Forest fire: ನೆರಿಯ, ಉಜಿರೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅನಾಹುತ

By Kannadaprabha News  |  First Published Mar 9, 2023, 11:13 AM IST

: ತಾಲೂಕಿನ ನೆರಿಯ ಹಾಗೂ ಉಜಿರೆ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸಿದ ಘಟನೆ ನಡೆದಿದೆ.


ಬೆಳ್ತಂಗಡಿ (ಮಾ.9) : ತಾಲೂಕಿನ ನೆರಿಯ ಹಾಗೂ ಉಜಿರೆ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸಿದ ಘಟನೆ ನಡೆದಿದೆ.

ನೆರಿಯ ಗ್ರಾಮದ ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಲ್ಲಿ ಪಟ್ಲ, ಕಾಟಜೆ ಮೊದಲಾದ ಕಡೆ, ಬೆಂಕಿ ಕಂಡುಬಂದು ಕಾಡಿನಲ್ಲಿದ್ದ ಹುಲ್ಲು ಹೊತ್ತಿ ಉರಿದಿದೆ. ಅರಣ್ಯದ ಕಲ್ಲುಗಳ ಮೇಲೆ ಬೆಳೆದಿರುವ ಒಣ ಹುಲ್ಲಿಗೆ ಬೆಂಕಿ ಹತ್ತಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳೀಯರ ಸಹಕಾರದಲ್ಲಿ ಶೌರ್ಯ ವಿಪತ್ತು ತಂಡ ಹಾಗೂ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಯತೀಂದ್ರ, ಗಸ್ತು ಅರಣ್ಯ ಪಾಲಕ ಪಾಂಡುರಂಗ ಹಾಗೂ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಇದರಿಂದ ಬೆಂಕಿ ವನ್ಯ ಸಂಪತ್ತು ಇರುವ ದಟ್ಟಅರಣ್ಯದ ಕಡೆಗೆ ಪಸರಿಸಿಲ್ಲ ಎಂದು ಹೇಳಲಾಗಿದೆ.

Tap to resize

Latest Videos

 

ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಡ್ಗಿಚ್ಚು, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಭಸ್ಮ!

ನೆರಿಯ ಪರಿಸರದ ಬಾಂಜಾರುಮಲೆ ಹಾಗೂ ಇನ್ನಿತರ ಕೆಲವು ಖಾಸಗಿ ಸ್ಥಳಗಳಲ್ಲೂ ಬೆಂಕಿ ಪ್ರಕರಣಗಳು ಉಂಟಾಗಿರುವ ಕುರಿತು ತಿಳಿದು ಬಂದಿದೆ. ಉಜಿರೆಯ ನಿನ್ನಿಗಲ್ಲು ಪಾಲೆಂಜ ಎಂಬಲ್ಲಿ ಕಿಡಿಗೇಡಿಗಳು ರಸ್ತೆಬದಿ ಒಣಹುಲ್ಲಿಗೆ ಬೆಂಕಿ ಹಚ್ಚಿದ ಪರಿಣಾಮದಿಂದ ಪರಿಸರದಲ್ಲಿ ಬೆಂಕಿ ಆವರಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸಮೀಪದಲ್ಲಿ ಇರುವ ಖಾಸಗಿ ಕಂಪನಿಯ ಮೊಬೈಲ್‌ ಟವರ್‌ ಹತ್ತಿರದವರೆಗೂ ಬೆಂಕಿ ವ್ಯಾಪಿಸಿ ಖಾಸಗಿ ಸ್ಥಳಗಳತ್ತ ಪಸರಿಸಿತು. ಡಿಆರ್‌ಎಫ್‌ಒ ಹರಿಪ್ರಸಾದ್‌, ಗಸ್ತು ಅರಣ್ಯ ಪಾಲಕ ರವಿ, ವೀಕ್ಷಕ ಸದಾನಂದ, ಉಜಿರೆ ಗ್ರಾಪಂ ಸದಸ್ಯ ಗುರುಪ್ರಸಾದ್‌ ಕೋಟ್ಯಾನ್‌, ಜೆರ್ಮಿ ಡೇಸಾ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಸಹಕರಿಸಿದರು. ಇಲ್ಲಿನ ರಸ್ತೆಯ ಇನ್ನೊಂದು ಭಾಗದಲ್ಲಿರುವ ಅರಣ್ಯ ಇಲಾಖೆಯ ನೆಡುತೋಪಿಗೆ ಸೋಮವಾರ ಬೆಂಕಿ ಬಿದ್ದು ಸುಮಾರು 3 ಎಕರೆ ಪ್ರದೇಶ ಆಹುತಿಯಾಗಿತ್ತು.

ಕಳೆದೊಂದು ವಾರದಿಂದ ನಿನ್ನಿಗಲ್ಲು ಪರಿಸರದ ಅಲ್ಲಲ್ಲಿ ಬೆಂಕಿ ಅನಾಹುತ ಉಂಟಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಚಾರ್ಮಾಡಿಯ ಆಲೆಖಾನ್‌ ಹೊರಟ್ಟಿಪ್ರದೇಶ, ಚಿಕ್ಕಮಗಳೂರು ವಿಭಾಗದ ಘಾಟಿ ಪರಿಸರದ ಅಲ್ಲಲ್ಲಿ ಲಘು ಪ್ರಮಾಣದಲ್ಲಿ ಬೆಂಕಿ ಉರಿಯುತ್ತಿದೆ ಎಂದು ತಿಳಿದುಬಂದಿದೆ.

ಚಾಮುಂಡಿಬೆಟ್ಟ ಸೇರಿ 4 ಕಡೆ ಕಾಳ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

click me!