
ರಾಮನಗರ (ಜು.8) ತಮಿಳುನಾಡು ರೈತಸಂಘಗಳ ಸಮನ್ವಯ ಸಮಿತಿ ಅಧ್ಯಕ್ಷ ಪಿ.ಆರ್.ಪಾಂಡಿಯನ್ ನೇತೃತ್ವದ ರೈತರ ನಿಯೋಗವು ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದೆ.
ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಕಾಮಗಾರಿಯನ್ನು ರಹಸ್ಯವಾಗಿ ಆರಂಭಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಾಂಡಿಯನ್ ನೇತೃತ್ವದ ರೈತರ ನಿಯೋಗ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿತ್ತು.
ಆ ನಂತರ ಹೊಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡಿಯನ್, ಮೇಕೆದಾಟಿನಲ್ಲಿ ಕಾವೇರಿ ನದಿಪಾತ್ರದ ಉದ್ದಕ್ಕೂ ಸರ್ವೆ ಬಿಂದುಗಳನ್ನು ಗುರುತಿಸಲು ಕಬ್ಬಿಣದ ಸರಳುಗಳನ್ನು ಬಂಡೆಗಳ ಮೇಲೆ ನೆಡಲಾಗಿದೆ. ಇದು ಮೇಕೆದಾಟು ಯೋಜನೆ ಸರ್ವೆ ಕಾರ್ಯ ಪ್ರಾರಂಭಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಈ ಮೊದಲು ಮೇಕೆದಾಟಿನ ನದಿ ಪಾತ್ರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೀಗ ಅಲ್ಲಿ ಹೊಸದಾಗಿ ಮೆಟ್ಟಿಲುಗಳನ್ನು ನಿರ್ಮಿಸಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪ್ರವಾಸಿಗರಿಗೆ ಬಸ್‌ಗಳ ಸೇವೆಯನ್ನು ಒದಗಿಸಲಾಗಿದೆ ಎಂದು ದೂರಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸಮಸ್ಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಯಾವುದೇ ಸರ್ಕಾರವು ಯೋಜನೆಯನ್ನು ಸ್ವಂತವಾಗಿ ಪ್ರಾರಂಭಿಸುವ ಅಧಿಕಾರವನ್ನು ಹೊಂದಿಲ್ಲ. ಆದರೆ, ಮೇಕೆದಾಟು ಅಣೆಕಟ್ಟೆಯನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) 2018 ರಲ್ಲಿ ಕರ್ನಾಟಕಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಅನುಮತಿ ನೀಡಿತ್ತು. ಇದನ್ನು 2021 ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲ್ಲಿಸಿದ್ದರು. ಈ ಪ್ರಸ್ತಾವನೆ ಕುರಿತು ಚರ್ಚೆಯೇ ಆಗಿಲ್ಲ. ಸಿಡಬ್ಲ್ಯೂಸಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿಲ್ಲ ಅಥವಾ ಕರ್ನಾಟಕಕ್ಕೆ ಹಿಂತಿರುಗಿಸಿಲ್ಲ ಎಂದು ಹೇಳಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ, ಚೆನ್ನೈ ಸೇರಿದಂತೆ 38 ಜಿಲ್ಲೆಗಳ ಸುಮಾರು ಐದು ಕೋಟಿ ಜನರಿಗೆ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 25 ಲಕ್ಷ ಎಕರೆ ಕೃಷಿ ಭೂಮಿ ಬಂಜರಾಗಿ, ಆಹಾರ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪಾಂಡಿಯನ್ ಆರೋಪಿಸಿದರು.