ಈರುಳ್ಳಿ ದರದಲ್ಲಿ ಭಾರೀ ಕುಸಿತ..!

By Kannadaprabha NewsFirst Published May 17, 2023, 5:47 AM IST
Highlights

ಮಾರುಕಟ್ಟೆಗೆ ಭರ್ಜರಿ ಈರುಳ್ಳಿ ಆವಕ: ದರ ಕುಸಿತ, ವಿಜಯಪುರ ಜಿಲ್ಲೆಯಿಂದ ಯಶವಂತಪುರ, ದಾಸರಹಳ್ಳಿ ಎಪಿಎಂಸಿಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಸರಬರಾಜು, 100ಕ್ಕೆ 7-8 ಕೇಜಿ ಈರುಳ್ಳಿ ಮಾರಾಟ. 

ಮಯೂರ ಹೆಗಡೆ

ಬೆಂಗಳೂರು(ಮೇ.17):  ಚುನಾವಣೆ ಮುಕ್ತಾಯ, ಕಳೆದ ವಾರ ಮಳೆಯಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಿಂದ ಈರುಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ದರ ಕುಸಿದಿದೆ.

Latest Videos

ಸೀಸನ್‌ ಅಲ್ಲದ ಕಾರಣ ಕಳೆದ ಒಂದೆರಡು ತಿಂಗಳಿಂದ ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವಿಭಾಗದಲ್ಲಿ ವಹಿವಾಟು ಕುಸಿದಿತ್ತು. ಆದರೆ ಏಕಾಏಕಿ ಸೋಮವಾರದಿಂದ ಇಲ್ಲಿಗೆ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಕಡಿಮೆ ಗುಣಮಟ್ಟಹಾಗೂ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ .8-10 ಇದ್ದರೆ, ಕಳಪೆಗೆ 5-8 ದರದಲ್ಲಿ ಹರಾಜಾಗುತ್ತಿದೆ. ಇದೇ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ .20 ಇದ್ದರೆ, ಕಳಪೆಗೆ .10-12 ಇದೆ. .100ಗೆ ಏಳು-ಎಂಟು ಕೇಜಿ ಈರುಳ್ಳಿ ಸಿಗುತ್ತಿದೆ.

ಈರುಳ್ಳಿ ಬೆಲೆ ಕೆ.ಜಿಗೆ ಕೇವಲ 3 ರು.ಗೆ ಕುಸಿತ: ಕಂಗಾಲಾದ ರೈತರು

ಕುಸಿತಕ್ಕೆ ಕಾರಣ:

ಇದೀಗ ಮಳೆಯಾಗುತ್ತಿರುವ ಕಾರಣಕ್ಕೆ ತೇವಾಂಶದಿಂದ ಈರುಳ್ಳಿ ಕೊಳೆಯಬಹುದು ಎಂಬ ಆತಂಕ ವಿಜಯಪುರ ಭಾಗದ ರೈತರು ದಾಸ್ತಾನಿಟ್ಟಿದ್ದ ಈರುಳ್ಳಿಯನ್ನು ಹೊರತೆಗೆದು ಮಾರುಕಟ್ಟೆಗೆ ತರುತ್ತಿದ್ದಾರೆ. ರಾಜ್ಯದ ಉತ್ಪನ್ನ ಗುಣಮಟ್ಟದಿಂದ ಕೂಡಿದ್ದು, ಈ ಸಂದರ್ಭದಲ್ಲಿ ಮಾರುಕಟ್ಟೆಗೆ ತಂದರೆ ಲಾಭ ಸಿಗಬಹುದು ಎಂದ ಕಾರಣಕ್ಕೆ ರೈತರು ಎಪಿಎಂಸಿಗೆ ಈರುಳ್ಳಿ ತರುತ್ತಿದ್ದಾರೆ. ಈರುಳ್ಳಿ ಮಾತ್ರವಲ್ಲದೆ ಆಲೂಗಡ್ಡೆ ಆವಕವೂ ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಈ ಬಗ್ಗೆ ಮಾತನಾಡಿದ ಈರುಳ್ಳಿ ರಫ್ತುದಾರ ಆನಂದ್‌, ಮಹಾರಾಷ್ಟ್ರದಲ್ಲಿ ಮಳೆಯಾದ ಕಾರಣ ತೀರಾ ಕಳಪೆ ಗುಣಮಟ್ಟದ, ಕಡಿಮೆ ಪ್ರಮಾಣದ ಈರುಳ್ಳಿ ಬರುತ್ತಿದೆ. ಇನ್ನು ಒಂದೂವರೆ ತಿಂಗಳ ಕಾಲ ಇದೇ ಗುಣಮಟ್ಟದ ಉತ್ಪನ್ನ ಬರಬಹುದು. ಈ ವಾರ ಗಣನೀಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬರುವ ನಿರೀಕ್ಷೆಯಿದೆ. ಬಳಿಕ ಸಾಮಾನ್ಯ ಸ್ಥಿತಿಗೆ ಬರುವ ಸಾಧ್ಯತೆಯಿದೆ ಎಂದರು.

Gadag| ಮೋಡ ಕವಿದ ವಾತಾವರಣ, ಈರುಳ್ಳಿ ದರದಲ್ಲಿ ತೀವ್ರ ಕುಸಿತ!

ವ್ಯಾಪಾರಸ್ಥ ದಿವಾಕರ್‌ ಮಾತನಾಡಿ, ಈಗ ಬರುತ್ತಿರುವ ಈರುಳ್ಳಿಯನ್ನು ಒಂದೆರಡು ದಿನ ದಾಸ್ತಾನು ಮಾಡಲೂ ಸಾಧ್ಯವಿಲ್ಲ. ಆದಾಗ್ಯೂ ಸೋಮವಾರ ಬಂದಿದ್ದರಲ್ಲಿ 20 ಸಾವಿರ ಹೆಚ್ಚು ಚೀಲಗಳು ಮಾರುಕಟ್ಟೆಯಲ್ಲಿ ಉಳಿದಿದ್ದವು. ಮಂಗಳವಾರ ಇವು ಸೇರಿ ಹೊಸದಾಗಿ ಬಂದವುಗಳ ಟೆಂಡರ್‌ ಮುಗಿದಿದೆ ಎಂದು ಹೇಳಿದರು. 

ಮಾರುಕಟ್ಟೆಗೆ ದುಪ್ಪಟ್ಟು ಈರುಳ್ಳಿ ಸರಬರಾಜು

ಸೀಸನ್‌ ಅಲ್ಲದ ಸಾಮಾನ್ಯ ದಿನಗಳಲ್ಲಿ ಗರಿಷ್ಠ 30ರಿಂದ 35 ಸಾವಿರ ಚೀಲ ಈರುಳ್ಳಿ ಬರುತ್ತದೆ. ಆದರೆ, ಮಂಗಳವಾರ ಯಶವಂತಪುರ ಮಾರುಕಟ್ಟೆಗೆ 308 ಲಾರಿಗಳಲ್ಲಿ 47,676, ದಾಸನಪುರಕ್ಕೆ 6,318 ಸೇರಿ 53,994 ಚೀಲ ಈರುಳ್ಳಿ ಬಂದಿದೆ. ಅದೇ ಸೋಮವಾರ ಬರೋಬ್ಬರಿ 72 ಸಾವಿರ ಚೀಲ ಈರುಳ್ಳಿ ಬಂದಿತ್ತು. 20 ಸಾವಿರಕ್ಕೂ ಹೆಚ್ಚು ಆಲೂಗಡ್ಡೆ ಬಂದಿತ್ತು ಎಂದು ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!