ಬೆಂಗಳೂರು: ಫುಟ್‌ಪಾತ್ ತೆರವು ವಿರುದ್ಧ ರೊಚ್ಚಿಗೆದ್ದ ಬೀದಿಬದಿ ವ್ಯಾಪಾರಿಗಳು, ಬೃಹತ್ ಪ್ರತಿಭಟನೆ, ಬೇಡಿಕೆಗಳೇನು?

Published : Jul 08, 2026, 08:35 AM IST
GBA clears footpath

ಸಾರಾಂಶ

ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಜುಲೈ 8 ರಂದು ನಗರಾದ್ಯಂತ ಬಂದ್ ಆಚರಿಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ಕ್ರಮವು ಕಾನೂನುಬಾಹಿರವಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಬೆಂಗಳೂರು: ಪಾದಚಾರಿ ಮಾರ್ಗ (ಫುಟ್‌ಪಾತ್) ಒತ್ತುವರಿ ತೆರವುಗೊಳಿಸುವ ಸರ್ಕಾರದ ಕ್ರಮ ರಾಜಧಾನಿಯಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಆಡಳಿತ ಮಂಡಳಿಯ ನಡುವೆ ದೊಡ್ಡ ಸಮರಕ್ಕೆ ನಾಂದಿ ಹಾಡಿದೆ. ಫುಟ್‌ಪಾತ್ ಅಭಿವೃದ್ಧಿಯ ನೆಪದಲ್ಲಿ ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ, ಜುಲೈ 8ರಂದು (ಇಂದು) ನಗರದಾದ್ಯಂತ ಬೀದಿಬದಿ ವ್ಯಾಪಾರ ಬಂದ್ ಮಾಡಿ, ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್) ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೀದಿಬದಿ ವ್ಯಾಪಾರಿಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಬಸಮ್ಮ ಅವರು ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಕಾನೂನುಬದ್ಧವಾಗಿ ನಮಗೆ ಈಗಾಗಲೇ ಗುರುತಿನ ಚೀಟಿಗಳನ್ನು (ಐಡಿ ಕಾರ್ಡ್) ನೀಡಲಾಗಿದೆ. ಹೀಗಿದ್ದರೂ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ನಮ್ಮನ್ನು ಎತ್ತಂಗಡಿ ಮಾಡುತ್ತಿರುವುದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಈ ಅಮಾನವೀಯ ಕ್ರಮವನ್ನು ಖಂಡಿಸಿ ಆರು ಪ್ರಮುಖ ಸಂಘಟನೆಗಳು ಜಂಟಿಯಾಗಿ ಬೀದಿಗೆ ಇಳಿಯುತ್ತಿವೆ" ಎಂದು ಅವರು ಎಚ್ಚರಿಸಿದರು.

ಅಪಘಾತಗಳಿಗೆ ರಸ್ತೆ ಗುಂಡಿ ಕಾರಣ, ನಮ್ಮದಲ್ಲ!

ನಗರದಲ್ಲಿ ನಡೆಯುವ ರಸ್ತೆ ಅಪಘಾತಗಳು ಮತ್ತು ಸಾವುಗಳಿಗೆ ಬೀದಿಬದಿ ವ್ಯಾಪಾರಿಗಳೇ ಕಾರಣ ಎಂಬ ಆರೋಪವನ್ನು ಸಂಘಟನೆಗಳು ತೀವ್ರವಾಗಿ ತಿರಸ್ಕರಿಸಿವೆ. "ಬೆಂಗಳೂರಿನಲ್ಲಿ ಜನರು ಸಾಯುತ್ತಿರುವುದು ರಸ್ತೆ ಗುಂಡಿಗಳು ಹಾಗೂ ಕಳಪೆ ಮೂಲಸೌಕರ್ಯಗಳಿಂದಲೇ ಹೊರತು ಬಡ ವ್ಯಾಪಾರಿಗಳಿಂದಲ್ಲ. ಇತ್ತೀಚೆಗೆ ಸಾವಿಗೀಡಾದ 300 ಪಾದಚಾರಿಗಳ ಪೈಕಿ ಒಬ್ಬರಾದರೂ ಬೀದಿಬದಿ ವ್ಯಾಪಾರಿಗಳಿಂದಾಗಿ ಸತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ ಬಸಮ್ಮ, ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎಂ.ಎಂ.ರವಿಚಂದ್ರನ್ ಮಾತನಾಡಿ, "ಸರ್ಕಾರದ ಈ ಏಕಪಕ್ಷೀಯ ತೀರ್ಮಾನದಿಂದ ನಗರದ ಸುಮಾರು 2 ಲಕ್ಷ ಬಡ ವ್ಯಾಪಾರಿಗಳು ಹಾಗೂ ಅವರನ್ನು ನಂಬಿಕೊಂಡಿರುವ 10 ಲಕ್ಷಕ್ಕೂ ಹೆಚ್ಚು ಕುಟುಂಬ ಸದಸ್ಯರು ಬೀದಿಗೆ ಬೀಳುವಂತಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವ 6 ಪ್ರಮುಖ ಸಂಘಟನೆಗಳು:

ಒಟ್ಟು 12 ಸಂಘಟನೆಗಳ ಪೈಕಿ ಸದ್ಯ 6 ಪ್ರಮುಖ ಒಕ್ಕೂಟಗಳು ಈ ಹೋರಾಟಕ್ಕೆ ಕೈಜೋಡಿಸಿವೆ.

