ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಐದು ಅಂಗಡಿಗಳಿಗೆ ಬೆಂಕಿ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಬೆಂಕಿಯ ಅವಘಡಕ್ಕೆ ಸುಮಾರು ನಲವತ್ತು ಲಕ್ಷ ರೂ.ಗಿಂತಲೂ ಹೆಚ್ಚು ಹಾನಿ| ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ|
ಗಂಗಾವತಿ(ಜ.25): ನಗರದ ಜುಲೈ ನಗರ ರಸ್ತೆಯಲ್ಲಿ ಬರುವ ಬಿಲಾನ್ ಸುನ್ನಿ ಖಬರಸ್ಥಾನ್ ಮಸೀದಿ ಹತ್ತಿರದ ವಿದ್ಯುತ್ ಕಂಬದಲ್ಲಿ ತಡರಾತ್ರಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಐದು ಅಂಗಡಿಗಳಿಗೆ ಬೆಂಕಿ ತಗುಲಿ ಸುಮಾರು ನಲವತ್ತು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಮೌಲ್ಯದ ವಸ್ತುಗಳು ಭಸ್ಮಗೊಂಡಿವೆ.
ಮಧ್ಯರಾತ್ರಿ ಸುಮಾರು 2 ಗಂಟೆಗೆ ಅಂಗಡಿಗಳ ಪಕ್ಕದಲ್ಲಿನ ವಿದ್ಯುತ್ ಕಂಬದಲ್ಲಿ ಶ್ಯಾಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಮೊದಲು ಹೊನ್ನೂರಸಾಬ್ ಎಂಬುವವರು ರೆಗ್ಜಿನ್ ಅಂಗಡಿಗೆ ತಗುಲಿದ ಬೆಂಕಿ, ನಂತರದಲ್ಲಿ ಪಕ್ಕದ ದ್ವಿಚಕ್ರ ವಾಹನದ ಅಂಗಡಿಗೆ ತಗುಲಿ ನಂತರ ಆಸೀಫ್ ಹುಂಡೆಗಾರ ಕಾರ್ಪೆಂಟರ್ ಅಂಗಡಿಗೆ ವ್ಯಾಪಿಸಿದೆ. ಒಟ್ಟು ಐದು ಅಂಗಡಿಗಳಲ್ಲಿದ್ದ ನಾನಾ ರೀತಿಯ ಕೆಲಸದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹೊನ್ನೂರ್‌ಸಾಬ್, ಜಾವೀದ್, ಖಾಜಾಪಾಶಾ, ಆಸೀಫ್ ಹುಂಡೇಗಾರ, ಜಿನೇನ್‌ಸಾಬ್ ಅವರಿಗೆ ಸೇರಿದ ಅಂಗಡಿಗಳ ಸುಮಾರು ನಲವತ್ತು ಲಕ್ಷಕ್ಕೂ ಹೆಚ್ಚು ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿರತೆ ಮರಿಗಳ ಹಳೆಯ ಚಿತ್ರ ವೈರಲ್: ಜನರಲ್ಲಿ ಹೆಚ್ಚಿದ ಆತಂಕ
ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಭೇಟಿ ನೀಡಿ ಪರಿಶೀಲಿಸಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಭೇಟಿ ನೀಡಿ, ಮಾಲೀಕರಿಗೂ ತಲಾ ಐದು ಸಾವಿರ ರುಪಾಯಿಗಳಂತೆ ವೈಯಕ್ತಿಕವಾಗಿ ಧನಸಹಾಯ ಮಾಡಿ, ಸಾಂತ್ವನ ಹೇಳಿದರು.