ಹುಬ್ಬಳ್ಳಿ: ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಹಾದಿ ಸುಗಮ?

Kannadaprabha News   | Asianet News
Published : Feb 06, 2021, 11:25 AM IST
ಹುಬ್ಬಳ್ಳಿ: ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಹಾದಿ ಸುಗಮ?

ಸಾರಾಂಶ

ದಿಂಗಾಲೇಶ್ವರರ ಬೆನ್ನಿಗೆ ನಿಂತ ರುದ್ರಮುನಿ ದೇವರು| ಮಠದಲ್ಲಿ ರಾತ್ರಿಯಿಡೀ ನಡೆದ ಚರ್ಚೆ| ಉನ್ನತಾಧಿಕಾರ ಸಮಿತಿಯೂ ಒಲವು?| ಗುರುಸಿದ್ಧರಾಜಯೋಗೀಂದ್ರ ಶ್ರೀಗಳೊಂದಿಗೆ ಗೌಪ್ಯ ಸಭೆ ನಡೆಸಿದ ತಿಪಟೂರಿನ ರುದ್ರಮುನಿ ದೇವರು| 

ಹುಬ್ಬಳ್ಳಿ(ಫೆ.06): ಕಳೆದ ಒಂದೂವರೆ ದಶಕದಿಂದ ಸದಾ ಸುದ್ದಿಯಲ್ಲಿರುವ ಇಲ್ಲಿನ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಶೀಘ್ರವೇ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿದ್ದು, ನಾನೇ ಉತ್ತರಾಧಿಕಾರಿ ಎನ್ನುತ್ತಿದ್ದ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳ ಹಾದಿ ಇದೀಗ ಸುಗಮವಾಗಿದೆ!

ಗುರುವಾರ ರಾತ್ರಿ ಈ ಸಂಬಂಧ ಮಠದಲ್ಲಿ ಸುದೀರ್ಘ ಆಂತರಿಕ ಸಭೆ ನಡೆದಿದೆ. ಸಭೆಯಲ್ಲಿ ಉನ್ನತಾಧಿಕಾರ ಸಮಿತಿಯ ಕೆಲ ಸದಸ್ಯರು ದಿಂಗಾಲೇಶ್ವರ ಶ್ರೀಗಳ ಬಗ್ಗೆ ಒಲವು ತೋರಿಸಿದರು ಮತ್ತು ಈ ವಿವಾದಕ್ಕೊಂದು ಸುಖಾಂತ್ಯ ಕಾಣಿಸೋಣ ಎಂದು ಹಿಂದಿನ ಉತ್ತರಾಧಿಕಾರಿ ರುದ್ರಮುನಿ ದೇವರು ದಿಂಗಾಲೇಶ್ವರರ ಪರ ನಿಂತಿರುವುದು ಈ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.

ಹಿರಿಯ ಶ್ರೀಗಳಾಗಿದ್ದ ಶ್ರೀ ಗಂಗಾಧರ ರಾಜಯೋಗೀಂದ್ರರು ಲಿಂಗೈಕ್ಯರಾದ ಬಳಿಕ ಉತ್ತರಾಧಿಕಾರಿ ವಿವಾದ ನಡೆಯುತ್ತಲೇ ಇದೆ. ಮೊದಲಿಗೆ ಗುರುಸಿದ್ಧ ರಾಜಯೋಗೀಂದ್ರರು- ರುದ್ರಮುನಿ ದೇವರ ಮಧ್ಯೆ ನಡೆದಿತ್ತು. ಬಳಿಕ ರುದ್ರಮುನಿ ದೇವರು ತಿಪಟೂರಿನ ಮಠಕ್ಕೆ ತೆರಳಿದರು. ಬಳಿಕ ದಿಂಗಾಲೇಶ್ವರ ಶ್ರೀಗಳನ್ನು ಉತ್ತರಾಧಿಕಾರಿ ಮಾಡುವ ಪ್ರಯತ್ನವೂ ನಡೆಯಿತು. ಅದು ಕೂಡ ಅರ್ಧಕ್ಕೆ ಸ್ಥಗಿತಗೊಂಡಿತ್ತು. ನಂತರ ಈ ವಿಷಯ ಕೋರ್ಟ್‌ ಮೆಟ್ಟಿಲೇರಿದೆ.
ಇದೀಗ ಕಳೆದ ನಾಲ್ಕು ತಿಂಗಳ ಹಿಂದೆ ಮತ್ತೊಮ್ಮೆ ದಿಂಗಾಲೇಶ್ವರ ಶ್ರೀಗಳು ತಾವೇ ಉತ್ತರಾಧಿಕಾರಿಯೆಂದು ‘ಸತ್ಯದರ್ಶನ ಸಭೆ’ ನಡೆಸಿದರು. ಈ ನಡುವೆ ಮಠದ ಆಸ್ತಿಗಳ ಪರಭಾರೆ ವಿಷಯವಾಗಿ ಕಳೆದ ಒಂದು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ.

ಮೂರುಸಾವಿರ ಮಠದ ಆಸ್ತಿ ಉಳಿಸಿ ಬೆಳೆಸಬೇಕಿದೆ: ದಿಂಗಾಲೇಶ್ವರ ಶ್ರೀ

ಈ ನಡುವೆ ದಿಢೀರನೇ ತಿಪಟೂರಿನ ರುದ್ರಮುನಿ ದೇವರು ಗುರುವಾರ ಸಂಜೆ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸುಮಾರು ಹೊತ್ತು ಗುರುಸಿದ್ಧರಾಜಯೋಗೀಂದ್ರ ಶ್ರೀಗಳೊಂದಿಗೆ ಗೌಪ್ಯ ಸಭೆ ನಡೆಸಿದ್ದುಂಟು. ಉತ್ತರಾಧಿಕಾರಿ ವಿವಾದ ಬಗೆಹರಿಸಬೇಕು ಎಂಬ ಅಭಿಪ್ರಾಯವನ್ನೂ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಆಪ್ತರೆದುರು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಗೌಪ್ಯ ಸಭೆಯಲ್ಲಿ ಈ ವಿಷಯ ಕೂಡ ಚರ್ಚೆಗೆ ಬಂದಿದೆ. ಮೂರುಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ದಿಂಗಾಲೇಶ್ವರ ಶ್ರೀಗಳನ್ನೇ ಮಾಡಿದರೆ ಒಳಿತು ಎಂಬ ಅಭಿಪ್ರಾಯ ಕೂಡ ಬಂದಿದೆ ಎನ್ನಲಾಗಿದೆ. ರುದ್ರಮುನಿ ದೇವರು ದಿಂಗಾಲೇಶ್ವರರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಉನ್ನತಾಧಿಕಾರ ಸಮಿತಿಯ ಕೆಲ ಸದಸ್ಯರು ಕೂಡ ದಿಂಗಾಲೇಶ್ವರ ಶ್ರೀಗಳ ಬಗ್ಗೆ ಒಲವು ತೋರಿದ್ದಾರೆ. ಕೆಲವರು ಅಪಸ್ವರ ಎತ್ತಿದ್ದಾರೆನ್ನಲಾಗಿದೆ. ಅವರೆಲ್ಲರನ್ನು ಒಪ್ಪಿಸುವ ಕೆಲಸ ಸಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ಮಾತುಗಳು ಮಠದ ಆವರಣದಿಂದ ಕೇಳಿ ಬರುತ್ತಿದೆ.
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು