ಬಾಗಲಕೋಟೆಯಲ್ಲಿ ಕಣ್ಮನ ಸೆಳೆದ ಕಾಲೇಜು​ ವಿದ್ಯಾರ್ಥಿಗಳ ಫುಡ್​ ಫೆಸ್ಟಿವಲ್

By Govindaraj SFirst Published Aug 4, 2022, 3:26 PM IST
Highlights

ಅವರೆಲ್ಲಾ ಇನ್ನೂ ಕಲಿಕೆಯಲ್ಲಿ ಇರುವ ಮಹಿಳಾ ವಿದ್ಯಾರ್ಥಿಗಳು, ಅವರಿಗಾಗಿ ಅಲ್ಲೊಂದು ಕಲಿಕಾ ಆಹಾರ ಮಾರಾಟ ಮೇಳವನ್ನ ಆಯೋಜಿಸಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಪ್ರದರ್ಶನದ ಜೊತೆ ಜೊತೆಗೆ ವಿವಿಧ ಖಾದ್ಯಗಳ ತಯಾರಿಕೆ ಮಾಡಿದ್ದರಿಂದ, ಮಾರಾಟ ಭರ್ಜರಿಯಾಗಿಯೇ ನಡೆದಿತ್ತು. ಎಲ್ಲೆಲ್ಲೂ ಕಾಲೇಜ್​ ಹುಡುಗಿಯರು ಫುಲ್ ಬ್ಯುಸಿಯಾಗಿದ್ದರು.

ವರದಿಗಾರ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್​ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಆ.04): ಅವರೆಲ್ಲಾ ಇನ್ನೂ ಕಲಿಕೆಯಲ್ಲಿ ಇರುವ ಮಹಿಳಾ ವಿದ್ಯಾರ್ಥಿಗಳು, ಅವರಿಗಾಗಿ ಅಲ್ಲೊಂದು ಕಲಿಕಾ ಆಹಾರ ಮಾರಾಟ ಮೇಳವನ್ನ ಆಯೋಜಿಸಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಪ್ರದರ್ಶನದ ಜೊತೆ ಜೊತೆಗೆ ವಿವಿಧ ಖಾದ್ಯಗಳ ತಯಾರಿಕೆ ಮಾಡಿದ್ದರಿಂದ, ಮಾರಾಟ ಭರ್ಜರಿಯಾಗಿಯೇ ನಡೆದಿತ್ತು. ಎಲ್ಲೆಲ್ಲೂ ಕಾಲೇಜ್​ ಹುಡುಗಿಯರು ಫುಲ್ ಬ್ಯುಸಿಯಾಗಿದ್ದರು. ಇದೊಂದು ವಿದ್ಯಾರ್ಥಿನಿಯರ ಕಲಿಕಾ ಆಹಾರ ಮಾರಾಟ ಮೇಳ.

ಇಲ್ಲಿ ಎಲ್ಲಿ ನೋಡಿದರೂ ಲಘುಬಗೆಯಿಂದ ಓಡಾಡುತ್ತಿದ್ದ ಕಾಲೇಜ್​ ಹುಡುಗಿಯರು, ನೋಡಿದಷ್ಟು ಬಾಯಲ್ಲಿ ನೀರೂರಿಸುವಷ್ಟು ದೇಶದ ವಿವಿಧ ರಾಜ್ಯಗಳ ವಿವಿಧ ಬಗೆಯ ಖಾದ್ಯಗಳು, ಬಂದವರಿಗೆ ಮಾರಾಟ ಮಾಡಿ ಕಲಿಕಾ ಹಂತದಲ್ಲಿಯೇ ಮಾರಾಟ ಜ್ಞಾನ ಪಡೆಯುತ್ತಿದ್ದ ಮಹಿಳಾ ವಿದ್ಯಾರ್ಥಿಗಳು. ಅಂದಹಾಗೆ ಇಂತಹವೊಂದು ಕಲಿಕಾ ಆಹಾರ ಮಾರಾಟ ಮೇಳ ಕಂಡು ಬಂದಿದ್ದು, ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಹೌದು! ನಗರದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಕಲಿಕಾ ಆಹಾರ ಮಾರಾಟ ಮೇಳವೊಂದನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ 21 ಸ್ಟಾಲ್​ಗಳನ್ನ ಹಾಕಲಾಗಿತ್ತು, ಈ ಮಧ್ಯೆ 100ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಿದ್ದರು. 

ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ

ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಪರಿಚಯಿಸಿದ ಕಲಿಕಾ ಆಹಾರ ಮಾರಾಟ ಮೇಳ: ಬಸವೇಶ್ವರ ಕಾಮರ್ಸ್‌ ಕಾಲೇಜಿ​ನಲ್ಲಿ ಆಯೋಜಿಸಿದ್ದ ಈ ಕಲಿಕಾ ಆಹಾರ ಮಾರಾಟ ಮೇಳ ಕೇವಲ ಕಲಿಕೆ ಮತ್ತು ಮಾರಾಟಕ್ಕೆ ಸೀಮಿತವಾಗಿರದೇ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನ ಪರಿಚಯಿಸುವ ಕೇಂದ್ರವಾಗಿ ಪರಣಿಮಿಸಿತ್ತು. ಯಾಕೆಂದರೆ ವಿದ್ಯಾರ್ಥಿನಿಯರು ಅಂದು ವಿವಿಧ ಬಗೆಯ ಬಟ್ಟೆಯನ್ನ ಧರಿಸಿ ಬಂದಿದ್ದರು. ನೋಡಿದವರು ಇದೇನಪ್ಪಾ ಆಶ್ಚರ್ಯ ಅಂತಿದ್ರು. ಯಾಕಂದ್ರೆ ವಿದ್ಯಾರ್ಥಿನಿಯರು ಈ ಕಲಿಕಾ ಮಾರಾಟ ಮೇಳದಲ್ಲಿ ವಿವಿಧ ರಾಜ್ಯಗಳ ಮಾದರಿ ಬಟ್ಟೆಗಳನ್ನ ಧರಿಸಿ ಬಂದಿದ್ದರು. 

ಕರ್ನಾಟಕ ಸೇರಿದಂತೆ ದೇಶದ ಮಹಾರಾಷ್ಟ್ರ, ಪಂಜಾಬ್, ಆಂಧ್ರ, ಪಂಜಾಬ್​, ಬಿಹಾರ, ಕೇರಳ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ವೇಷಭೂಷಣವನ್ನ ಹೊತ್ತು ವಿದ್ಯಾರ್ಥಿಗಳು ಗಮನ ಸೆಳೆಯುತ್ತಿದ್ದರು. ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ವಿವಿಧ ವಸ್ತುಗಳನ್ನು ತಯಾರಿಸೋದು ಸೇರಿದಂತೆ ಮಾರಾಟವನ್ನ ತಿಳಿಸಿ ಅವರ ಭವಿಷ್ಯತ್ತಿಗೆ ಅನುಕೂಲ ಕಲ್ಪಿಸುವುದೇ ಮೂಲ ಉದ್ದೇಶವಾಗಿದೆ ಎಂದು ಬಸವೇಶ್ವರ ಕಾಮರ್ಸ್‌ ಕಾಲೇಜ್​ನ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ, ಉಪನ್ಯಾಸಕಿ ನಂದಿನಿ ಹೇಳಿದರು. 

