ಕರಾವಳಿ ಭಾಗದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಹೆಚ್ಚಾಗುತ್ತಿದ್ದು, ಲಾಭದ ಅತಿಯಾಸೆಯಿಂದ ದುಷ್ಟರು ಕಡಲಿನ ಸಂಪತ್ತನ್ನು ಹಲವು ವರ್ಷಗಳಿಂದ ದೋಚುತ್ತಲೇ ಬಂದಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಮಾ.02): ಕರಾವಳಿ ಭಾಗದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಹೆಚ್ಚಾಗುತ್ತಿದ್ದು, ಲಾಭದ ಅತಿಯಾಸೆಯಿಂದ ದುಷ್ಟರು ಕಡಲಿನ ಸಂಪತ್ತನ್ನು ಹಲವು ವರ್ಷಗಳಿಂದ ದೋಚುತ್ತಲೇ ಬಂದಿದ್ದಾರೆ. ಸೂರ್ಯ ಮುಳುಗಿದರೆ ಸಾಕು ಆಳ ಸಮುದ್ರದಲ್ಲಿ ಬೋಟುಗಳಿಗೆ ಹೈವೋಲ್ಟೇಜ್ ಲೈಟ್‌ಗಳನ್ನು ಅಳವಡಿಸಿ ಟನ್‌ಗಟ್ಟಲೇ ಮೀನುಗಳನ್ನು ಹಿಡಿಯಲಾಗುತ್ತದೆ. ಇದೇ ಕಾರಣದಿಂದ ಪ್ರತೀ ವರ್ಷ ಮೀನಿನ ಕ್ಷಾಮ ಕಾಣಿಸಿಕೊಳ್ಳುತ್ತಿದೆ. ಇದರಿಂದ ಕೆರಳಿದ ಸಾಂಪ್ರದಾಯಿಕ ಮೀನುಗಾರರು, ಅವೈಜ್ಞಾನಿಕ ಮೀನುಗಾರಿಕೆಗಳನ್ನು ಸಂಪೂರ್ಣ ಬಂದ್ ಮಾಡುವಂತೆ ಪ್ರತಿಭಟಿಸಿ, ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
undefined
ಹೌದು, ಕರಾವಳಿಯ ಕಡಲತೀರದಲ್ಲಿ ಯರ್ರಾಬಿರ್ರಿ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಲೇ ಬರುತ್ತಿದೆ. ಕಡಲ ಸಂಪತ್ತನ್ನು ಬರಿದುಗೊಳಿಸುವ ಈ ಕೃತ್ಯದಿಂದಾಗಿ ಪ್ರತೀ ವರ್ಷ ಮತ್ಸ್ಯ ಕ್ಷಾಮ ಎದುರಾಗುತ್ತಿದ್ದು, ಸಾಂಪ್ರದಾಯಿಕ ಮೀನುಗಾರರು ಮಾತ್ರವಲ್ಲದೇ, ದೊಡ್ಡ ಬೋಟುಗಳಲ್ಲಿ ನಿಯತ್ತಾಗಿ ದುಡಿಯುವವರಿಗೂ ಭಾರೀ ನಷ್ಟಕ್ಕೆ ಕಾರಣವಾಗುತ್ತಿದೆ. ಕಡಲಿನಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ಸಾಕಷ್ಟು ಸಮಯಗಳಿಂದ ನಡೆಯುತ್ತಿದ್ದರೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮಾತ್ರ ಈವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಕೆರಳಿದ ಕಡಲ ಮಕ್ಕಳು ಇಂದು ಕಾರವಾರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಾ.4ರಂದು ದಾವಣಗೆರೆಯಲ್ಲಿ ಆಪ್ ಬೃಹತ್ ಸಮಾವೇಶ: ಕೇಜ್ರಿವಾಲ್, ಭಗವಂತ್ ಮಾನ್ ಭಾಗಿ
ಕತ್ತಲಾಗುತ್ತಿದ್ದಂತೇ ದೊಡ್ಡ ಬೋಟ್‌ಗಳನ್ನು ಹತ್ತಿ, ಹೈವೋಲ್ಟೇಜ್ ಲೈಟ್‌ಗಳನ್ನು ಮತ್ತು ಅದಕ್ಕೆ ಬೇಕಾದ ಜನರೇಟರ್ ಹಾಕಿಕೊಂಡು ಸಮುದ್ರಕ್ಕೆ ಇಳಿಯುವ ದಂಧೆಕೋರರು, ಕಡಲ ಆಳದಲ್ಲಿ ಸುಮಾರು 2000 ವೋಲ್ಟೇಜ್ ಲೈಟ್‌ಗಳನ್ನು ಬಿಟ್ಟು ಮೀನುಗಾರಿಕೆ ಮಾಡುತ್ತಿದ್ದಾರೆ. ಈ ಮೀನುಗಾರಿಕೆಯಿಂದ ಚಿಕ್ಕಪುಟ್ಟ ಮೀನುಗಳು ಸಾವನ್ನಪ್ಪುತ್ತಿವೆ. ಜೊತೆಗೆ ರಾತ್ರಿ ವೇಳೆ ಮೊಟ್ಟೆ ಇಡುವ ಮೀನುಗಳು ಕೂಡಾ ಮೊಟ್ಟೆಯಿಡಲಾಗದೆ ಸಾವನ್ನಪ್ಪುತ್ತಿವೆ. ಕಡಲಿನ ಅನೇಕ ಜೀವಿಗಳ ಮೇಲೆ ಈ ಲೈಟ್ ಫಿಶಿಂಗ್ ಅಪಾಯಕಾರಿ ಪರಿಣಾಮ ಬೀರುತ್ತಿದ್ದು, ಇದು ಹೀಗೆ ಮುಂದುವರೆದರೆ ಅಳಿವಿನ ಅಂಚಿನಲ್ಲಿರುವ ಅನೇಕ ಕಡಲ ಜೀವಿಗಳು ನಾಶವಾಗುವ ಸಾಧ್ಯತೆಯಿದೆ. ಜತೆಗೆ ಮೀನಿನ ಸಂತತಿ ಕೂಡಾ ಕ್ರಮೇಣ ಕಡಿಮೆಯಾಗುತ್ತದೆ. ಹೀಗಾಗಿ ಕಡಲಜೀವಿಗಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಈ ದಂಧೆಗೆ ಬ್ರೇಕ್ ಹಾಕಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಸಾವಿರಾರು ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡಿದ್ದಾರೆ. ಇವರು ಆಳ ಸಮುದ್ರಕ್ಕೆ ಹೋಗದೆ ಕೇವಲ 12 ನಾಟಿಕಲ್ ಮೈಲು ದೂರದ ಒಳಭಾಗದಲ್ಲೇ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಾರೆ. ಇದನ್ನೇ ನಂಬಿಕೊಂಡು ಬದುಕು ಸಾಗಿಸುವ ಈ ಮೀನುಗಾರರ ದುಡಿಮೆಯ ಮೇಲೆ ಅವೈಜ್ಞಾನಿಕ ಬುಲ್ ಟ್ರಾಲಿಂಗ್, ಲೈಟ್ ಫಿಶಿಂಗ್ ಭಾರೀ ಪರಿಣಾಮ ಬೀರುತ್ತಿದೆ. ಹೀಗಾಗಿ ಇದನ್ನು ಶಾಶ್ವತವಾಗಿ ಮುಚ್ಚುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಅವೈಜ್ಞಾನಿಕ ಮೀನುಗಾರಿಕೆಯನ್ನು ಗೋವಾ, ಕೇರಳ ಹಾಗೂ ಶ್ರೀಲಂಕಾದ ದಂಧೆಕೋರರು ಸೇರಿದಂತೆ ಜಿಲ್ಲೆಯ ಕೆಲವು ಮೀನುಗಾರರು ಕೂಡಾ ನಡೆಸುತ್ತಿದ್ದಾರೆ. ಈ ದಂಧೆಯ ಬಗ್ಗೆ ದಾಖಲೆ ಸಮೇತ ಮೀನುಗಾರ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ರು ಪ್ರಯೋಜನವಾಗಿಲ್ಲ.
ಬೊಮ್ಮಾಯಿ ಯಾರೆಂದು ಕೇಳಿದರೆ 40% ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ
ಜೊತೆಗೆ ಕಡಲನ್ನು ಕಾಯುವ ಕರಾವಳಿ ಕಾವಲು ಪಡೆಯೂ ಈ ದಂಧೆಯನ್ನು ತಡೆಯುವಲ್ಲಿ ವಿಫಲವಾಗಿದೆ. ದೇಶದಲ್ಲಿ ಬ್ಯಾನ್ ಆಗಿರುವ ಈ ಅಕ್ರಮ ದಂಧೆಗೆ ಶೀಘ್ರದಲ್ಲಿ ಬ್ರೇಕ್ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಬ್ಯಾನ್ ಆಗಿರುವ ಲೈಟ್ ಫಿಶಿಂಗ್, ಬುಲ್ ಟ್ರಾಲ್ ಮೀನುಗಾರಿಕೆ ಕರಾವಳಿ ಕಡಲತೀರದಲ್ಲಿ ಮತ್ತೆ ಮುಂದುವರಿದಿದೆ. ಅಧಿಕಾರಿಗಳು ಮಾತ್ರ ಅಕ್ರಮ ದಂಧೆಗಳನ್ನು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ವಿಪರ್ಯಾಸ. ಇನ್ನಾದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಬಿಟ್ಟು ಈ ಅಕ್ರಮ ದಂಧೆಗೆ ಬ್ರೇಕ್ ಹಾಕುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.