ಮೇಕೆದಾಟು ಯೋಜನೆ: ಮರ ಎಣಿಕೆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಅರಣ್ಯ ಇಲಾಖೆ

By Kannadaprabha NewsFirst Published Oct 21, 2023, 11:30 PM IST
Highlights

ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಮೇಕೆದಾಟು ಪ್ರದೇಶ ಬರಲಿದ್ದು, ಹನೂರು ತಾಲೂಕಿನ ಶಾಗ್ಯ ಗ್ರಾಮದಿಂದ 19 ಕಿಮೀ ದೂರದಲ್ಲಿ ಕಾವೇರಿ ವಿಶಾಲವಾಗಿ ಹರಿಯುತ್ತಿದೆ. ಇಲ್ಲಿ ಮೇಕೆದಾಟು ಯೋಜನೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದಿಲ್ಲವೆಂದು ರೂಪುರೇಷೆ ಸಿದ್ಧಪಡಿಸಲು ಕಳೆದ ಸೆ.7 ರಂದು 29 ಮಂದಿ ಉಪ ವಲಯ ಅರಣ್ಯಾಧಿಕಾರಿಗಳನ್ನು ಸರ್ಕಾರ ಮರಗಳ ಎಣಿಕೆ ಮಾಡಲು ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಜಿ ದೇವರಾಜ ನಾಯ್ಡು

ಹನೂರು(ಅ.21):  ರಾಜ್ಯದಲ್ಲಿ ಕಾವೇರಿ ಸಂಕಷ್ಟ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ರೂಪುರೇಷೆ ಸಿದ್ಧಪಡಿಲು ಸರ್ಕಾರ ನೀಡಿದ್ದ ಆದೇಶಕ್ಕೆ ಅರಣ್ಯ ಇಲಾಖೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ದಿವ್ಯ ನಿರ್ಲಕ್ಷ್ಯ ವಹಿಸಿದೆ.

Latest Videos

ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಮೇಕೆದಾಟು ಪ್ರದೇಶ ಬರಲಿದ್ದು, ಹನೂರು ತಾಲೂಕಿನ ಶಾಗ್ಯ ಗ್ರಾಮದಿಂದ 19 ಕಿಮೀ ದೂರದಲ್ಲಿ ಕಾವೇರಿ ವಿಶಾಲವಾಗಿ ಹರಿಯುತ್ತಿದೆ. ಇಲ್ಲಿ ಮೇಕೆದಾಟು ಯೋಜನೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದಿಲ್ಲವೆಂದು ರೂಪುರೇಷೆ ಸಿದ್ಧಪಡಿಸಲು ಕಳೆದ ಸೆ.7 ರಂದು 29 ಮಂದಿ ಉಪ ವಲಯ ಅರಣ್ಯಾಧಿಕಾರಿಗಳನ್ನು ಸರ್ಕಾರ ಮರಗಳ ಎಣಿಕೆ ಮಾಡಲು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಆದರೆ, ಆದೇಶ ಹೊರಡಿಸಿ 3 ತಿಂಗಳಾದರೂ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಯಾವುದೇ ಮರಗಳ ಎಣಿಕೆ ನಡೆಯದಿರುವುದು ಅರಣ್ಯ ಇಲಾಖೆಯ ಬೇಜವಬ್ದಾರಿತನ‌ ತೋರುತ್ತಿದೆ. ಯೋಜನೆ ಅನುಷ್ಠಾನವಾದರೆ ಎಷ್ಟು ಪ್ರದೇಶ ಮುಳುಗಡೆಯಾಗಲಿದೆ?, ಎಷ್ಟು ಮರಗಳು ನೀರಿನಲ್ಲಿ ಅಪೋಷನವಾಗಲಿವೆ? ಎಂಬ ಅಂದಾಜಿಗೆ ಮತ್ತು ಹಸಿರು ನ್ಯಾಯಾಧೀಕರಣಕ್ಕೆ ಮಾಹಿತಿ ನೀಡಲು ಈ ಮರಗಳ ಎಣಿಕೆ ಅಗತ್ಯವಾಗಿದೆ.‌ ಆದರೆ, ಅರಣ್ಯ ಇಲಾಖೆ ಮರಗಳ ಎಣಿಕೆ ನಡೆಸದೇ ದಿವ್ಯ ನಿರ್ಲಕ್ಷ್ಯ ತೋರಿದೆ. ನೇಮಕ ಮಾಡಿದ್ದ ಅಧಿಕಾರಿಗಳಲ್ಲಿ ಕೆಲವರು ವರ್ಗಾವಣೆಯೂ ಆಗಿದ್ದು, ಸರ್ಕಾರದ ಆದೇಶಕ್ಕೆ ಅರಣ್ಯ ಇಲಾಖೆ ಬೆಲೆ ಕೊಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಮರಾಜನಗರ: ಬ್ಯಾಂಕ್ ಸಿಬ್ಬಂದಿಯಂತೆ ಬಂದು 5 ಲಕ್ಷ ಹೊತ್ತೊಯ್ದ ಚಾಲಾಕಿ ಕಳ್ಳ..!

ಸಂಪರ್ಕಕ್ಕೆ ಸಿಗದ ಅಧಿಕಾರಿಗಳು:

ಇನ್ನು, ಮರಗಳ ಎಣಿಕೆ ಸಂಬಂಧ ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಹಾಗೂ ಚಾಮರಾಜನಗರ ಸಿಸಿಎಫ್ ಅವರನ್ನು ಸಾಕಷ್ಟು ಬಾರಿ ‌ಸಂಪರ್ಕಿಸಿದರಾದರೂ ಅವರು ಸಿಗಲಿಲ್ಲ.ಒಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದರೂ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸವೇ ಅಗಿದೆ.

ರಾಜ್ಯ ಸರ್ಕಾರ ಅರಣ್ಯ ಇಲಾಖೆ ಮುಖಾಂತರ ಮೇಕೆದಾಟು ಕುಡಿಯುವ ನೀರಿನ ಯೋಜನೆ, ಮರಗಳ ಎಣಿಕೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಿ ಮೂರು ತಿಂಗಳಾದರೂ ಇನ್ನೂ ಸಹ ಎಣಿಕೆ ಆಗದಿರುವುದರಿಂದ ಕಾವೇರಿ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಈ ಯೋಜನೆ ಕುಂಠಿತಗೊಂಡಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮೇಕೆದಾಟು ಮುಳುಗಡೆಯಾಗಲಿರುವ ಮರಗಳ ಎಣಿಕೆ ವರದಿಯನ್ನು ಸಿದ್ಧಪಡಿಸಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಸರ್ಕಾರದ ಮಹತ್ವಕಾಂಕ್ಷೆಯ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮರಗಳ ಎಣಿಕೆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ ಇಲ್ಲದಂತಾಗಿದೆ. ಆದ್ದರಿಂದ ಹಿರಿಯ ಅಧಿಕಾರಿಗಳು, ಸರ್ಕಾರ ಕೂಡಲೇ ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಮರ ಎಣಿಕೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಳ್ಳೇಗಾಲ ತಾಲೂಕು ಅಧ್ಯಕ್ಷರ ಗೌಡೆ ಗೌಡ ತಿಳಿಸಿದ್ದಾರೆ.  

click me!