ಹೊಸದುರ್ಗ (ಆ.16) : ಡಿಸಿ ಮೇಡಂ ನಮ್ಮೂರಿಗೆ ಬರ್ತಾರೆ, ನಮ್ಮ ಸಂಕಷ್ಟಕ್ಕೆ ಅಲ್ಪ ಸ್ವಲ್ಪವಾದರೂ ಪರಿಹಾರ ಸಿಗುತ್ತೆ ಅಂದುಕೊಂಡಿದ್ವಿ . ಆದರೆ ಡಿಸಿ ಮೇಡಂ ಹಿಂಗ್ ಬಂದ್ರೂ ಹಂಗೋ ಹೋದ್ರು ಪರಿಹಾರÜ ಮಾತ್ರ ನಾವ್‌ಕಾಣೆ. ತಾಲೂಕಿನ ಮಾಡದಕೆರೆ ಹೋಬಳಿ ಎಂ. ಮಲ್ಲಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನೇತೃತ್ವದಲ್ಲಿ ಜರುಗಿದ ಗ್ರಾಮ ವಾಸ್ತವ್ಯವು ಕೇವಲ ಭೇಟಿ ಪರಿಶೀಲನೇ, ಭರವಸೆಗಷ್ಟೇ ಸೀಮಿತವಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಹೀಗೆ ಬೇಸರ ವ್ಯಕ್ತ ಪಡಿಸಿದರು.
Raichur: ಅರಕೇರಾದಲ್ಲಿ ಅ.15ಕ್ಕೆ ಸಚಿವ ಅಶೋಕ್ ಗ್ರಾಮ ವಾಸ್ತವ್ಯ
undefined
ಗ್ರಾಮ ವಾಸ್ತವ್ಯ ಮಾಡಲಿಲ್ಲ :
ಗ್ರಾಮ ವಾಸ್ತವ್ಯದ ಮಾಹಿತಿ ನಮಗೆ ಬೆಳಗ್ಗೆ ಗೊತ್ತಾಯಿತು. ಸಮಸ್ಯೆ ಇದ್ದಲ್ಲಿ ಪರಿಹಾರಕ್ಕೆ ಅರ್ಜಿ ಕೊಡಿ ಎಂದು ಯಾವ ಅಧಿಕಾರಿಗಳು ಹೇಳಲಿಲ್ಲ. ರಾತ್ರಿ ವಾಸ್ತವ್ಯ ಮಾಡುತ್ತಾರೆ. ಅಲ್ಲಿ ನಮ್ಮ ಸಮಸ್ಯೆ ಹೇಳಿಕೊಳ್ಳೋಣ ಎಂದುಕೊಂಡಿದ್ದೆವು. ಆದರೆ ಜಿಲ್ಲಾಧಿಕಾರಿ ಒಂದೂವರೆ ಗಂಟೆ ಗ್ರಾಮದಲ್ಲಿದ್ದು, ತರಾತುರಿಯಲ್ಲಿ ಹೋಗಿರುವುದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ವೈದ್ಯರ ಸೇವೆ ಸಿಗುತ್ತಿಲ್ಲ:
ಮಾಡದಕೆರೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸೇವೆ ಸಿಗುತ್ತಿಲ್ಲ. ಬೇಗ ಮನೆಗೆ ತೆರಳುತ್ತಾರೆ. ನರ್ಸ್‌ಗಳು ಮಾತ್ರ ಇರುತ್ತಾರೆ ಎಂದು ಗ್ರಾಮಸ್ಥರೊಬ್ಬರೂ ಡಿಸಿ ಗಮನ ಸೆಳೆಯಲು ಮುಂದಾದಾಗ ಆ ವ್ಯಕ್ತಿಯನ್ನು ಡಿಸಿ ಅಂಗರಕ್ಷಕ ತಡೆದರು. ಆಗ ಜಿಲ್ಲಾಧಿಕಾರಿ ತಾಲೂಕು ಅರೋಗ್ಯಧಿಕಾರಿ ಅವರಿಂದ ರಿಪೋರ್ಚ್ ಪಡೆದು ಆ ವೈದ್ಯನಿಗೆ ನೋಟಿಸ್ ನೀಡುವುದಾಗಿ ಹೇಳಿದರು.
