ಸಮೃದ್ಧವಾಗಿ ಬೆಳೆದಿದ್ದರೂ ಖರೀದಿಗೆ ಬಾರದ ವ್ಯಾಪಾರಸ್ಥರು| ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ದುಗ್ಗಾವತ್ತಿ ರೈತರ ಸಂಕಷ್ಟ| ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದ ಐದಾರು ರೈತರು| ಪ್ರತಿ ಎಕರೆಗೆ 2 ಲಕ್ಷಕ್ಕೂ ಅಧಿಕ ಹಣ ಖರ್ಚು|
ಹರಪನಹಳ್ಳಿ(ಮೇ.25): ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಸಿಗದೆ ಜಮೀನಿನಲ್ಲಿಯೇ ಕುಂಬಳಕಾಯಿ ಕೊಳೆಯುತ್ತಲಿದ್ದು, ಇದರಿಂದ ತಾಲೂಕಿನ ದುಗ್ಗಾವತ್ತಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ದುಗ್ಗಾವತ್ತಿ ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ಐದಾರು ರೈತರು ಕುಂಬಳಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಪ್ರತಿ ಎಕರೆಗೆ 2 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಸಮೃದ್ಧವಾಗಿ ಬೆಳೆದಿದ್ದ ಕುಂಬಳಕಾಯಿನ್ನು ಖರೀದಿ ಮಾಡಲು ಯಾವ ವ್ಯಾಪಾರಸ್ಥರು ಬಂದಿಲ್ಲ. ದೂರದ ಪಟ್ಟಣಗಳಿಗೆ ಸಾಗಿಸಲು ವಾಹನ ಸೌಕರ್ಯವಿಲ್ಲ. ಅಲ್ಲದೇ ಹೋಟೆಲ್ ಅಥವಾ ಸಮಾರಂಭಗಳೂ ನಡೆಯುತ್ತಿಲ್ಲ. ಇದರಿಂದ ಖರೀದಿಯಾಗದೇ ಹೊಲದಲ್ಲೇ ಕೊಳೆಯುತ್ತಿದೆ.
ಮಂಗಳೂರಿನ ಕಾರ್ಖಾನೆಗೂ ಕುಂಬಳಕಾಯಿ ಹೋಗುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ಕಾರ್ಖಾನೆಗಳು ಬಂದ್ ಆಗಿವೆ. ಇದರಿಂದ ಲಕ್ಷಾಂತರ ನಷ್ಟಸಂಭವಿಸಿದೆ. ಇದರಿಂದ ಸಾಲಗಾರರು ನೀಡಿದ ಸಾಲಕ್ಕೆ ಬಡ್ಡಿ ಅಸಲು ಕಟ್ಟುವುದು ಹೇಗೆ ಎಂದು ಚಿಂತೆಯಾಗಿದೆ ಎಂದು ರೈತರಾದ ಬಲವಂತಪ್ಪ, ಶ್ರೀನಿವಾಸ, ಶಿವನಗೌಡ ಹಾಗೂ ಇತರರು ತಮ್ಮ ಅಳಲನ್ನು ತೋಡಿಕೊಂಡರು.
ಇಬ್ಬರೂ ವಿವಾಹಿತರೇ, ಆದ್ರೂ ಬಿಡದ ಅನೈತಿಕ ಸಂಬಂಧ: ವಿಷ ಸೇವಿಸಿ ಪ್ರಿಯಕರ ಸಾವು
ಹಸಿರು ಸೇನಾ ರಾಜ್ಯಾಧ್ಯಕ್ಷ ಎಚ್.ಎಂ. ಮಹೇಶ್ವರಸ್ವಾಮಿ ಸಂತ್ರಸ್ತ ರೈತರಿಗೆ ಸಾಂತ್ವನ ಹೇಳಿ ಮಾತನಾಡಿ, ಲಾಕ್‌ಡೌನ್ ಪರಿಣಾಮ ಧಾರ್ಮಿಕ ಕ್ಷೇತ್ರದಲ್ಲೂ ಸೇವೆಗಳು ಸ್ಥಗಿತಗೊಂಡಿವೆ. ಅನ್ನದಾಸೋಹವೂ ಇಲ್ಲದಾಗಿ ಕುಂಬಳಕಾಯಿಗೆ ಬೇಡಿಕೆ ಇಲ್ಲದಾಗಿದೆ. ಸೂಕ್ತ ಮಾರುಕಟ್ಟೆಯೂ ಇಲ್ಲದೆ ರೈತ ಕಂಗಾಲಾಗಿದ್ದಾನೆ.
ಕಂಗಾಲಾಗಿರುವ ಯಾವ ರೈತರೂ ಆತ್ಮಹತ್ಯೆಯ ದಾರಿ ತುಳಿಯುವುದು ಬೇಡ. ಕೇಂದ್ರ ಸರ್ಕಾರ . 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ನಿಜವಾದ ರೈತ ಫಲಾನುಭವಿಗಳ ಸಂಕಷ್ಟಕ್ಕೆ ಆ ಹಣ ದೊರೆಯುವಂತಾಗಲಿ. ಕುಂಬಳಕಾಯಿ ಬೆಳೆ ಹಾನಿಗೊಳಗಾದ ರೈತರ ಪ್ರತಿ ಎಕರೆಗೆ 10 ಲಕ್ಷ ಪರಿಹಾರ ಶೀಘ್ರವೇ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.