ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳ್ದಿದ್ದು ರೋಡ್ ಇದ್ದಂಗೆ ಸಾಫಾಗ್ ಹಳ್ಳ ತಿಟ್ಟ್ ಇಲ್ದಂಗೆ ಮಡಿಕೇರಿ ಮೇಲ್ ಮಂಜು ಎನ್ನುವ ಕನ್ನಡದ ಪ್ರಸಿದ್ಧ ಕವಿ ಜಿ.ಪಿ ರಾಜರತ್ನಂ ಅವರ ಕವಿತೆಯನ್ನು ನೀವು ಕೇಳಿಯೇ ಇರ್ತೀರಾ. ಆ ಸಾಲುಗಳನ್ನು ಕವಿ ರಾಜರತ್ನಂ ಅವರು ಮಳೆಗಾಲದಲ್ಲಿ ಮಡಿಕೇರಿಯನ್ನು ನೋಡಿಯೇ ಬರೆದಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.26): ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳ್ದಿದ್ದು ರೋಡ್ ಇದ್ದಂಗೆ ಸಾಫಾಗ್ ಹಳ್ಳ ತಿಟ್ಟ್ ಇಲ್ದಂಗೆ ಮಡಿಕೇರಿ ಮೇಲ್ ಮಂಜು ಎನ್ನುವ ಕನ್ನಡದ ಪ್ರಸಿದ್ಧ ಕವಿ ಜಿ.ಪಿ ರಾಜರತ್ನಂ ಅವರ ಕವಿತೆಯನ್ನು ನೀವು ಕೇಳಿಯೇ ಇರ್ತೀರಾ. ಆ ಸಾಲುಗಳನ್ನು ಕವಿ ರಾಜರತ್ನಂ ಅವರು ಮಳೆಗಾಲದಲ್ಲಿ ಮಡಿಕೇರಿಯನ್ನು ನೋಡಿಯೇ ಬರೆದಿದ್ದಾರೆ. ಆ ಸಾಲುಗಳನ್ನು ಮಳೆಗಾಲಕ್ಕೂ ಮುನ್ನವೇ ಮಡಿಕೇರಿ ನೆನಪಿಸುತ್ತಿದೆ. ಹೌದು ಕಳೆದ ಎಂಟು ಒಂಭತ್ತು ತಿಂಗಳುಗಳಿಂದ ಮಳೆಯೇ ಇಲ್ಲದೆ ಬಿಸಿಲ ನಾಡು ಎನ್ನುವಂತೆ ಆಗಿದ್ದ ಮಡಿಕೇರಿ, ಕಳೆದ ಹದಿನೈದು ದಿನಗಳಿಂದ ಸುರಿದ ಪೂರ್ವ ಮುಂಗಾರು ಮಳೆಗೆ ಸಂಪೂರ್ಣ ಬದಲಾಗಿ ಹೋಗಿದೆ.
ಬೆಳಿಗ್ಗೆ, ಸಂಜೆ ವೇಳೆಯಲ್ಲಿ ಬೆಟ್ಟ, ಗುಡ್ಡಗಳ ಸಾಲುಗಳಿಂದಲೇ ಕೂಡಿರುವ ಮಡಿಕೇರಿ ನಗರದ ಬೀದಿ ಬೀದಿಗಳಲ್ಲಿ ಮಂಜಿನ ಮೆರವಣಿಗೆ ನಡೆಯುತ್ತಿದೆ. ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇಡೀ ಮಡಿಕೇರಿ ಕೂಲ್ ಕೂಲ್ ಆಗಿದ್ದು, ಚುಮು ಚುಮು ಚಳಿ ಹೊಡೆಯುತ್ತಿದೆ. ಮತ್ತೊಂದೆಡೆ ದಟ್ಟ ಮಂಜು ಸುರಿಯುತ್ತಿದೆ. ಹೀಗಾಗಿ ಮಡಿಕೇರಿ ಈಗ ಅಕ್ಷರಶಃ ದಕ್ಷಿಣ ಭಾರತದ ಸ್ವಿಡ್ಜರ್ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎನ್ನುವ ಉಪಮೇಯದ ಹೆಸರುಗಳಿಗೆ ತಕ್ಕಂತೆ ಬದಲಾಗಿದೆ. ಬೆಳಿಗ್ಗೆ ಸಂಜೆ ಅಷ್ಟೇ ಅಲ್ಲ, ಆಗಿಂದಾಗ್ಗೆ ದಟ್ಟನೆ ಮಂಜು ಮಡಿಕೇರಿಯನ್ನು ಹಾದು ಸಾಗುತ್ತಿದ್ದರೆ ಹಿಮ ಪರ್ವತವೇ ಮಡಿಕೇರಿಗೆ ಇಳಿದಂತೆ ಕಾಣುತ್ತಿದೆ.
ಕಾಂಗ್ರೆಸ್ಸಿಗೆ ರಾಜ್ಯ ಸರ್ಕಾರವೇ ಎಟಿಎಂ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹಚ್ಚ ಹಸಿರಿನ ಬೆಟ್ಟಗಳ ನಡುವೆ ಇರುವ ಮಡಿಕೇರಿ ಎತ್ತ ನೋಡಿದರೂ ಮಂಜಿನ ರಾಶಿಯನ್ನೇ ನೋಡಿದಂತೆ ಆಗುತ್ತಿದೆ. ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಂಜು ಕವಿ ರಾಜರತ್ನಂ ಅವರ ಪದ್ಯದ ಸಾಲು ಬೆಳ್ಳಿ ಬಳಿದಿದ್ದ್ ರೋಡ್ ಇದ್ದಂಗೆ ಎನ್ನುವಂತೆ ರಸ್ತೆಗಳೇ ಕಾಣದಂತೆ ಸಂಪೂರ್ಣ ಬೆಳ್ಳಗೆ ಹೊಳೆಯುತ್ತಿವೆ. ಇದರಿಂದಾಗಿ ವಾಹನಗಳ ಚಾಲನೆ ಮಾಡುವುದೇ ದುಃಸ್ಥರ ಎನ್ನುವಂತೆ ಆಗಿದೆ. ವಾಹನ ಸವಾರರು ಲೈಟ್ಗಳನ್ನು ಹಾಕಿಕೊಂಡೇ ಚಾಲನೆ ಮಾಡಬೇಕಾಗಿದೆ. ಹೀಗೆ ಜಿಟಿಜಿಟಿ ಮಳೆ ಅಲ್ಲದಿದ್ದರೂ, ಹಾಗಿಂದಾಗ್ಗೆ ಸಾಧಾರಣವಾಗಿ ಸುರಿಯುತ್ತಿರುವ ಮಳೆ, ಮಳೆಯ ಜೊತೆ ಜೊತೆಗೆ ಸುರಿಯುತ್ತಿರುವ ಮಂಜು ಮಡಿಕೇರಿಗೆ ಹಿಂದಿನ ಗತವೈಭವವನ್ನು ತಂದಿದೆ.
ಹೊರ ಜಿಲ್ಲೆ, ರಾಜ್ಯಗಳಿಂದ ಕೊಡಗಿಗೆ ಬರುತ್ತಿರುವ ಪ್ರವಾಸಿಗರು ಕೊಡಗಿನ ಈ ಕೂಲ್ ಕೂಲ್ ಪರಿಸರವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸ್ಥಳೀಯರಾದ ವೀಣಾಕ್ಷಿ ಕಳೆದ ವರ್ಷ ಮಳೆಯ ತೀವ್ರ ಕೊರತೆಯಿಂದಾಗಿ ಮಂಗಳೂರು ಅಥವಾ ಕೇರಳಗಳಲ್ಲಿ ಇರುವ ಅತೀ ಹೆಚ್ಚಿನ ಬಿಸಿ ವಾತಾವರಣದ ಅನುಭವ ಬೇಸಿಗೆಯಲ್ಲಿ ಮಡಿಕೇರಿಯಲ್ಲಿ ಇತ್ತು. ಎಂಟು ಒಂಭತ್ತು ತಿಂಗಳಿನಿಂದ ಇಡೀ ಜಿಲ್ಲೆ ಬಯಲು ಸೀಮೆಯ ಬಿಸಿಲ ನಾಡಾಗಿತ್ತು. ಆದರೀಗ ಕಳೆದ ಹದಿನೈದು ದಿನಗಳಿಂದ ಸುರಿದ ಮಳೆಗೆ ಇದೀಗ ಕೊಡಗು ಮತ್ತೆ ತನ್ನ ವೈಭವ ಪಡೆದುಕೊಂಡಿದ್ದು ಬರುವ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ
ಒಟ್ಟಿನಲ್ಲಿ ಬೇಸಿಗೆಯಲ್ಲಿ ಬಿರು ಬಿಸಿಲಿನಿಂದ ಬೆಂದಿದ್ದ ಇಡೀ ಜಿಲ್ಲೆ ಈಗ ಮಳೆ, ಮಂಜಿನಿಂದ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ. ಕಳೆದ ಕೆಲವು ತಿಂಗಳಿನಿಂದ ಮಡಿಕೇರಿಗೆ ಪ್ರವಾಸಕ್ಕೆ ಬರಲು ಪ್ರವಾಸಿಗರು ಹಿಂದು ಮುಂದು ನೋಡುತ್ತಿದ್ದರು. ಯಾವುದೇ ಜಲಾಶಯಗಳಲ್ಲಿ ನೀರಿಲ್ಲದೆ ಎಲ್ಲವೂ ಬಣಗುಡುತ್ತಿದ್ದವು. ಆದರೀಗ ಎಲ್ಲವೂ ಬದಲಾಗಿದ್ದು, ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.