ಐವರು ಕೊರೋನಾ ಸೋಂಕಿತರು ಗುಣಮುಖ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ| ಮುಂಬೈ, ದೆಹಲಿಯಿಂದ ಆಗಮಿಸಿದ್ದರು| ಹೂಗುಚ್ಛ, ಹಣ್ಣು-ಹಂಪಲು ನೀಡಿ ಅಭಿನಂದನೆ| ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢ| ಹೊಸ ಪಾಸಿಟಿವ್ ಪ್ರಕರಣದಿಂದಾಗಿ ಜಿಲ್ಲೆಯ ಸೋಂಕಿತರ ಸಂಖ್ಯೆ 52ಕ್ಕೇರಿಕೆ|
ಬಳ್ಳಾರಿ(ಜೂ.04): ಇಲ್ಲಿನ ಜಿಲ್ಲಾ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಸೋಂಕಿತರು ಗುಣಮುಖರಾಗಿ ಬುಧವಾರ ಮಧ್ಯಾಹ್ನ ಬಿಡುಗಡೆಯಾದರು. ತಾಲೂಕಿನ ಚಾಗನೂರು ಗ್ರಾಮದ 14 ವರ್ಷದ ಬಾಲಕ, ಇದೇ ಗ್ರಾಮದ 18 ವರ್ಷದ ಯುವತಿ, ನಾಗೇನಹಳ್ಳಿಯ 33 ವರ್ಷದ ಯುವಕ, ರೂಪನಗುಡಿ ಗ್ರಾಮದ 31 ವರ್ಷದ ಯುವಕ ಹಾಗೂ ಹಗರಿಬೊಮ್ಮನಹಳ್ಳಿಯ 23 ವರ್ಷದ ಯುವಕ ಗುಣಮುಖರಾಗಿ ಬಿಡುಗಡೆಗೊಂಡವರು. ಇವರೆಲ್ಲರಿಗೂ ಮಹಾರಾಷ್ಟ್ರದ ಮುಂಬೈ ಹಾಗೂ ದೆಹಲಿಯ ಟ್ರಾವೆಲ್ ಹಿಸ್ಟ್ರಿ ಇದೆ.
ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿದ ಡಾ. ಬಸರೆಡ್ಡಿ, ಕೊರೋನಾ ಸೋಂಕಿತರು ಚಿಕಿತ್ಸೆಗೆಂದು ಮೊದಲು ಬಂದಾಗ ಸಾಕಷ್ಟುಭಯಭೀತರಾಗಿದ್ದರು. ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯ ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು. ಈ 5 ಜನರು ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷ ತಂದಿದ್ದು, ಇನ್ನು ಉಳಿದವರನ್ನು ಆದಷ್ಟುಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಲಾಕ್‌ಡೌನ್ ಸಡಿಲಿಕೆ: KSRTCಯಿಂದ ರಾತ್ರಿ ಬಸ್ ಕಾರ್ಯಾಚರಣೆ ಪ್ರಾರಂಭ
ಇನ್ನು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯ ಉತ್ತಮವಾಗಿದ್ದು, ಯಾವುದೇ ರೀತಿಯ ಸಮಸ್ಯೆಯಿಲ್ಲ. ಹೀಗಾಗಿ ಸೋಂಕಿತ ಎಲ್ಲರೂ ಗುಣಮುಖರಾಗಿ ಮನೆಗೆ ತೆರಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಗುಣಮುಖರಾಗಿ ಹೊರಬಂದವರಲ್ಲಿ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ನೀಡಿದರು. ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟದ ಆಹಾರ ಒದಗಿಸಿದರು ಎಂದು ಹೇಳಿದರು.
ನಮ್ಮ ಆರೋಗ್ಯ ಕಾಪಾಡಲು ಹಾಗೂ ಗುಣಮುಖರಾಗಲು ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಾಕಷ್ಟುಶ್ರಮಿಸಿದರು. ಕುಟುಂಬ ಸದಸ್ಯರಂತೆ ನಮ್ಮನ್ನು ನೋಡಿಕೊಂಡರು. ಊಟ, ಉಪಾಹಾರ ಸೇರಿದಂತೆ ಯಾವುದಕ್ಕೂ ಕೊರತೆ ಮಾಡಲಿಲ್ಲ. ಪ್ರತಿನಿತ್ಯವೂ ನಮಗೆ ಧೈರ್ಯ ತುಂಬುತ್ತಿದ್ದರು. ಹೀಗಾಗಿಯೇ ನಾವು ಶೀಘ್ರವಾಗಿ ಗುಣಮುಖರಾದೆವು ಎಂದರಲ್ಲದೆ, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಯ ಋುಣ ನಾವೆಂದು ಮರೆಯುವುದಿಲ್ಲ ಎಂದರು.
ಕೋವಿಡ್ ನೋಡಲ್ ಅಧಿಕಾರಿ ಡಾ. ಯೋಗಾನಂದ ರೆಡ್ಡಿ, ಹಿರಿಯ ತಜ್ಞರಾದ ಡಾ. ಪ್ರಕಾಶ್ ಭಾಗವತಿ, ಡಾ. ಶಂಕರ್ ನಾಯಕ್, ಡಾ. ನಿಖಿಲ್, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ. ಕೊಟ್ರೇಶ್, ಡಾ. ಚಿತ್ರಶೇಖರ, ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಇದ್ದರು.
ಮತ್ತೊಂದು ಪಾಸಿಟಿವ್ ಪ್ರಕರಣ ಬೆಳಕಿಗೆ
ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. 45 ವರ್ಷದ ಮಹಿಳೆಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದಂತಾಗಿದೆ. ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವರಾದ ಈ ಮಹಿಳೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಲ್ಲಿನ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಈ ಮಹಿಳೆಯ ಆರೋಗ್ಯ ತಪಾಸಣೆ ನಡೆಸಿ, ಗಂಟಲುದ್ರವವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ ಬಳಿಕ ಸೋಂಕು ಇರುವುದು ಖಚಿತವಾಗಿದ್ದು, ಇಲ್ಲಿನ ಕೊರೋನಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಹೊಸ ಪಾಸಿಟಿವ್ ಪ್ರಕರಣದಿಂದಾಗಿ ಜಿಲ್ಲೆಯ ಸೋಂಕಿತರ ಸಂಖ್ಯೆ 52ಕ್ಕೇರಿದೆ.