ಇಂಧನ ಬೆಲೆ ಏರಿಕೆ ಬಿಸಿ: ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು..!

By Kannadaprabha NewsFirst Published Feb 18, 2021, 11:55 AM IST
Highlights

ಮೀನು ಅಲಭ್ಯತೆ, ಡಿಸೇಲ್‌ ದರ ಏರಿಕೆಯಿಂದ ಬೋಟ್‌ ಮಾಲಿಕರು ಸಂಕಷ್ಟಕ್ಕೆ| ಬೈತಖೋಲ್‌ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ ಟ್ರಾಲ್‌, ಪರ್ಸೈನ್‌ ಬೋಟ್‌ಗಳು| ಕೇಂದ್ರ, ರಾಜ್ಯ ಸರ್ಕಾರ ಮೀನುಗಾರರ ಸಹಾಯಕ್ಕೆ ಬರಲು ಆಗ್ರಹ| 

ಕಾರವಾರ(ಫೆ.18): ಇಂಧನದ ಬೆಲೆ ಏರಿಕೆ ಮೀನುಗಾರಿಕೆಯ ಮೇಲೂ ಪರಿಣಾಮ ಬೀರಿದ್ದು, ಕೇವಲ ನೂರಾರು ಬೋಟ್‌ಗಳು ಮಾತ್ರ ಕಡಲಿಗೆ ಇಳಿದಿವೆ. ಸಾವಿರಾರು ಬೋಟ್‌ಗಳು ಬಂದರಿನಲ್ಲೆ ಲಂಗರು ಹಾಕಿವೆ.

ಇಲ್ಲಿನ ಬೈತಖೋಲ್‌ ಮೀನುಗಾರಿಕಾ ಬಂದರಿನಲ್ಲಿ ಟ್ರಾಲ್‌, ಪರ್ಸೈನ್‌ ಬೋಟ್‌ಗಳು ಲಂಗರು ಹಾಕಿವೆ. ಟ್ರಾಲ್‌ ಹಾಗೂ ಪರ್ಸೈನ್‌ ಸೇರಿ 200ಕ್ಕೂ ಅಧಿಕ ಬೋಟ್‌ಗಳು ಬೈತಖೋಲ್‌ ಬಂದರಿನಲ್ಲಿವೆ. ಬೆರಳೆಣಿಕೆಯಷ್ಟುಬೋಟ್‌ ಮೀನುಗಾರಿಕೆಗೆ ಹೋಗಿವೆ. ಮೀನು ಅಲಭ್ಯತೆ ಒಂದೆಡೆಯಾದರೆ, ಡಿಸೇಲ್‌ ದರ ಏರಿಕೆಯಾಗಿರುವುದು ಬೋಟ್‌ ಮಾಲಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಪರ್ಸೈನ್‌ ಬೋಟ್‌ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತದೆ. ಕನಿಷ್ಠ 4ರಿಂದ 5 ದಿನ ಸಮುದ್ರದಲ್ಲೇ ಉಳಿದು ಮೀನು ಬೇಟೆಯನ್ನು ಮಾಡುತ್ತಾರೆ. ಒಂದು ಬೋಟ್‌ಗೆ ಕನಿಷ್ಠ ಒಂದುವರೆ ಸಾವಿರ ಲೀ. ಡೀಸೆಲ್‌ ಅಗತ್ಯವಿದ್ದು, ಅದರ ಬೆಲೆಯೇ 1.30 ಲಕ್ಷ ರು. ಆಗುತ್ತದೆ. ಕಾರ್ಮಿಕರ ವೇತನ, ಅಕ್ಕಿ, ಬೇಳೆ ಕಾಳು ಮೊದಲಾದ ವೆಚ್ಚ ಪ್ರತ್ಯೇಕವಾಗುತ್ತದೆ.