ಬಾಯಲ್ಲಿ ನೀರೂರಿಸಿದ ದೇಶದ ವಿವಿಧ ರಾಜ್ಯಗಳ ರುಚಿ ರುಚಿ ಖಾದ್ಯಗಳು: ಈ ಮಧ್ಯೆ ವಿದ್ಯಾರ್ಥಿನಿಯರ ಕಲಿಕಾ ಆಹಾರ ಮಾರಾಟ ಮೇಳದಲ್ಲಿ ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ರಾಜ್ಯಗಳ ತಿಂಡಿ ತಿನಿಸು ಮಾಡುವುದರ ಜೊತೆಗೆ ಆಯಾ ರಾಜ್ಯಗಳ ಸಂಸ್ಕೃತಿಯನ್ನ ಬಿಂಬಿಸುವಂತಾಗಿತ್ತು. ಇನ್ನು ರುಚಿಯಾದ ಖಾದ್ಯಗಳ ಪೈಕಿ ಉತ್ತರ ಕರ್ನಾಟಕದ ಖಡಕ್​ ರೊಟ್ಟಿ, ಪಲ್ಯೆ, ಹೋಳಿಗೆ ಚಪಾತಿ, ವಿವಿಧ ರೀತಿ ರೈಸ್​ ಐಟಮ್ಸ್​ ಜೊತೆಗೆ ಬೇರೆ ಬೇರೆ ರಾಜ್ಯಗಳ ಲಾಡು, ಪುರಿ ಬಾಜಿ, ಪರೋಟಾ, ಜ್ಯೂಸ್, ವಡಾ, ಪಾವ್‌ಬಾಜಿ, ಪಾನಿಪುರಿ ಹೀಗೆ ಒಂದೆ ಎರಡೇ ನೂರಾರು ತರಹದ ಖಾದ್ಯಗಳನ್ನ ಮಾಡಿದ್ದನ್ನ ನೋಡಿದರೆ ಎಂತವರ ಬಾಯಲ್ಲೂ ನೀರು ತರಿಸುವಂತಿದ್ದವು. 

ಇನ್ನು ಬಂದಂತಹ ಸಾರ್ವಜನಿಕರಿಗೆ ಆಯಾ ರಾಜ್ಯಗಳ ಖಾದ್ಯಗಳ ಪರಿಚಯ ಮಾಡಿಕೊಟ್ಟು ಅವುಗಳ ವಿಶೇಷತೆಯನ್ನ ತಿಳಿಸುವಲ್ಲಿ ವಿದ್ಯಾರ್ಥಿನಿಯರು ಫುಲ್ ಬ್ಯುಸಿಯಾಗಿದ್ದರು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿನಿಯರು ಸಹ ಭಾಗವಹಿಸಿ ಮೇಳದಲ್ಲಿ ಪಾಲ್ಗೊಂಡಿದ್ದರು. ಇತ್ತ ಆಹಾರ ಮೇಳಕ್ಕೆ ಬಂದ ಸಾರ್ವಜನಿಕರಲ್ಲಿ ವಿವಿಧ ಬಗೆಯ ಖಾದ್ಯಗಳನ್ನ ನೋಡಿ ಬಾಯಲ್ಲಿ ನೀರೂರಿಸುವಂತಾಗಿತ್ತು. ಇಂತಹ ಮೇಳದ ಮೂಲಕ ವಿದ್ಯಾರ್ಥಿಗಳಿಗೆ ಇನ್ನಷ್ಟು ವ್ಯವಹಾರಿಕ ಜ್ಞಾನ ಸಿಕ್ಕು ಅತ್ಯಂತ ಅನುಕೂಲವಾಗಲಿದೆ ಎಂದು ಉಪನ್ಯಾಸಕರಾದ ಡಾ.ನಂಜುಂಡಸ್ವಾಮಿ ಹೇಳಿದರು. 
                
