ತಾಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಶಿಂಷಾ ನದಿಯ ತಟದಲ್ಲಿ ಇಂದು ಬೆಳಗ್ಗೆ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ವಿಷ್ಣುವಿನ ವಿಗ್ರಹವೊಂದು ಪತ್ತೆಯಾಗಿದೆ.
ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಶಿಂಷಾ ನದಿಯ ತಟದಲ್ಲಿ ಇಂದು ಬೆಳಗ್ಗೆ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ವಿಷ್ಣುವಿನ ವಿಗ್ರಹವೊಂದು ಪತ್ತೆಯಾಗಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಗುಡ್ಡೇನಹಳ್ಳಿ ಗ್ರಾಮದ ಯೋಗೀಶ್ ಎಂಬುವವರು ತಮ್ಮ ತೋಟದ ಸಾಲಿಗೆ ತೆರಳಿದ್ದರು. ಆ ವೇಳೆ ತಮ್ಮ ಜಮೀನಿನ ಬಳಿ ಇದ್ದ ತೊರೆಯ ಬಳಿಯೂ ಹೋಗಿದ್ದರು. ಆ ವೇಳೆ ನೀರಿನೊಳಗೆ ಸುಮಾರು ನಾಲ್ಕು ಎತ್ತರದ ವಿಷ್ಣುವಿನ ವಿಗ್ರಹ ಇರುವುದು ಕಂಡುಬಂದಿದೆ. ಕೂಡಲೇ ತಮ್ಮ ಗ್ರಾಮದ ಯುವಕರಿಗೆ ಸುದ್ದಿ ಮುಟ್ಟಿಸಿ, ಟ್ರ್ಯಾಕ್ಟರ್ ಸಹಾಯದಿಂದ ಗ್ರಾಮದ ಆಂಜನೇಯ ದೇವಾಲಯಕ್ಕೆ ಈ ವಿಗ್ರಹವನ್ನು ಸ್ಥಳಾಂತರಿಸಲಾಯಿತು.
ಕಳೆದ ಒಂದೆರೆಡು ತಿಂಗಳ ಹಿಂದೆಯೂ ಭಾರಿ ನೀರು ಈ ಪ್ರದೇಶದಲ್ಲಿ ಹರಿದಿತ್ತು. ಈ ಹಿಂದೆಂದೂ ಕಾಣದ ಪ್ರವಾಹ ಆಗಿತ್ತು. ನದಿ ತಟದ ಸುತ್ತಮುತ್ತಲ ಪ್ರದೇಶ ನೀರಿನಿಂದ ಆವೃತವಾಗಿತ್ತು. ಈ ಸಂಧರ್ಭದಲ್ಲಿ ನೀರಿನೊಳಗೆ ಹುದುಗಿಹೋಗಿದ್ದ ಈ ವಿಗ್ರಹ ಹೊರಬಂದಿರಬಹುದು ಎಂದು ಶಂಕಿಸಲಾಗಿದೆ.
ತಮ್ಮ ಗ್ರಾಮದ ಬಳಿ ವಿಷ್ಣುವಿನ ವಿಗ್ರಹ ಸಿಕ್ಕಿರುವುದು ಸಂತಸದ ಸಂಗತಿಯೇ. ಈ ವಿಗ್ರಹ ಯಾವ ಕಾಲದ್ದು, ಎಷ್ಟುವರ್ಷಗಳ ಹಿಂದಿನದು ಎಂಬುದು ತಿಳಿಯದಾಗಿದೆ. ಈ ವಿಗ್ರಹ ಸಿಕ್ಕಿರುವ ಕುರಿತು ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿ ಚರ್ಚಿಸಿ ಈ ವಿಗ್ರಹವನ್ನು ಏನು ಮಾಡುವುದು ಎಂದು ನಿರ್ಧರಿಸಲಾಗುವುದು ಎಂದು ಮುಕಂದ ತಿಳಿಸಿದರು.
ಇತ್ತೀಚೆಗಷ್ಠೆ ಶೆಟ್ಟಿಗೊಂಡನಹಳ್ಳಿಯಲ್ಲಿ ಪ್ರಾರಂಭಿಸಿರುವ ಶ್ರೀ ಹಳ್ಳಿಕಾರ್ ಮಠಕ್ಕೆ ಈ ವಿಗ್ರಹವನ್ನು ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ವಿಷ್ಣುವನ ವಿಗ್ರಹ ಸಿಕ್ಕಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಮಂದಿ ವಿಗ್ರಹದ ದರ್ಶನ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಪಿಡಿಓ ಅಭಿಲಾಷ್ ಸೇರಿದಂತೆ ಹಲವಾರು ಮಂದಿ ಆಗಮಿಸಿ ವಿಗ್ರಹ ವೀಕ್ಷಣೆ ಮಾಡಿದರು.