
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮೇ.17): ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮಂಗಳವಾರ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು, ಕಳೆದ ಐದು ವರ್ಷ ಮೇ ತಿಂಗಳಿನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶವಾಗಿದೆ.
ನಗರದಲ್ಲಿ ಮೇ ತಿಂಗಳಿನಲ್ಲಿ ವಾಡಿಕೆ ಗರಿಷ್ಠ ಉಷ್ಣಾಂಶ 33.1 ಡಿಗ್ರಿ ಸೆಲ್ಸಿಯಸ್ ಇದೆ. ಕಳೆದ ಎರಡ್ಮೂರು ದಿನದಿಂದ ನಗರದಲ್ಲಿ ವಾಡಿಕೆ ಗರಿಷ್ಠ ಉಷ್ಣಾಂಶಕ್ಕಿಂತ ತುಸು ಹೆಚ್ಚು ದಾಖಲಾಗುತ್ತಿದೆ. ಇರುವುದರಿಂದ ಜಾಸ್ತಿ ತಾಪದ ಅನುಭವವಾಗುತ್ತಿದೆ. ಮಂಗಳವಾರ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆ ಪ್ರಕಾರ 2 ಡಿಗ್ರಿ ಅಷ್ಟೇ ಹೆಚ್ಚಾದರೂ ಬೆಂಗಳೂರಿನ ನಾಗರಿಕರಿಗೆ ಕಾದ ಹಂಚಿನ ಮೇಲೆ ಕುಳಿತ ಅನುಭವವಾಗಿದೆ.
ಐದು ವರ್ಷದಲ್ಲಿ ಅತಿ ಹೆಚ್ಚು:
ಹವಾಮಾನ ಇಲಾಖೆ ಅಂಕಿ ಅಂಶದ ಮಾಹಿತಿ ಪ್ರಕಾರ ಕಳೆದ 2018ರ ಮೇ 1ರಂದು 35.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 2019 ಮತ್ತು 2020ರಲ್ಲಿ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿಲ್ಲ. 2021ರ ಮೇ 10ರಂದು 34.4 ಡಿಗ್ರಿ ಸೆಲ್ಸಿಯಸ್ ಹಾಗೂ 2022ರ ಮೇ 1ರಂದು 34.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಕರ್ನಾಟಕದಲ್ಲಿ ಉಷ್ಣಾಂಶ ಹೆಚ್ಚಳ: ಮಧ್ಯಾಹ್ನ ವೇಳೆ ಪ್ರಚಾರ ಬೇಡ, ಆರೋಗ್ಯ ಇಲಾಖೆ
ಮೇನಲ್ಲಿ 37.6 ಡಿಗ್ರಿವರೆಗೆ ಬಿಸಿಲು:
ಕಳೆದ 2011ರಿಂದ ಈವರೆಗಿನ ಅಂಕಿ ಅಂಶ ಗಮನಿಸಿದರೆ, ಮೇ ತಿಂಗಳಿನಲ್ಲಿ ಬೆಂಗಳೂರಿನ ಉಷ್ಣಾಂಶ 37.6 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. 2013ರ ಮೇ 3ರಂದು 37.6 ಡಿಗ್ರಿ ಸೆಲ್ಸಿಯಸ್, 2016ರಲ್ಲಿ 37.3 ಹಾಗೂ 2017ರಲ್ಲಿ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘39.2’ ಡಿ.ಸೆ. ಸಾರ್ವಕಾಲಿಕ ದಾಖಲೆ
2016ರ ಏಪ್ರಿಲ್ 25ರಂದು 39.2 ಡಿಗ್ರಿ ಸೆಲ್ಷಿಯಸ್ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗಿತ್ತು. ಇದು ಬೆಂಗಳೂರಿನ ಪಾಲಿಗೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಉಷ್ಣಾಂಶವಾಗಿದೆ.
‘ಮೋಕಾ’ದಿಂದ ತಾಪ ಏರಿಕೆ
ಕಳೆದ ವಾರದ ಬಂಗಾಳಕೊಲ್ಲಿಯಲ್ಲಿ ರೂಪಗೊಂಡ ಚಂಡಮಾರುತ ಮಳೆ ಮಾರುತಗಳನ್ನು ಸೆಳೆದ ಪರಿಣಾಮ ರಾಜ್ಯದಲ್ಲಿ ಮಳೆ ಕ್ಷೀಣಿಸಿದೆ. ಇದರಿಂದ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿಯೂ ಬಿಸಿಲು ಹೆಚ್ಚಾಗಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಭಾನುವಾರ ನಗರದಲ್ಲಿ 32.8 ಡಿಗ್ರಿ ಸೆಲ್ಷಿಯಸ್ ಗರಿಷ್ಠ ಉಷ್ಣಾಂಶ ದಾಖಲಾದರೆ, ಸೋಮವಾರ 33 ಡಿ.ಸೆ. ಹಾಗೂ ಮಂಗಳವಾರ 35 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಬುಧವಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ
ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್ 10 ಡಿಗ್ರಿ ಕುಸಿತ..!
ವಾಯುವ್ಯ ದಿಕ್ಕಿನಿಂದ ತೇವಾಂಶ ಕಡಿಮೆ ಇರುವ ಗಾಳಿ ಬೀಸುತ್ತಿದ್ದು, ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಕಡಿಮೆಯಾದ ಪರಿಣಾಮ ನಗರದಲ್ಲಿ ಉಷ್ಣಾಂಶ ಹೆಚ್ಚಳವಾಗಿದೆ. ಬೇಸಿಗೆ ಅಂತ್ಯದೊಳಗೆ 36 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಬಹುದು. ಆದರೆ, ಭಾರೀ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇಲ್ಲ ಅಂತ ಹವಾಮಾನ ಇಲಾಖೆ ತಜ್ಞ ಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ನಗರದ ವಿವಿಧ ಕಡೆಯ ಗರಿಷ್ಠ ಉಷ್ಣಾಂಶ
ಸ್ಥಳ ಗರಿಷ್ಠ ಉಷ್ಣಾಂಶ (ಡಿ. ಸೆ.)
ಬೆಂಗಳೂರು ನಗರ 35.0
ಬೆಂಗಳೂರು ವಿಮಾನ ನಿಲ್ದಾಣ 35.4
ಎಚ್‌ಎಎಲ್ ವಿಮಾನ ನಿಲ್ದಾಣ 34.4
ಬೆಂಗಳೂರಿನ ಜಿಕೆವಿಕೆ 32.4
ಕಳೆದ 10 ವರ್ಷದ ಮೇ ನಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣಾಂಶ
ವರ್ಷ ಗರಿಷ್ಠ ಉಷ್ಣಾಂಶ (ಡಿ.ಸೆ.)
2011(ಮೇ7) 34.8
2012(ಮೇ22) 35.2
2013(ಮೇ3) 37.6
2014(ಮೇ17) 36.0
2015(ಮೇ2) 33.8
2016(ಮೇ2) 37.3
2017(ಮೇ8) 37.0
2018(ಮೇ1) 35.2
2021(ಮೇ10) 34.4
2022(ಮೇ1) 34.8