  • ಕರ್ನಾಟಕ ಪ್ರಗತಿಪರ ಬೀದಿಬದಿ ಸಂಘ
  • ನವಕರ್ನಾಟಕ ಸಂಘಟನೆ
  • ರಾಜ್ಯ ಮಹಿಳಾ ಬೀದಿಬದಿ ವ್ಯಾಪಾರಿಗಳ ಒಕ್ಕೂಟ
  • ರಾಜ್ಯ ಬೀದಿ ಬದಿ ವ್ಯಾಪಾರಿಗಳ ಮಹಾಮಂಡಳ
  • ಕರುನಾಡು ಬೀದಿ ಬದಿ ವ್ಯಾಪಾರಿ ಸಂಘ
  • ಬೀದಿಬದಿ ವ್ಯಾಪಾರಿಗಳ ಒಕ್ಕೂಟ

ಸರ್ಕಾರದ ಮುಂದೆ ವ್ಯಾಪಾರಿಗಳು ಇಟ್ಟಿರುವ ಪ್ರಮುಖ 13 ಬೇಡಿಕೆಗಳು:

  • ಬೀದಿಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯು ಸರ್ಕಾರದ ಮುಂದೆ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದ್ದು, ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದೆ:
  • ಒಕ್ಕಲೆಬ್ಬಿಸಲಾದ ವ್ಯಾಪಾರಿಗಳಿಗೆ ತಕ್ಷಣವೇ ಅದೇ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಲು ಅನುವು ಮಾಡಿಕೊಡಬೇಕು.
  • ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ರಸ್ತೆ ಬದಿಯಲ್ಲಿ ತಾತ್ಕಾಲಿಕ ವ್ಯಾಪಾರಕ್ಕೆ ಅವಕಾಶ ನೀಡಬೇಕು.
  • 2014ರ ಬೀದಿಬದಿ ವ್ಯಾಪಾರಿಗಳ ಕಾಯ್ದೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತರಬೇಕು.
  • ವ್ಯಾಪಾರಿಗಳ ಸ್ಥಳಾಂತರದ ಕುರಿತು ಅಂತಿಮ ತೀರ್ಮಾನವನ್ನು ಪಟ್ಟಣ ವ್ಯಾಪಾರ ಸಮಿತಿಯೇ (ಟೌನ್ ವೆಂಡಿಂಗ್ ಕಮಿಟಿ - TVC) ತೆಗೆದುಕೊಳ್ಳಬೇಕು.
  • ತೆರವು ಕಾರ್ಯಾಚರಣೆ ವೇಳೆ ಜಪ್ತಿ ಮಾಡಲಾದ ಎಲ್ಲಾ ವ್ಯಾಪಾರ ಸಾಮಗ್ರಿಗಳನ್ನು ತಕ್ಷಣವೇ ಹಿಂತಿರುಗಿಸಬೇಕು.
  • ಗರಾದ್ಯಂತ ಬಾಕಿ ಇರುವ ಎಲ್ಲಾ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ, ಗುರುತಿನ ಚೀಟಿಗಳನ್ನು ವಿತರಿಸಬೇಕು.
  • ಹೊಸದಾಗಿ ಸೇರ್ಪಡೆಯಾಗಿರುವ ನಾಗರಪಾಲಿಕೆ ವ್ಯಾಪ್ತಿಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ಸ್ಥಾಪಿಸಬೇಕು.
  • ಸಮಿತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ ವ್ಯಾಪಾರಿಗಳ ನೈಜ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು.
  • ನಗರಾದ್ಯಂತ ಪಾದಚಾರಿ ಮಾರ್ಗಗಳನ್ನು ಅಗಲಗೊಳಿಸಿ ಪಾದಚಾರಿಗಳಿಗೂ ಹಾಗೂ ವ್ಯಾಪಾರಿಗಳಿಗೂ ಸೂಕ್ತ ಜಾಗ ಕಲ್ಪಿಸಬೇಕು.
  • ಫುಟ್‌ಪಾತ್ ಮೇಲಿರುವ ಅಕ್ರಮ ವಾಹನ ನಿಲುಗಡೆ, ಖಾಸಗಿ ತೋಟಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಮೊದಲು ತೆರವುಗೊಳಿಸಬೇಕು.
  • ದೊಡ್ಡ ದೊಡ್ಡ ಅಂಗಡಿ ಮಾಲೀಕರು ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.
  • ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೂಡಲೇ ವ್ಯಾಪಾರಿ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು.
  • ಇಡೀ ಪ್ರಕ್ರಿಯೆಯು ಕಾನೂನಾತ್ಮಕ, ನ್ಯಾಯಯುತ ಮತ್ತು ಮಾನವೀಯತೆಯಿಂದ ಕೂಡಿರಬೇಕು.

