* ಲೈಫ್ ಜಾಕೆಟ್ ಧರಿಸಿದ್ದ ಇಬ್ಬರು ಪಾರು
* ನವಮಂಗಳೂರು ಬಳಿ ಮುಳುಗಿದವರು ಉಡುಪಿ ಬಳಿ ಪತ್ತೆ
* ಕರಾವಳಿಗೆ ಅಪ್ಪಳಿಸಿದ ತೌಕ್ಟೆ ಚಂಡಮಾರುತ
ಮಂಗಳೂರು(ಮೇ.16): ಕರಾವಳಿಗೆ ಶನಿವಾರ ಅಪ್ಪಳಿಸಿದ ತೌಕ್ಟೆ ಚಂಡಮಾರುತದ ಅಟ್ಟಹಾಸಕ್ಕೆ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಮೂರು ಪ್ರತ್ಯೇಕ ದುರಂತ ಸಂಭವಿಸಿದ್ದು ಅದರಲ್ಲಿದ್ದ 8 ಮಂದಿಯಲ್ಲಿ ಒಬ್ಬರು ಮೃತಪಟ್ಟು ಐವರು ನಾಪತ್ತೆಯಾಗಿದ್ದಾರೆ. ಪವಾಡ ಸದೃಶ್ಯವೆಂಬಂತೆ ಲೈಫ್ ಜಾಕೆಟ್ ಧರಿಸಿದ್ದ ಇಬ್ಬರು 50 ಕಿ.ಮೀ. ದೂರದ ಉಡುಪಿ ಬಳಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಪಶ್ಚಿಮಬಂಗಾಳದ ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಬದುಕಿ ಬಂದವರು.
ಇಲ್ಲಿನ ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ(ಸಿಂಗಲ್ ಪಾಯಿಂಟ್ ಮೂರಿಂಗ್-ಎಸ್‌ಪಿಎಂ) ನಿರ್ವಹಣೆ ಮಾಡುವವರ ಟಗ್ ನೌಕೆ ನೀರುಪಾಲಾಗಿದೆ. ಶನಿವಾರ ಬೆಳಗ್ಗೆ 9.45ರ ವರೆಗೂ ಬಂದರಿನೊಂದಿಗೆ ಸಂಪರ್ಕದಲ್ಲಿದ್ದ ಟಗ್ ಆ ಬಳಿಕ ಸಂಪರ್ಕ ಕಡಿದುಕೊಂಡಿದೆ. ಸಂಜೆ ವೇಳೆಗೆ ಟಗ್‌ನ ಅವಶೇಷಗಳು ಪಡುಬಿದ್ರಿ ಬಳಿ ಪತ್ತೆಯಾಗಿವೆ. ಅಲ್ಲೇ ಸಮೀಪ ಒಂದು ಮೃತದೇಹವೂ ಪತ್ತೆಯಾಗಿದೆ. ಘಟನೆಯಲ್ಲಿ ಐವರು ನೀರುಪಾಲಾಗಿದ್ದಾರೆ.
ತೀವ್ರ ಸ್ವರೂಪ ಪಡೆದ ತೌಕ್ಟೆ ಚಂಡಮಾರುತ!
ಇದರಲ್ಲಿದ್ದ ಮೊಮಿರುಲ್ ಮತ್ತು ಕರೀಮುಲ್ಲಾರನ್ನು ಸಮುದ್ರ ಉಡುಪಿಯ ಮಟ್ಟು ಕೊಪ್ಪ ಎಂಬಲ್ಲಿ ಕಡಲ ತೀರಕ್ಕೆ ತಂದೆಸೆದಿದೆ. ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಪವಾಡಸದೃಶ ಪಾರಾಗಿದ್ದಾರೆ.