ಎಟಿಎಂನಲ್ಲಿ ಬರುತ್ತೆ ಬಿಸಿ ಬಿಸಿ ಇಡ್ಲಿ-ಸಾಂಬಾರ್‌..!

By Kannadaprabha News  |  First Published Oct 16, 2022, 9:00 AM IST

1 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಇಡ್ಲಿ ಲಭ್ಯ, ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿ ಫ್ರೆಶ್‌ ಹಾಟ್‌ ಸಂಸ್ಥೆಯಿಂದ ಶೀಘ್ರ ಆರಂಭ


ಸಂಪತ್‌ ತರೀಕೆರೆ

ಬೆಂಗಳೂರು(ಅ.16):  ಬಿಸಿ ಬಿಸಿ ಇಡ್ಲಿ, ಸಾಂಬಾರ್‌ ಸವಿಯಲು ಹೋಟೆಲ್‌ಗೆ ಹೋಗಬೇಕಿಲ್ಲ. ಅಯ್ಯೋ ತಡರಾತ್ರಿ ಆಯ್ತು ಇಡ್ಲಿ ತಿನ್ಬೇಕು ಅನ್ನಿಸುತ್ತಿದೆ. ಹೋಟೆಲ್‌ ಎಲ್ಲಾ ಬಾಗಿಲು ಹಾಕಿರುತ್ತವೇ ಎಂದು ಇನ್ಮುಂದೆ ಬೇಜಾರಾಗಬೇಕಿಲ್ಲ. ದಿನದ 24 ಗಂಟೆಯೂ ಇಡ್ಲಿ, ಸಾಂಬರ್‌ ಪ್ರಿಯರಿಗಾಗಿಯೇ ಆಲ್‌ ಟೈಮ್‌ ಇಡ್ಲಿ ಸಿಗುವ ‘ಇಡ್ಲಿ ವೆಂಡಿಂಗ್‌ ಮಶೀನ್‌’ (ಇಟಿಎಂ) ಬೆಂಗಳೂರಿಗೆ ಪಾದಾರ್ಪಣೆ ಮಾಡಿದೆ. ಬಿಳೇಕಹಳ್ಳಿಯ ವಿಜಯ ಬ್ಯಾಂಕ್‌ ಲೇಔಟ್‌ 5ನೇ ಮುಖ್ಯ ರಸ್ತೆಯಲ್ಲಿರುವ ವಿಜಯ ಕಾಂಪ್ಲೆಕ್ಸ್‌ನಲ್ಲಿ ಫ್ರೆಶ್‌ಹಾಟ್‌ ಸಂಸ್ಥೆ ಎಟಿಎಂ ಮಾದರಿಯಲ್ಲಿ ಹೊಸ ‘ಇಡ್ಲಿ ವೆಂಡಿಂಗ್‌ ಮಶೀನ್‌’ ಸ್ಥಾಪಿಸಿದೆ. ಯಾವಾಗ ಇಡ್ಲಿ ತಿನ್ನೇಕು ಅನ್ನಿಸುತ್ತದೆಯೋ ಆಗ ನೇರವಾಗಿ ಫ್ರೆಶ್‌ಹಾಟ್‌ ಎಕ್ಸ್‌ಪಿರಿಯನ್ಸ್‌ ಸೆಂಟರ್‌ಗೆ ಬಂದು ಬಗೆ ಬಗೆಯ ಇಡ್ಲಿ, ವಡೆ, ಸಾಂಬರ್‌, ಚಟ್ನಿ ಖರೀದಿಸಿ ಸವಿಯಬಹುದು.

Tap to resize

Latest Videos

ನೀವು ಫ್ರೆಶ್‌ಹಾಟ್‌ ಆ್ಯಪ್‌ ಮೂಲಕ ಆರ್ಡರ್‌ ಮಾಡಿ, ಆ ನಂತರ ಕ್ಯೂಆರ್‌ ಕೋಡ್‌ ಬರುತ್ತದೆ. ಇಡ್ಲಿ ವೆಂಡಿಂಗ್‌ ಮಶೀನ್‌ನಲ್ಲಿರುವ ಸ್ಟಾರ್ಟ್‌ ಬಟನ್‌ ಒತ್ತಿ, ಕ್ಯೂಆರ್‌ ಕೋಡ್‌ ತೋರಿಸಿದರೆ ಸಾಕು. ನೀವು ಎಷ್ಟುಇಡ್ಲಿ, ವಡೆ ಆರ್ಡರ್‌ ಮಾಡಿದ್ದೀರೋ ಅಷ್ಟನ್ನು ವೆಂಡಿಂಗ್‌ ಮಶೀನ್‌ ಮೂಲಕ ಪಡೆದುಕೊಳ್ಳಬಹುದು. ವಡೆ, ಇಡ್ಲಿ ಪ್ರತ್ಯೇಕವಾಗಿ ಪ್ಯಾಕ್‌ ಆಗಿ ಬರುತ್ತದೆ. ಬಳಿಕ ಮತ್ತೊಂದು ಮಶೀನ್‌ನಲ್ಲಿ ಮೊದಲಿನಂತೆ ಕ್ಯೂಆರ್‌ ಕೋಡ್‌ ಸ್ಕಾ್ಯನ್‌ ಮಾಡಿದರೆ ಚಟ್ನಿ, ಸಾಂಬರ್‌ ಪ್ಯಾಕಿಂಗ್‌ ಮೂಲಕ ಗ್ರಾಹಕರ ಕೈ ಸೇರುತ್ತದೆ. ವಿಶೇಷವೆಂದರೆ ಒಂದು ಪ್ಲೇಟ್‌ ಇಡ್ಲಿ, ವಡೆಯನ್ನು (2 ಇಡ್ಲಿ, 1 ವಡೆ) ಕೇವಲ ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಪ್ಯಾಕಿಂಗ್‌ ವ್ಯವಸ್ಥೆ ಕೂಡ ಪರಿಸರ ಸ್ನೇಹಿಯಾಗಿದ್ದು ಸ್ವಚ್ಛತೆ, ಆರೋಗ್ಯಕರ ಮತ್ತು ತಾಜಾತನದಿಂದ ಇರಲಿದೆ ಎಂದು ಫ್ರೆಶ್‌ಹಾಟ್‌ ಸಂಸ್ಥೆ ಮೂಲಗಳು ತಿಳಿಸಿವೆ.