ಟ್ರಾಲ್‌ ಬೋಟ್‌ಗಳು ಬೆಳಗ್ಗೆ ಮೀನುಗಾರಿಕೆಗೆ ತೆರಳಿದರೆ ಸಂಜೆ ವಾಪಸ್‌ ಬಂದರಿಗೆ ಮರಳುತ್ತವೆ. ಈ ಮಾದರಿಯ 1 ಬೋಟ್‌ಗೆ ದಿನವೊಂದಕ್ಕೆ 80ರಿಂದ 85 ಲೀ. ಡಿಸೇಲ್‌ ಬೇಕಾಗುತ್ತದೆ. 6,900-7,300 ರು. ಡಿಸೇಲ್‌ಗಾಗಿ ಹಣ ವ್ಯಯಿಸಬೇಕಾಗುತ್ತದೆ. ಇದರ ಹೊರತಾಗಿ ಕಾರ್ಮಿಕರ ವೇತನ, ಊಟ ಇತ್ಯಾದಿ ಖರ್ಚು ಇರುತ್ತದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನ ದರದಿಂದಾಗಿ ಬೋಟ್‌ ಮಾಲಿಕರು ಕಂಗಾಲಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮತ್ಸ್ಯಕ್ಷಾಮ ಉಂಟಾಗಿದ್ದು, ಮೀನುಗಳ ಲಭ್ಯತೆ ಗಣನೀಯವಾಗಿ ಇಳಿದಿದೆ. ಹೀಗಾಗಿ ಡಿಸೇಲ್‌ ಖರ್ಚು ಕೂಡಾ ಆಗುತ್ತಿಲ್ಲ.

ನೀರಲ್ಲಿ ಹುಚ್ಚಾಟ ಆಡೋರಿಗೆ ಶಾಕ್: ಬೀಚ್ ಪ್ರಿಯರು ಇಲ್ಲಿ ನೋಡಿ

ಟ್ರಾಲ್‌ ಬೊಟ್‌ಗೆ 20 ಸಾವಿರ ಮೌಲ್ಯಕ್ಕಿಂತ ಹೆಚ್ಚಿನ ಮೀನು ಬಲೆಗೆ ಬಿದ್ದರೆ ಎಲ್ಲಾ ಖರ್ಚು ಹೋಗಿ ಲಾಭ ಆಗುತ್ತದೆ. ಪರ್ಸೈನ್‌ ಬೊಟ್‌ಗೆ 2.5 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಮೀನು ಸಿಕ್ಕರೆ ಮಾಲಿಕರಿಗೆ ಉಳಿಯುತ್ತದೆ. ಮೀನಿನ ಅಲಭ್ಯತೆ, ಡಿಸೇಲ್‌ ದರ ಏರಿಕೆಯಿಂದ ನೀರಿನಿಂದ ಹೊರ ತೆಗೆದ ಮೀನಿನಂತೆ ಬೋಟ್‌ ಮಾಲಿಕರು ವಿಲವಿಲ ಒದ್ದಾಡುವಂತೆ ಆಗಿದೆ.

ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟ್‌ಗಳು ಇವೆ. ಆದರೆ ಮೀನುಗಾರಿಕೆಗೆ ತೆರಳಿದರೆ ಲಾಭ ಆಗದ ಕಾರಣ ಕೇವಲ 200-230 ಬೋಟ್‌ಗಳು ಮಾತ್ರ ಸಮುದ್ರಕ್ಕೆ ಇಳಿಯುತ್ತಿವೆ. ಡಿಸೇಲ್‌ ದರ ಏರಿಕೆ ಪ್ರಮುಖವಾಗಿ ಹೊಡೆತ ನೀಡಿದೆ. ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಮೀನುಗಾರರ ಸಹಾಯಕ್ಕೆ ಬರಬೇಕು ಎಂದು ಉಕ ಜಿಲ್ಲಾ ಮೀನು ಮಾರಾಟಗಾರ ಸಹಕಾರ ಫೆಡರೇಷನ್‌ ಅಧ್ಯಕ್ಷ ರಾಜು ತಾಂಡೇಲ್‌ ತಿಳಿಸಿದ್ದಾರೆ. 

ಸಾರ್ವಕಾಲಿಕ ದಾಖಲೆ

ಕಾರವಾರದಲ್ಲಿ ಬುಧವಾರ ಪೆಟ್ರೊಲ್‌ 94.01, ಡಿಸೇಲ್‌ 86.7 ಇದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಡಿ. 6, 2020ರಂದು ಪೆಟ್ರೊಲ್‌ 87.49, ಡಿಸೇಲ್‌ 70.49, ಅ. 23ರಂದು ಪೆಟ್ರೊಲ್‌ 85.23, ಡಿಸೇಲ್‌ 76.00, ಸೆ. 20ರಂದು ಪೆಟ್ರೋಲ್‌ 85.58, ಡಿಸೇಲ್‌ 76.39 ಇತ್ತು. ಕಳೆದ ಕೆಲವು ತಿಂಗಳಿನಿಂದ ಸತತವಾಗಿ ಏರಿಕೆ ಆಗುತ್ತಲೆ ಇದೆ.
 

click me!