ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವ ಕೆ.ಎನ್.ರಾಜಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಮಹತ್ವದ ಖಾತೆ ನೀಡಬೇಕೆಂದು ವಾಲ್ಮೀಕಿ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ್ನು ಒತ್ತಾಯಿಸಿದರು.
ತುಮಕೂರು : ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿರುವ ಕೆ.ಎನ್.ರಾಜಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಮಹತ್ವದ ಖಾತೆ ನೀಡಬೇಕೆಂದು ವಾಲ್ಮೀಕಿ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ್ನು ಒತ್ತಾಯಿಸಿದರು.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳವಳಿ ರಾಜಣ್ಣ, ಕರ್ನಾಟಕ ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ್, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಜೆಡಿಎಸ್ ಪಕ್ಷದ ಕೃಷ್ಣಮೂರ್ತಿ,ಬಿಜೆಪಿಯ ಮಧುಕುಮಾರ್, ಕೆಂಪಹೊನ್ನಯ್ಯ, ವಾಲ್ಮೀಕಿ ಸಮುದಾಯದ ಮುಖಂಡರಾದ ಸರಸ್ವತಿ, ರಂಗಸ್ವಾಮಯ್ಯ, ಲಕ್ಷ್ಮೀನಾರಾಯಣ ಅವರು, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಕೆ.ಎನ್.ರಾಜಣ್ಣ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಹಾಗಾಗಿ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಮಹತ್ವದ ಖಾತೆ ನೀಡಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಪ್ರತಿ ಚುನಾವಣೆಯಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಈ ಬಾರಿಯೂ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪ್ರಮುಖ ಪಾತ್ರವನ್ನು ವಾಲ್ಮೀಕಿ ಸಮುದಾಯದ ಮತದಾರರು ಹೊಂದಿದ್ದಾರೆ. ಹಾಗಾಗಿ ವಾಲ್ಮೀಕಿ ಸಮುದಾಯದಿಂದ ಆಯ್ಕೆಯಾಗಿರುವ ಕೆ.ಎನ್.ಆರ್.ಅವರಿಗೆ ಉಪಮುಖ್ಯಮಂತ್ರಿಯ ಜೊತೆಗೆ, ಮಹತ್ವದ ಖಾತೆ ನೀಡಬೇಕೆಂಬುದು ನಾಯಕ ಸಮುದಾಯದ ಎಲ್ಲಾ ನಾಯಕರ ಪಕ್ಷಾತೀತ ಒತ್ತಾಯವಾಗಿದೆ ಎಂದರು.
ಎಐಸಿಸಿ ಮತ್ತು ಕೆಪಿಸಿಸಿ ಪ್ರತಿ ಬಾರಿಯೂ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಿಂದ ಆಯ್ಕೆಯಾಗುವ ನಮ್ಮ ಸಮುದಾಯದ ಮುಖಂಡರಿಗೆ ಸಚಿವ ಸ್ಥಾನ ನೀಡಿ, ಹಳೆಮೈಸೂರು ಭಾಗವನ್ನು ಕಡೆಗಣಿಸುತ್ತಲೇ ಬಂದಿದೆ. ಹಾಗಾಗಿ ಈ ಬಾರಿ ದಕ್ಷಿಣ ಭಾಗಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಎನ್.ರಾಜಣ್ಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿದರೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದಂತಾಗುತ್ತದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಇದು ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ವಾಲ್ಮೀಕಿ ಸಮುದಾಯದ ನಮ್ಮೆಲ್ಲರ ಅಭಿಪ್ರಾಯವಾಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಮ್ಮ ಒತ್ತಾಯಕ್ಕೆ ಬೆಲೆ ನೀಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸಮದಾಯ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.