ಸರ್ಕಾರದ ಮುಂದೆ ವ್ಯಾಪಾರಿಗಳು ಇಟ್ಟಿರುವ ತೀಕ್ಷ್ಣ ಪ್ರಶ್ನೆಗಳು:

  • "ಏಕಾಏಕಿ ಎತ್ತಂಗಡಿ ಮಾಡಿದ್ದರಿಂದ ಬಡ ವ್ಯಾಪಾರಿಗಳಿಗೆ ಉಂಟಾಗಿರುವ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಪರಿಹಾರ ಕೊಡುವವರು ಯಾರು?"
  • "ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳ ಮೇಲೆ ಶ್ರೀಮಂತರ ಕಾರುಗಳನ್ನು ಉಚಿತವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಅದನ್ನು ಸರ್ಕಾರ ಏಕೆ ನಿಷೇಧಿಸಿಲ್ಲ?"
  • "ಒಳಗಿನ ಸಣ್ಣ ರಸ್ತೆಗಳಲ್ಲಿ ವ್ಯಾಪಾರ ಮಾಡಲು ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಇಕ್ಕಟ್ಟಾಗಿರುವ ಸಣ್ಣ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯಾಗುವುದಿಲ್ಲವೇ?"

ಬಂದ್ ಮಿಶ್ರಪ್ರತಿಕ್ರಿಯೆ: ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರ, ಹಂಚಿಕೆಯಾಗುತ್ತಿದೆ ಕರಪತ್ರ!

ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 12 ಸಂಘಟನೆಗಳ ಪೈಕಿ ಕೇವಲ 6 ಸಂಘಟನೆಗಳು ಮಾತ್ರ ಬೆಂಬಲ ನೀಡಿರುವುದರಿಂದ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿದೆ.

ಕೆ.ಆರ್. ಮಾರ್ಕೆಟ್ (ಕೃಷ್ಣರಾಜೇಂದ್ರ ಮಾರುಕಟ್ಟೆ) ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು ಹಾಗೂ ತರಕಾರಿ ವ್ಯಾಪಾರ ಎಂದಿನಂತೆ ಸಾಗಿದೆ. ರಸ್ತೆ ಬದಿ ವ್ಯಾಪಾರಿಗಳು ಕೂಡ ಬೆಳಗ್ಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. "ನಾವು ಹೊಟ್ಟೆಪಾಡಿನ ವ್ಯಾಪಾರವನ್ನು ಪೂರ್ತಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬೆಳಗ್ಗಿನ ವ್ಯಾಪಾರ ಮುಗಿಸಿ, 10 ಗಂಟೆಯ ನಂತರ ನಾವೆಲ್ಲರೂ ಫ್ರೀಡಂ ಪಾರ್ಕ್ ಪ್ರತಿಭಟನೆಗೆ ತೆರಳುತ್ತೇವೆ" ಎಂದು ಹಲವು ವ್ಯಾಪಾರಿಗಳು ತಿಳಿಸಿದ್ದಾರೆ.

ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದ್ದು, ಜಂಟಿ ಹೋರಾಟ ಸಮಿತಿಯ ಕಾರ್ಯಕರ್ತರು ಮಾರುಕಟ್ಟೆ ಹಾಗೂ ರಸ್ತೆ ರಸ್ತೆಗಳಲ್ಲಿ ಸಂಚರಿಸಿ, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೋರಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ಸರ್ಕಾರ ಈ ಬಡ ವ್ಯಾಪಾರಿಗಳ ಕೂಗಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

PREV
Read more Articles on
click me!

Recommended Stories

'ಮೇಕೆದಾಟು ಯೋಜನೆ ರಹಸ್ಯವಾಗಿ ನಡೆಯುತ್ತಿದೆ..' ಸ್ಥಳ ಪರಿಶೀಲನೆ ಬಳಿಕ ತಮಿಳುನಾಡು ರೈತರ ನಿಯೋಗ ಗಂಭೀರ ಆರೋಪ!
ರಾ.ಹೆ. 275ರ ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ 49.22 ಕೋಟಿ ರು. ಕೇಂದ್ರ ವಿಶೇಷ ಅನುದಾನ