Latest Videos

ಬೆಂಗ್ಳೂರಿನ ಮೂಲಸೌಕರ್ಯ ಸಮಸ್ಯೆ ನಿವಾರಣೆಗೆ ಪಂಚ ಅಂಶಗಳ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್

By Kannadaprabha NewsFirst Published May 24, 2024, 11:49 AM IST
Highlights

ರಾಜಕಾಲುವೆ ಒತ್ತುವರಿ ತೆರವಿಗೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ಅದರಂತೆ ಒಟ್ಟು 4,316 ಒತ್ತುವರಿಗಳನ್ನು ಗುರುತಿಸಲಾಗಿದೆ. ಸ್ಯಾಟಲೈಟ್, ಗೂಗಲ್ ಇಮೇಜ್ ಮತ್ತು ಸರ್ವೇ ಇಲಾಖೆ ಈ ಒತ್ತುವರಿ ಮಾಹಿತಿ ಸಂಗ್ರಹಿಸಿದೆ. ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್‌ಗೆ ಕಾನೂನಾತ್ಮಕವಾಗಿ ಮತ್ತು ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ನಿರ್ದೇಶಿಸಲಾಗಿದೆ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
 

ಬೆಂಗಳೂರು(ಮೇ.24):  ಶುದ್ಧ ಕುಡಿಯುವ ನೀರು, ರಸ್ತೆಗುಂಡಿ ಸಮಸ್ಯೆ ಸೇರಿದಂತೆ ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಲ್ಲೇಶ್ವರದ ಬಿಬಿಎಂಪಿಯ ಐಪಿಪಿ ಕಚೇರಿಯಲ್ಲಿ ಗುರುವಾರ ಬಿಬಿಎಂಪಿ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಬಿಬಿಎಂಪಿ ಆಸ್ತಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ, ಆಸ್ತಿ ತೆರಿಗೆ, ರಾಜಕಾಲುವೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಐದು ಅಂಶಗಳ ಕಾರ್ಯಕ್ರಮದಲ್ಲಿ ಸೇರಿವೆ ಎಂದರು.

ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಡಿಕೆಶಿಗೆ ದೂರದೃಷ್ಟಿ ಇದೆ: ಬಿಜೆಪಿ ಶಾಸಕ ಮುನಿರತ್ನ

ಮುಖ್ಯಮಂತ್ರಿ ಅವರೊಂದಿಗೆ ಬುಧವಾರ ಬೆಂಗಳೂರಿನ ಒಂದಷ್ಟು ಭಾಗಗಳಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅನೇಕ ಸಮಸ್ಯೆಗಳು ಕಂಡು ಬಂದ ಕಾರಣ ಬಿಬಿಎಂಪಿ ವಲಯ ಅಧಿಕಾರಿಗಳು ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಚರ್ಚೆ ನಡೆಸಲಾಯಿತು.

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಹಾಗೂ ನಗರದ ಎಲ್ಲಾ ಭಾಗಗಳಲ್ಲಿ ಸರಬರಾಜು ಆಗುವ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಬಿಬಿಎಂಪಿ ನಡೆಸಬೇಕು ಹಾಗೂ ಗುಣಮಟ್ಟದ ಫಲಿತಾಂಶವನ್ನು ಜಲಮಂಡಳಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ಅದರಂತೆ ಒಟ್ಟು 4,316 ಒತ್ತುವರಿಗಳನ್ನು ಗುರುತಿಸಲಾಗಿದೆ. ಸ್ಯಾಟಲೈಟ್, ಗೂಗಲ್ ಇಮೇಜ್ ಮತ್ತು ಸರ್ವೇ ಇಲಾಖೆ ಈ ಒತ್ತುವರಿ ಮಾಹಿತಿ ಸಂಗ್ರಹಿಸಿದೆ. ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್‌ಗೆ ಕಾನೂನಾತ್ಮಕವಾಗಿ ಮತ್ತು ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.

'ನಮ್ದು ಎಲ್ಲ ಮುಗೀತು, ಬೆಂಗಳೂರು ಈಗಿನ ಮಕ್ಕಳ ಸ್ವತ್ತು': ಬ್ರ್ಯಾಂಡ್‌ ಬೆಂಗಳೂರು ಕಾರ್ಯಕ್ರಮದಲ್ಲಿ  ಡಿಕೆಶಿ ಮಾತು

182 ಕೆರೆಗಳಲ್ಲಿ 116 ಕೆರೆಗಳ ಒತ್ತುವರಿ ಬಗ್ಗೆ ಸರ್ವೆ ನಡೆಸಬೇಕಾಗಿದೆ. ಬಾಕಿ ಉಳಿದ ಕೆರೆಗಳನ್ನು ಸರ್ವೆ ಸಡೆಸಬೇಕು ಹಾಗೂ ಬಿಬಿಎಂಪಿ ಆಸ್ತಿಗಳನ್ನು ಗುರುತು ಮಾಡಬೇಕು. ಪಾಲಿಕೆ ಆಸ್ತಿ ಸಂರಕ್ಷಣೆ ಸೇರಿದಂತೆ ಒತ್ತುವರಿ ತೆರವಿಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಜವಾಬ್ದಾರಿಯನ್ನು ಜಲಮಂಡಳಿಗೆ ವಹಿಸಲಾಗಿದೆ. ಕೆರೆಗಳಲ್ಲಿ ನೀರಿದ್ದರೆ ಒತ್ತುವರಿ ತಪ್ಪುತ್ತದೆ. ಅಂತರ್ಜಲ ಹೆಚ್ಚುತ್ತದೆ. ಆದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ರಸ್ತೆ ಗುಂಡಿ 15 ದಿನದಲ್ಲಿ ಮುಚ್ಚಲು ಸೂಚನೆ

ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು ಇವೆ ಎಂದು ಸಿಎಂ ಮಾಹಿತಿ ನೀಡಿದ್ದರು. ಚುನಾವಣಾ ಫಲಿತಾಂಶದ ನಂತರ ಸಾರ್ವಜನಿಕರೇ ರಸ್ತೆಗುಂಡಿಗಳ ಫೋಟೋ ತೆಗೆದು ಮಾಹಿತಿ ನೀಡುವ ಆ್ಯಪ್ ಬಿಡುಗಡೆ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.
ಇನ್ನು ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒತ್ತುವರಿ ವಿಚಾರವಾಗಿ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

click me!