Dharwad Floods: ಸಾಧಾರಣ ಮಳೆಗೂ ಮಹಾನಗರ ತಲ್ಲಣ!

By Kannadaprabha News  |  First Published Oct 16, 2022, 9:54 AM IST
  • ಸಾಧಾರಣ ಮಳೆಗೂ ಮಹಾನಗರ ತಲ್ಲಣ
  • ಕಸ-ಕಡ್ಡಿಯಿಂದ ಬ್ಲಾಕ್‌ ಆಗುವ ನೀರು ಹೋಗುವ ಸ್ಥಳ
  • ವ್ಯಾಪಾರ-ವಹಿವಾಟ, ಸಂಚಾರಕ್ಕೂ ತೊಂದರೆ
  • ಹೂಳು ತುಂಬಿದ ಗಟಾರು, ಹರಿಯದ ನೀರು

ಬಸವರಾಜ ಹಿರೇಮಠ

ಪ್ರವಾಹ ಪ್ರಹಸನ-04

Tap to resize

Latest Videos

ಧಾರವಾಡ (ಅ.16) : ಹುಬ್ಬಳ್ಳಿ-ಧಾರವಾಡ ನಗರಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದು ದಾಖಲೆಗಳಲ್ಲಿ ಮಾತ್ರ ಸಾಬೀತಾಗಿದೆಯೇ ಹೊರತು ಭೌತಿಕವಾಗಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಅವಳಿ ನಗರದಲ್ಲಿ ಸಿಮೆಂಟ್‌ ರಸ್ತೆ, ಗಟಾರು, ಒಳಚರಂಡಿ, 24 ಗಂಟೆ ನಿರಂತರ ನೀರು, ಗ್ಯಾಸ್‌ ಪೈಪ್‌ಲೈನ್‌ ಅಭಿವೃದ್ಧಿ ಕಾಮಗಾರಿಗಳು ಹತ್ತಾರು ವರ್ಷಗಳಿಂದ ನಡೆಯುತ್ತಿವೆ. ನಿಗದಿತ ಅವಧಿಗೆ ಪೂರ್ಣಗೊಳ್ಳದೆ ಒಂದೊಂದು ಕಾಮಗಾರಿಗಳು ನಗರದಲ್ಲಿ ಅವಾಂತರ ಸೃಷ್ಟಿಸುತ್ತಿವೆ.

 

Heavy Rain: ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಒಂದು ಬಲಿ

ಈ ಮೊದಲೂ ಸಾಕಷ್ಟುಮಳೆಯಾದರೂ ಇತ್ತೀಚಿನ ವರ್ಷಗಳಲ್ಲಿ ಉಂಟಾದಷ್ಟುಮಳೆಯ ಕಿರಿಕಿರಿ ಆಗ ಉಂಟಾಗಿರಲಿಲ್ಲ. ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ತಗ್ಗು-ಗುಂಡಿ, ಚರಂಡಿಗಳು ಮಣ್ಣು, ಕಸ-ಕಡ್ಡಿಯಿಂದ ಹೂಳು ತುಂಬುತ್ತಿವೆ. ಸಾಧಾರಣ ಪ್ರಮಾಣದ ಒಂದೇ ಮಳೆಯಾದರೂ ಸಹ ಈ ಎರಡು ನಗರಗಳು ತಲ್ಲಣಗೊಳ್ಳುತ್ತಿವೆ. ಕಳೆದ ವಾರದಿಂದ ಶುರುವಾಗಿರುವ ಮಳೆಯಿಂದ ಜನರು ಹೊರಬರದ ಸ್ಥಿತಿ ಉಂಟಾಗಿದೆ. ವಾಹನ ಸವಾರರಂತೂ ರಸ್ತೆ ಮೇಲೆ ಸಂಚರಿಸಲು ಭಯ ಬೀಳುತ್ತಿದ್ದಾರೆ. ಸವಾರರು ತಗ್ಗು-ಗುಂಡಿಗಳಲ್ಲಿ ಮಾತ್ರವಲ್ಲದೇ ನದಿಯಂತಾಗುವ ರಸ್ತೆಗೆ ಬೆಚ್ಚಿಬೀಳುವಂತಾಗಿದೆ.

ಮಳೆಯಿಂದ ಟ್ರಾಫಿಕ್‌:

ಧಾರವಾಡ ಪೂರ್ವದಲ್ಲಿ ಇಳಿಜಾರು, ಪಶ್ಚಿಮದಲ್ಲಿ ಏರು ಮುಖವಾಗಿದೆ. ನಗರದ ಎಲ್ಲ ಮಾರುಕಟ್ಟೆಗಳು ಪೂರ್ವದಲ್ಲಿವೆ. ಸಣ್ಣ ಮಳೆಯಾದರೂ ಮಾರುಕಟ್ಟೆಯಲ್ಲಿ ನೀರು ನುಗ್ಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ಒಂದಾದ ಜ್ಯುಬಿಲಿ ವೃತ್ತದಲ್ಲೂ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುವ ಮೂಲಕ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ತಗ್ಗು ಪ್ರದೇಶಗಳಿಗೆ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿ ನಷ್ಟಉಂಟಾಗುತ್ತಿದ್ದು, ಮಳೆ ನೀರಿನಿಂದ ಜನರು, ವ್ಯಾಪಾರಸ್ಥರು ಬೇಸತ್ತು ಹೋಗಿದ್ದಾರೆ.