ಕಲಿಕೆ ಜೊತೆ ಜೊತೆಗೆ ಮಾರಾಟ ಪದ್ದತಿ ಕಲಿಸಿಕೊಟ್ಟ ಆಹಾರ ಮೇಳ: ಇನ್ನು ಈ ಕಲಿಕಾ ಆಹಾರ ಮಾರಾಟ ಮೇಳವು ಕೇವಲ ಮಾರಾಟ ಮೇಳವಾಗಿರಲಿಲ್ಲ, ಬದಲಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಭವಿಷ್ಯದಲ್ಲಿ ಅವಶ್ಯವಾಗಿದ್ದ ಮಾರಾಟ ಪ್ರಕ್ರಿಯೆ ಜ್ಞಾನವನ್ನು ನೀಡುವ ಕೇಂದ್ರವಾಗಿ ಪರಿಣಮಿಸಿತ್ತು. ಇದಕ್ಕಾಗಿ ಉಪನ್ಯಾಸಕರು ವಿದ್ಯಾರ್ಥಿಗಳನ್ನ ಪ್ರೇರಿಪಿಸುವ ಕೆಲಸ ಮಾಡಿದರು. ತಮ್ಮ ಉಪನ್ಯಾಸಕರು ಹೇಳಿದಂತೆ ಪ್ಲ್ಯಾನ್ ರೆಡಿ ಮಾಡಿಕೊಂಡ ವಿದ್ಯಾರ್ಥಿನಿಯರು ತಾವೇ ನಾಲ್ಕೈದು ಜನರು ಸೇರಿ ಗುಂಪುಗಳನ್ನ ಮಾಡಿಕೊಂಡರು. ದೇಶದ ವಿವಿಧ ರಾಜ್ಯದ ಒಂದಿಷ್ಟು ತಿಂಡಿ ತಿನಿಸು ತಯಾರಿಕೆಯಲ್ಲಿ ತೊಡಗಿದರು. 

ಸಿದ್ದರಾಮೋತ್ಸವಕ್ಕೆ ಬಾದಾಮಿಯಿಂದ 25 ಸಾವಿರ ಜನ, 600 ವಾಹನಗಳು ಬುಕ್

ಇವುಗಳ ಮಧ್ಯೆ ಆಹಾರ ಮೇಳಕ್ಕೆಂದು ಬಂದವರು ವಿದ್ಯಾರ್ಥಿಗಳಿಗೆ ಹಣ ನೀಡಿ ಖಾದ್ಯವನ್ನ ಖರೀದಿಸಿ ತಿನ್ನಲು ಮುಂದಾಗಿದ್ರು, ಇದ್ರಿಂದ ಅತ್ತ ಬಂದ ಸಾರ್ವಜನಿಕರಿಗೆ ದೇಶದ ವಿವಿಧ ಖಾದ್ಯಗಳನ್ನ ಒಂದೇ ಕಡೆಗೆ ತಿಂದೆವು ಅನ್ನೋ ಸಂತೃಪ್ತಿ ಇದ್ದರೆ, ಇತ್ತ ವಿದ್ಯಾರ್ಥಿನಿಯರಿಗೆ ಖಾದ್ಯ ತಯಾರಿಸಿ, ಮಾರಾಟ ಮಾಡಿ ಕಲಿಕೆಯಲ್ಲಿ ಯಶಸ್ವಿ ಕಂಡೆವು ಅನ್ನೋ ಭಾವ ನೆಮ್ಮದಿ ನಮಗಿದೆ ಎಂದು ವಿದ್ಯಾರ್ಥಿನಿ ಅಪೂರ್ವ ಹೇಳಿದರು. ಒಟ್ಟಿನಲ್ಲಿ  ಬಾಗಲಕೋಟೆಯ ಬಸವೇಶ್ವರ ಕಾಮರ್ಸ್‌ ಕಾಲೇಜ್​ನಲ್ಲಿ ನಡೆದ ಕಲಿಕಾ ಮತ್ತು ಆಹಾರ ಮಾರಾಟ ಮೇಳ ಯಶಸ್ವಿಯಾಗುವುದರ ಜೊತೆಗೆ ಕಲಿಕಾ ವಿದ್ಯಾರ್ಥಿಗಳಿಗೆ ಮತ್ತಷ್ಟು ವಾಣಿಜ್ಯ ಕಲಿಕೆಗೆ ಪ್ರೇರಣೆಯಾಗಿತ್ತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಜಗನ್ನಾಥ ಚವ್ಹಾಣ, ಉಪನ್ಯಾಸಕರದ ಬಸವರಾಜ್ ಕುಂಬಾರ, ಖೋತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

click me!