ಹರಿಜನವಾಡದಲ್ಲಿ 30 ಮನೆಗಳು ಜಲಾವೃತ| 30 ಜನರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ| ಪ್ರವಾಹದಿಂದ ವಿದ್ಯುತ್ ಕಂಬ ಏರಿ ಕುಳಿತುಕೊಂಡಿದ್ದ ಬಿಹಾರದ ಮೂವರು ಕಾರ್ಮಿಕರು|
ಚಿಂಚೋಳಿ(ಅ.15): ಕೆಳದಂಡೆ ಮುಲ್ಲಾಮಾರಿ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ಹೆಚ್ಚಿನ ನೀರು ಹರಿಬಿಟ್ಟ ಪರಿಣಾಮವಾಗಿ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ.
ಚಿಂಚೋಳಿ-ಬೀದರ್ ರಸ್ತೆ ಮಾರ್ಗದಲ್ಲಿ ಸೇತುವೆ ನಿರ್ಮಾಣದಲ್ಲಿದ್ದ ಬಿಹಾರದ ಮೂವರು ಕಾರ್ಮಿಕರು ಪ್ರವಾಹದಿಂದ ವಿದ್ಯುತ್ ಕಂಬ ಏರಿ ಕುಳಿತುಕೊಂಡಿದ್ದರು. ಪಿಎಸ್‌ಐ ರಾಜಶೇಖರ ರಾಠೋಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ, ಜಲಾಶಯದ ಒಂದು ಗೇಟ್ ಬಂದ್ ಮಾಡಿಸಿ ನೀರಿನ ಪ್ರಮಾಣ ಕಡಿಮೆಗೊಳಿಸಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
undefined
ದಶಕಗಳ ದಾಖಲೆ ಮಳೆಗೆ ಮುಳುಗಿದ ಕಲಬುರಗಿ
ಹರಿಜನವಾಡದಲ್ಲಿ ಅನೇಕ ಮನೆಗಳಿಗೆ ಮಧ್ಯರಾತ್ರಿ ನೀರು ನುಗ್ಗಿದ್ದರಿಂದ ಭಯಭೀತರಾದ ಜನರು ಎಚ್ಚರಗೊಂಡು ಮಾಳಿಗೆಯಲ್ಲಿ ಆಸರೆ ಪಡೆದಿದ್ದಾರೆ. ಹರಿಜನವಾಡದಲ್ಲಿ 30 ಮನೆಗಳು ಜಲಾವೃತವಾಗಿವೆ. ಸ್ಥಳಕ್ಕೆ ಪುರಸಭೆ ಸದಸ್ಯ ಅಬ್ದುಲ್ ಬಾಸೀತ, ಸಮದ ಖಾನ, ಕಲಿಮೋದ್ದೀನ ಭೇಟಿ ನೀಡಿ ಜನರಿಗೆ ರಕ್ಷಣೆ ಮಾಡಿದ್ದಾರೆ. ಚಂದಾಪೂರ ನಗರದ ಹನುಮಾನ ನಗರದಲ್ಲಿ 20 ಮನೆಗಳಿಗೆ ನೀರು ನುಗ್ಗಿ ಭಯಭೀತರಾದ ಜನರು ರಕ್ಷಣೆಗಾಗಿ ಕೂಗಿಕೊಂಡಿರುವ ಸದ್ದು ಕೇಳಿದ ಪಿಎಸ್‌ಐ ವಿಶ್ವನಾಥರೆಡ್ಡಿ ಅವರು ಅಗ್ನಿಶಾಮಕ ದಳದವರೊಂದಿಗೆ ಸ್ಥಳಕ್ಕೆ ಹೋಗಿ 30 ಜನರನ್ನು ಹಗ್ಗದ ಸಹಾಯದಿಂದ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.