ದೂರುಗಳ ಸುರಿಮಳೆ:
ತೋಟದ ಮನೆಗಳಿಗೆ ವಿದ್ಯುತ್ ಇಲ್ಲ. ಕಾಡು ಪ್ರಾಣಿಗಳ ಹಾವಳಿ ಇದೆ. ಹಲವು ಬಾರಿ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ. ಕೇವಲ ಭರವಸೆಯಾಗಿಯೇ ಉಳಿಯುತ್ತಿವೆ ಎಂದು ಬುಕ್ಕಸಾಗರ ಗ್ರಾಮದ ನಟರಾಜ್ ದೂರಿದರೆ, ಗಂಗಾ ಕಲ್ಯಾಣ ದ ಅಡಿಯಲ್ಲಿ ಕೊಳವೆ ಬಾವಿ ಕೊರೆದು 5 ವರ್ಷ ಆಯಿತು. 2 ಇಂಚು ನೀರು ಬಂದಿದ್ದು, ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಪಕ್ಕದ ಜಮೀನಿನಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದೇವೆ. ಸಾಲ ಮಾಡಿ 2 ಎಕರೆಯಲ್ಲಿ ಅಡಕೆ ತೋಟ ಮಾಡಿದ್ದೇವೆ. ವಿದ್ಯುತ್ ಸಂಪರ್ಕ ನೀಡುವಂತೆ ಕಮಲಮ್ಮ ಮನವಿ ಮಾಡಿದರು.
ಗ್ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಶಿತಿಲಗೊಂಡಿದೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಎಸ್‌ಡಿಎಂಸಿ ಅವರು ಮನವಿ ಮಾಡಿದರು. ಕಂದಾಯ ಇಲಾಖೆ ಕಾರ್ಯ ನಿರ್ವಹಣೆ ಕುಂಠಿತವಾಗಿದೆ. ಇಲಾಖೆ ಸಿಬ್ಬಂದಿ ವೇಗ ಹೆಚ್ಚಿಸಿ ಎಂದು ಗ್ರಾಮಸ್ಥರು ದೂರುಗಳ ಸುರಿಮಳೆ ಗೈದರು. ಗ್ರಾಮದಲ್ಲಿ ನಿಂಗಮ್ಮ ಎನ್ನುವವರು ವೃದ್ದಾಪ್ಯ ವೇತನ ಸ್ಥಗಿತಗೊಂದಿರುವ ಬಗ್ಗೆ ಗಮನ ಸೆಳೆದಾಗ, ಇದನ್ನೆಲ್ಲಾ ನನ್ನಿಂದ ಹೇಳಿಸಿಕೊಳ್ಳಬಾರದು, ಸ್ಥಳೀಯವಾಗಿಯೇ ಅಧಿಕಾರಿಗಳು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಾಲೂಕು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮ ವಾಸ್ತವ್ಯ ಅಂಗವಾಗಿ ಎಂ. ಮಲ್ಲಾಪುರ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ಕೋರಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಗ್ರಾಮ ಸಮೀಪದ ವಿವಿ ಸಾಗರ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ 1 ಗಂಟೆಗಳ ಕಾಲ ಕಾರ್ಯಕ್ರಮ ನಡೆಸಿ ಚಿತ್ರದುರ್ಗಕ್ಕೆ ತೆರಳಿದರು.
ಶಾಲೆ ಬಿಟ್ಟಿದ್ದ ಬಾಲಕ; ಜಿಲ್ಲಾಧಿಕಾರಿ ವಿಶೇಷ ಕಾಳಜಿಯಿಂದ ಮತ್ತೆ ಶಾಲೆಗೆ!
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ, ತಾಪಂ ಇಒ ವಿಶ್ವನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಎಸ್. ಈಶ, ಡಿಡಿ ಪಿ ಐ ರವಿಶಂಕರರೆಡ್ಡಿ, ಬಿಇಓ ಜಯಪ್ಪ, ಲೋಕೋಪಯೋಗಿ ಎಇಇ ಪರಮೇಶ್ವರಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾಧಿಕಾರಿಗಳ ಆರೋಗ್ಯ ಸರಿಯಿಲ್ಲದ ಕಾರಣ ಹಾಗೂ ನಾಳೆ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಇರುವುದರಿಂದ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಮುಗಿಸಿ ತೆರಳಿದ್ದಾರೆ. ನಾವು ಗ್ರಾಮದಲ್ಲಿ ವಾಸ್ತವ್ಯ ಇದ್ದು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ನಿಗದಿತ ಅವಧಿಯೋಳಗೆ ಪರಿಹಾರ ನೀಡುತ್ತೇವೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದರು.