ಆತ್ಮಹತ್ಯೆ ಕೇಸ್ : ಹೊಸನಗರ ತಹಸೀಲ್ದಾರ್‌ ಸೇರಿ 7 ಜನರ ವಿರುದ್ಧ ಎಫ್‌ಐಆರ್‌

By Kannadaprabha NewsFirst Published Dec 9, 2019, 9:08 AM IST
Highlights

ಆಹಾರ ನಿರೀಕ್ಷಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಸೇರಿ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ನರಸಿಂಹರಾಜಪುರ [ಡಿ.09]:  ತಾಲೂಕಿನ ಮುಡುಬಾ ಸೇತುವೆ ಸಮೀಪದ ತುಂಗಾ ನದಿಯಲ್ಲಿ ಹೊಸನಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಐಡಿ ದತ್ತಾತ್ರೇಯ ಎಂಬುವರು ಶನಿವಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಅವರ ಪತ್ನಿ ಅನುಸೂಯಾ ಅವರ ದೂರನ್ನು ಪಡೆದ ಎನ್‌.ಆರ್‌.ಪುರ ಪೊಲೀಸರು ಹೊಸನಗರ ತಾಲೂಕು ಕಚೇರಿ ತಹಸೀಲ್ದಾರ್‌ ಸೇರಿದಂತೆ 7 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದತ್ತಾತ್ರೇಯ ಅವರ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿರುವಂತೆ, ಪತಿ ದತ್ತಾತ್ರೇಯ ಅವರು 1997- 98ರಿಂದ ಹೊಸನಗರ ತಾಲೂಕಿನ ನಗರ ಹೋಬಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ, ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2019ರ ಆಗಸ್ಟ್‌ನಲ್ಲಿ ಮುಂಬಡ್ತಿ ಹೊಂದಿ ಹೊಸನಗರಕ್ಕೆ ಆಹಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಮೇಲೆ 2003 ರಲ್ಲಿ ನಕಲಿ ಹಕ್ಕುಪತ್ರ ನೀಡಿದ ಬಗ್ಗೆ ಶಶಿಕಲಾ ಎಂಬವರಿಂದ ಎಸ್‌.ಸಿ- ಎಸ್‌.ಟಿ. ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೊಸನಗರ ತಹಸೀಲ್ದಾರ್‌ ಶ್ರೀಧರಮೂರ್ತಿ ಅವರು ನನ್ನ ಪತಿ ರಜೆ ನೀಡಿ ಎಂದು ಅರ್ಜಿ ನೀಡಿದರೂ, ರಜೆ ಮಂಜೂರು ಮಾಡದೆ, ಸಂಬಳವನ್ನೂ ನೀಡದೆ ಸತಾಯಿಸುತ್ತಿದ್ದರು ಎಂದಿದ್ದಾರೆ.

ಶಿವಮೊಗ್ಗ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು...

ಹೊಸನಗರ ತಹಸೀಲ್ದಾರ್‌ ಶ್ರೀಧರಮೂರ್ತಿ ಅವರನ್ನು ನನ್ನ ಪತಿ ಭೇಟಿ ಮಾಡಲು ಹೋದಾಗ ಏನನ್ನೂ ಮಾತನಾಡಿಸದೇ ತೊಂದರೆ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ನನ್ನ ಪತಿಯು ಡಿ.7ರಂದು ಬೆಳಗ್ಗೆ 6 ಗಂಟೆಗೆ ತೀರ್ಥಹಳ್ಳಿಯಲ್ಲಿ ಶಾಸಕರನ್ನು ಭೇಟಿ ಮಾಡಿ ಬರುವುದಾಗಿ ಹೋಗಿದ್ದಾರೆ. 10 ಗಂಟೆಗೆ ನನಗೆ ಕರೆ ಮಾಡಿ ನನಗೆ ತಂಬಾ ಬೇಜಾರು ಆಗಿದೆ. ನಾನು ಬರುವುದಿಲ್ಲ, ಬೇಜಾರು ಮಾಡಿಕೊಳ್ಳಬೇಡ. ನಾನು ಮುಡುಬ ಸೇತುವೆ ಬಳಿ ಇದ್ದೇನೆ. ನೀವು ಇಲ್ಲಿಗೆ ಬನ್ನಿ ಎಂದು ಪೋನ್‌ ಕಟ್‌ ಮಾಡಿದರು ಎಂದು ತಿಳಿಸಿದ್ದಾರೆ.

ಮಗಳು ಸುಧಾ, ಅಳಿಯ ಸುರೇಶ್‌ ಹಾಗೂ ಮಕ್ಕಳೊಂದಿಗೆ ಮುಡುಬ ಸೇತುವೆ ಬಳಿ ಬಂದಾಗ ನನ್ನ ಪತಿಯ ಮೃತದೇಹ ನೀರಿನಲ್ಲಿ ತೇಲುತ್ತಿತ್ತು. ಪತಿಯ ಸಾವಿಗೆ ಕಾರಣರಾದ ತಹಸೀಲ್ದಾರ್‌ ಶ್ರೀಧರಮೂರ್ತಿ ಹಾಗೂ ಎಸ್‌.ಸಿ. ಹಾಗೂ ಎಸ್‌.ಟಿ. ಕಾಯ್ದೆ ಕೇಸಿನಲ್ಲಿ ರಾಜಿ ಮಾಡಿಸುತ್ತೇವೆ ಎಂದು ಸತಾಯಿಸಿದ್ದ ಕುಂದಾಪುರ ತಾಲೂಕಿನ ಹೊಸನಗಾಡಿ ಡಿ.ಎಸ್‌.ಎಸ್‌. ಸಂಚಾಲಕ ಆನಂದ ಕಾರ್ವೆ, ಹೊಸನಗರ ತಾಲೂಕಿನ ನುಲಿಗೆರೆ ಗ್ರಾಮದ ನಾಗೇಂದ್ರ, ವಿಠಲ, ಮುರುಗೇಶ್‌, ಶಶಿಕಲಾ ಮತ್ತು ವನಜಾಕ್ಷಿ ಅವರ ಕಿರುಕುಳವೇ ನನ್ನ ಪತಿಯ ಸಾವಿಗೆ ಕಾರಣರಾಗಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

click me!