ಪ್ರೀತಿಗಾಗಿ ಕೊಲೆಗೆ ಯತ್ನ: ಒಂದೂವರೆ ವರ್ಷ ಕೋಮಾದಲ್ಲಿದ್ದವಗೆ 2 ಲಕ್ಷ ಪರಿಹಾರ

By Kannadaprabha NewsFirst Published Oct 15, 2020, 3:31 PM IST
Highlights

ಪ್ರೀತಿಗಾಗಿ ನಡೆದಿತ್ತು ಒಂದು ಕೊಲೆ ಯತ್ನ .. ಈ ವೇಳೆ ಕೊಲೆಯಾಗಬೇಕಿದ್ದವ ಕೋಮಾಗೆ ಹೋಗಿ ಆಸ್ಪತ್ರೆ ಸೇರಿದ ಮುಂದೆನಾಯ್ತು..?

ಬೆಂಗಳೂರು (ಅ.15):  ಹುಡುಗಿಯ ಪ್ರೀತಿಯ ವಿಚಾರದಲ್ಲಿ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ದಂಡ ವಿಧಿಸಿದೆ.

ಹೊಸಕೋಟೆ ತಾಲೂಕಿನ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಿ.ವೆಂಕಟೇಶ್‌ ನಾಯಕ್‌ ಅವರು ಅಪರಾಧಿಗಳಾದ ಶಶಾಂಕ್‌ದಾಸ್‌ ಮತ್ತು ಜಿತೇಂದ್ರನಾಥ್‌ ಎಂಬವರಿಗೆ ಶಿಕ್ಷೆ ವಿಧಿಸಿದ್ದಾರೆ.

ಅಲ್ಲದೇ ಅಪರಾಧಿಗಳ ಕೃತ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂತ್ರಸ್ತ ಸೋವಿಕ್‌ ಚಟರ್ಜಿ ಅವರಿಗೆ ದಂಡದ ಮೊತ್ತದಲ್ಲಿ 1.90 ಲಕ್ಷ ರು. ಪರಿಹಾರವಾಗಿ ನೀಡಬೇಕು. ಇನ್ನುಳಿದ .10 ಸಾವಿರವನ್ನು ದಂಡದ ರೂಪದಲ್ಲಿ ಸರ್ಕಾರ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನರ್ಸ್‌ಗೆ ಬೆಂಕಿ ಹಚ್ಚಿದ ಮಾಜಿ ಗೆಳೆಯ ತಾನು ಬೆಂದು ಸತ್ತ! ..

ಒಂದೂವರೆ ವರ್ಷ ಕೋಮಾದಲ್ಲಿದ್ದ ಸಂತ್ರಸ್ತ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮ ಬಂಗಾಳದಿಂದ ಬಂದಿದ್ದ ಈ ಮೂವರು ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಈ ನಡುವೆ ಹುಡುಗಿಯನ್ನು ಪ್ರೀತಿಸುವ ವಿಚಾರವಾಗಿ ಸಂತ್ರಸ್ತ ಸೋವಿಕ್‌ ಚಟರ್ಜಿ ಮತ್ತು ಶಶಾಂಕ್‌ದಾಸ್‌ ನಡುವೆ ಜಗಳ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಶಶಾಂಕ್‌ ತನ್ನನ್ನ ಸ್ನೇಹಿತ ಜಿತೇಂದ್ರನಾಥ್‌ ಜೊತೆ ಸೇರಿ ಸೋವಿಕ್‌ ಚಟರ್ಜಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದ.

2010ರ ಡಿಸೆಂಬರ್‌ 6ರಂದು ಸೋವಿಕ್‌ ಚಟರ್ಜಿಗೆ ಮನೆಗೆ ಬರುವಂತೆ ಶಶಾಂಕ್‌ ಒತ್ತಾಯಿಸಿದ್ದ. ಬಳಿಕ ಜಿತೇಂದ್ರನೊಂದಿಗೆ ಮನೆ ಮೇಲೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ, ಮನೆಯ ಎರಡನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದರು. ಇದರಿಂದ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಒಂದೂವರೆ ವರ್ಷ ಕಾಲ ಚಿಕಿತ್ಸೆ ಪಡೆದಿದ್ದನು.

ರೇಖಾ ಚಿತ್ರಗಳಿಂದ ಆರೋಪಿಗಳ ಪತ್ತೆ:  ಒಂದೂವರೆ ವರ್ಷ ಕೋಮಾದಲ್ಲಿದ್ದ ಚಟರ್ಜಿ ಅಲ್ಪ ಪ್ರಮಾಣದಲ್ಲಿ ಗುಣಮುಖರಾದಂತೆ ಮಾತು ಬಾರದಿದ್ದರೂ ಪ್ರಕರಣವನ್ನು ವಿವರಿಸಲು ಪ್ರಯತ್ನ ಮಾಡುತ್ತಿದ್ದ. ಬಳಿಕ ರೇಖಾ ಚಿತ್ರಗಳನ್ನು ಬಿಡಿಸುವ ಮೂಲಕ ಘಟನೆಗೆ ಸಂಬಂಧ ತಿಳಿಸಿದ್ದ. ಇದರಿಂದ ಸುಳಿವು ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಕೀಲ ಸಂಜಯ್‌ಕುಮಾರ್‌ ಭಟ್‌ ವಾದಿಸಿದ್ದರು.

click me!