Davanagere: ಹಿರಿಯ ನಾಗರಿಕರಿಗೆ ಎಟಿಮ್ ನಲ್ಲಿ ವಂಚಿಸುತ್ತಿದ್ದ ಕಳ್ಳ ಅಂದರ್!

ರೊಬೋಟಿಕ್‌ ತಂತ್ರಜ್ಞಾನ

ಇಡ್ಲಿ ವೆಂಡಿಂಗ್‌ ಮಶೀನ್‌ ಎಟಿಎಂ ಮಾದರಿಯಲ್ಲೇ ಕೆಲಸ ಮಾಡುತ್ತದೆ. ಈ ಮಶೀನ್‌ನಲ್ಲಿ ರೊಬೋಟಿಕ್‌ ತಂತ್ರಜ್ಞಾನ ಅಳವಡಿಸಲಾಗಿದ್ದು, ಇಡ್ಲಿ ಹಿಟ್ಟನ್ನು ಮಶೀನ್‌ನಲ್ಲಿ ಒಂದು ಕಂಟೈನರ್‌ನಲ್ಲಿ ಹಾಕಿ ಇಡಬೇಕು. ಉಳಿದದ್ದನ್ನು ರೊಬೋಟಿಕ್‌ ಯಂತ್ರವೇ ಮಾಡಿ ಮುಗಿಸುತ್ತದೆ. ತಾಜಾ ಇಡ್ಲಿ, ವಡೆಯನ್ನು ಸಿದ್ಧಪಡಿಸಿ ಪ್ಯಾಕ್‌ ಮಾಡಿ ಗ್ರಾಹಕರ ಕೈಗೆ ಇಡುತ್ತದೆ.

ಮೊದಲ ಹಂತದಲ್ಲಿ ಬಿಳೇಕಹಳ್ಳಿಯ ವಿಜಯಬ್ಯಾಂಕ್‌ ಲೇಔಟ್‌ನಲ್ಲಿ ಫ್ರೆಶ್‌ಹಾಟ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ ಮಾತ್ರ ತೆರೆಯಲಾಗಿದ್ದು, ಮುಂದಿನ ಕೆಲ ದಿನಗಳಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಫ್ರೆಶ್‌ಹಾಟ್‌ ಸಂಸ್ಥೆ ಇದೇ ಮಾದರಿಯ ಮಶೀನ್‌ಗಳನ್ನು ನಗರದ ವಿವಿಧ ಕಡೆಗಳಲ್ಲಿ ಸ್ಥಾಪಿಸುವ ಗುರಿ ಹೊಂದಿದೆ. ಹೋಟೆಲ್‌ ಬಾಗಿಲು ಮುಚ್ಚಿದೆ, ಊಟಕ್ಕೆ ಏನೂ ಸಿಗುತ್ತಿಲ್ಲ ಎಂದು ಯಾರು ಪರದಾಡಬೇಕಿಲ್ಲ. ಫ್ರೆಶ್‌ಹಾಟ್‌ನ ಇಡ್ಲಿ ವೆಂಡಿಂಗ್‌ ಮಶೀನ್‌ ಮೂಲಕ 24/7 ತಾಜಾ ಇಡ್ಲಿ, ವಡೆಗಳನ್ನು ಇಲ್ಲಿ ಪಡೆದು ತಿಂದು ತೃಪ್ತರಾಗಬಹುದು.

ಇಲ್ಲಿ ಸಂಪರ್ಕಿಸಿ

ಫ್ರೆಶ್‌ ಹಾಟ್‌ ಸೆಂಟರ್‌ ಇನ್ನೂ ಕಾರ್ಯಾರಂಭ ಮಾಡಿಲ್ಲ. ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ info@freshot.in ಅಥವಾ ಫ್ರೆಶ್‌ಹಾಟ್‌ ಎಕ್ಸ್‌ಪಿರಿಯನ್ಸ್‌ ಸೆಂಟರ್‌, ವಿಜಯ ಕಾಂಪ್ಲೆಕ್ಸ್‌, 357/361 ನೆಲ ಮಹಡಿ, 5ನೇ ಮುಖ್ಯ ರಸ್ತೆ, ವಿಜಯಬ್ಯಾಂಕ್‌ ಲೇಔಟ್‌, ಬಿಳೇಕಹಳ್ಳಿ, ಬೆಂಗಳೂರು. ಅವರನ್ನು ಸಂಪರ್ಕಿಬಹುದು.

click me!