ಕಾರಣವೇನು?:

ಗಟಾರು ಸ್ವಚ್ಛ ಇಲ್ಲದೇ ಇರುವುದು, ಪ್ಲಾಸ್ಟಿಕ್‌ ನಿಷೇಧಿಸಿದ್ದರೂ ರಸ್ತೆ ಸೇರಿದಂತೆ ಅಲ್ಲಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಕಸದಿಂದ ಗಟಾರು ತುಂಬುತ್ತಿವೆ. ಸರಾಗವಾಗಿ ಹರಿದು ಹೋಗುವ ನೀರನ್ನು ಈ ಪ್ಲಾಸ್ಟಿಕ್‌ ತಡೆ ಹಿಡಿಯುತ್ತಿದೆ. ಮಳೆ ಬರುವ ಮುಂಚೆ ಪಾಲಕೆ ಸ್ವಚ್ಛಗೊಳಿಸಿದರೂ ಸಾರ್ವಜನಿಕರು ಎಲ್ಲೆಂದರಲ್ಲಿ ಗುಟಕಾ ಸೇರಿದಂತೆ ಪ್ಲಾಸ್ಟಿಕ್‌ ವಸ್ತು ಚೆಲ್ಲುತ್ತಿರುವ ಕಾರಣದಿಂದಲೇ ನೀರು ಹರಿಯದೇ ಬ್ಲಾಕ್‌ ಆಗುತ್ತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಈ ಮೊದಲು ತಗ್ಗು ಪ್ರದೇಶಗಳಲ್ಲಿ ಇದ್ದ ಕೆರೆಗಳಿಗೆ ನೀರು ಸರಾಗವಾಗಿ ಹರಿದು ಹೋಗಲು ಮಾರ್ಗಗಳಿದ್ದವು. ಆದರೆ ಇದೀಗ ಆ ಮಾರ್ಗಗಳಲ್ಲಿ ಅಕ್ರಮವಾಗಿ ಮನೆ, ರಸ್ತೆ ಹಾಗೂ ಇತರೆ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ನೀರು ರಸ್ತೆಯಲ್ಲಿಯೇ ನಿಲ್ಲುತ್ತದೆ. ಕೆಲಗೇರಿ, ಸಾಧನಕೇರಿ, ಕೋಳಿಕೆರೆ ಅಂತಹ ಕೆರೆಗಳಿಗೆ ಹೋಗುವ ನೀರು ಅನೇಕ ಕಡೆಗಳಲ್ಲಿ ಬ್ಲಾಕ್‌ ಆಗುತ್ತಿದ್ದು ರಸ್ತೆಯಲ್ಲಿ ಹೊಳೆಯೇ ಹರಿಯುತ್ತಿದೆ. ಸಾಧನಕೇರಿ, ಶ್ರೀನಗರ, ಮಾರುಕಟ್ಟೆಪ್ರದೇಶ, ಹಳೆ ಎಸ್ಪಿ ಕಚೇರಿ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇದರೊಂದಿಗೆ ಧಾರವಾಡದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ಇನ್ನೂ ಬಹುತೇಕ ಕಡೆಗಳಲ್ಲಿ ಸಂಪರ್ಕ ನೀಡಿಲ್ಲ. ಹೀಗಾಗಿ ಗಟಾರು ತುಂಬಲೂ ಇದು ಒಂದು ಕಾರಣವಾಗಿದೆ.

Hubballi: ಅವಳಿ ನಗರದಲ್ಲಿ ವರುಣನ ಆರ್ಭಟ: ಒಂದೇ ರಾತ್ರಿಯಲ್ಲಿ ಸುರಿಯಿತು 80ಮೀ.ಮಿ‌ ಮಳೆ!

ಧಾರವಾಡದಲ್ಲಿ ಆಗುತ್ತಿರುವ ಮಳೆ ನೀರನ್ನು ನಿರ್ವಹಿಸಲು ಆಡಳಿತ ವ್ಯವಸ್ಥೆ ಪರದಾಡುತ್ತಿದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತೆ, ಮಳೆಯಾದಾಗ ಮಹಾನಗರ ಪಾಲಿಕೆ ಸಿಬ್ಬಂದಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತಿದ್ದಾರೆ. ಮುಂದಾಲೋಚನೆ ಇಲ್ಲದೇ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಅವಳಿ ನಗರ ಮತ್ತಷ್ಟುಹಿಂದೆ ಹೋಗುತ್ತಿದೆ.

ದೀಪಕ ಚಿಂಚೋರೆ, ಕಾಂಗ್ರೆಸ್‌ ಮುಖಂಡರು

click me!