ಅಪ್ರಾಪ್ತರು ಬಂದರೆ ಅವರಿಗೆ ಪೆಟ್ರೋಲ್ ಸಿಗೋದಿಲ್ಲ. ಬಂಕ್‌ಗಳಿಗೆ ವಾಹನ ತಂದರೂ ಕೂಡ ಅವರಿಗೆ ಇಂಧನ ಹಾಕುವುದಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಮೈಸೂರು (ಫೆ.06): ಇಂಧನ ತುಂಬಿಸಲು ಬರುವ ಅಪ್ರಾಪ್ತರಿಗೆ ಪೆಟ್ರೋಲ್, ಡೀಸೆಲ್ ನೀಡದಂತೆ ಹಾಗೂ ಅಪ್ರಾಪ್ತರು ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಬಂಕ್ ಮಾಲೀಕರಿಗೆ ಮೈಸೂರಿನ ಅಪರಾಧ ಮತ್ತು ಸಂಚಾರ ಡಿಸಿಪಿ ಎಂ.ಎಸ್. ಗೀತಾ ಪ್ರಸನ್ನ ಮನವಿ ಮಾಡಿದ್ದಾರೆ.
ಬಂಕ್ ಮಾಲೀಕರ ಮಾಹಿತಿ ಮೇರೆಗೆ ಕೂಡಲೇ ಗಸ್ತಿನಲ್ಲಿರುವ ಪೊಲೀಸರು ಸ್ಥಳಕ್ಕೆ ಆಗಮಿಸಲಿದ್ದಾರೆ. ವಾಹನ ವಶಕ್ಕೆ ಪಡೆದು ಇಲ್ಲವೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 18 ವರ್ಷದೊಳಗಿನವರು ಪೆಟ್ರೋಲ್ ಬಂಕ್‌ಗೆ ವಾಹನ ತಂದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಬೆಲೆ 25 ರು. ಏರಿಕೆ, ಪೆಟ್ರೋಲ್ ಗಗನಕ್ಕೆ! ..
ಇನ್ನು ಮುಂದೆ ಅಪ್ರಾಪ್ತರು ಪೆಟ್ರೋಲ್ ಬಂಕ್‌ಗೆ ಹೊಗುವ ಮುನ್ನ ಎಚ್ಚರ ವಹಿಸಿ, ಸಂಚಾರ ನಿಯಮ ಪಾಲಿಸಲೇಬೇಕು. ಅಪ್ರಾಪ್ತರು ಬೈಕ್ ಮತ್ತು ಇತರೆ ವಾಹನವನ್ನು ತೆಗೆದುಕೊಂಡು ಬಂಕ್‌ಗೆ ಹೋದರೆ ಅಲ್ಲಿನ ಸಿಬ್ಬಂದಿ ಈ ವಿಷಯವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲಿದ್ದಾರೆ. ಬಂಕ್‌ನಲ್ಲಿರುವ ಸಿಸಿಟಿವಿಯಲ್ಲಿ ವಾಹನದ ನೋಂದಣಿ ಸಂಖ್ಯೆ, ಅಪ್ರಾಪ್ತರ ಫೋಟೋ ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಕುಟುಂಬದವರನ್ನು ಕರೆದು ಬುದ್ದಿವಾದ ಹೇಳಿ ಅರಿವು ಮೂಡಿಸಲಾಗುತ್ತದೆ. ಆಗಲೂ ಮಾತು ಕೇಳದಿದ್ದರೆ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.