆ ಬೆಂಕಿ ಅಪಾರ ಹಾನಿ:

ಯಲ್ಲಾಪುರ (ಫೆ.23) : ಬುಧವಾರ ಮಧ್ಯಾಹ್ನ ತಾಲೂಕಿನ ಎಲ್ಲರೂ ಜಾತ್ರಾ ವೈಭವ ಸನ್ನಿವೇಷದಲ್ಲಿ ಇದ್ದರೆ ಪೊಲೀಸರ ನಿರ್ಲಕ್ಷ್ಯದಿಂದಾಗಿ ಬಿಸಗೋಡ ನಿಸರ್ಗಮನೆ(Bisagodu nisargamane) ಕಿರಿದಾದ ರಸ್ತೆಯಲ್ಲಿ ಭಾರೀ ವಾಹನಗಳನ್ನು ಬಿಟ್ಟಿದ್ದು, ಈ ವೇಳೆ ಕಾಡಿನಲ್ಲಿರುವ ಒಣಗಿದ ಎಲೆಗೆ ಆಕಸ್ಮಿಕ ಬೆಂಕಿಬಿದ್ದು ಲಕ್ಷಾಂತರ ಮೌಲ್ಯದ ಅರಣ್ಯ ಸುಟ್ಟು ಕರಕಲಾದ ಘಟನೆ ನಿಸರ್ಗಮನೆ ಬಳಿ ನಡೆದಿದೆ.

ಹಳ್ಳಿಯ ವ್ಯಕ್ತಿಯೊಬ್ಬರು ಬೆಂಕ ಬಿದ್ದ ಸುದ್ದಿಯನ್ನು ತಿಳಿಸಿದ ತಕ್ಷಣ ಪ್ರಮೋದ ಹೆಗಡೆ(Pramod hegde) ತೋಟಕ್ಕೆ ಬೆಂಕಿ ಬೀಳುವುದನ್ನು ಅಗ್ನಿಶಾಮಕ ವಾಹನದ ಸಹಾಯದಿಂದ ಉಳಿಸಿಕೊಂಡಿದ್ದಾರೆ. ಆದರೆ, ಉರಿಯುವ ಬಿಸಿಲಿಗೆ ಬೆಂಕಿ ನಿಸರ್ಗಮನೆಯ ಪಕ್ಕದ ಗದ್ದೆ, ಬೇಣ ಸೇರಿದಂತೆ ನಾಲ್ಕು ಎಕರೆ ಜಮೀನು ಸಂಪೂರ್ಣ ಸುಟ್ಟು ಕರಕಲಾಗಿದೆ.

Hassan: ಕಾಡ್ಗಿಚ್ಚಿಗೆ ಬೆಂದು ಹೋದ ಫಾರೆಸ್ಟ್ ಗಾರ್ಡ್ ಮೃತ: ಇಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಅರಣ್ಯ ಇಲಾಖೆ(Forest depertment)ಯ 4 ಎಕರೆ ನೆಡುತೋಪು ಸಹ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಅಲ್ತಾಫ್‌ ನೇತೃತ್ವದಲ್ಲಿ ಗಜು ನಾಯ್ಕ, ರಾಮಾಪುರ ಗ್ರಾಮಸ್ಥರು ಅನೇಕ ಸಿಬ್ಬಂದಿಗಳು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ರಸ್ತೆ ಅತ್ಯಂತ ಕಿರಿದಾಗಿದ್ದು ಭಾರೀ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ

click me!