ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಪ್ತನ ವಿರುದ್ಧ ಎಫ್ಐಆರ್‌!

Published : Jan 21, 2026, 01:36 PM IST
Minister SS Mallikarjun Aide Anna Bhagya Rice Scam

ಸಾರಾಂಶ

ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಮೇಲೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಆಪ್ತ ಮೊಹಮ್ಮದ್ ಜಮೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ವಹಿವಾಟು ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಆಪ್ತ ಮೊಹಮ್ಮದ್ ಜಮೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಶಂಕರ್ ವಿಹಾರ್ ಬಡಾವಣೆಯಲ್ಲಿ ಅಕ್ರಮ ಸಂಗ್ರಹ ಪತ್ತೆ

ಖಚಿತ ಮಾಹಿತಿಯ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸಂಯುಕ್ತವಾಗಿ ದಾಳಿ ನಡೆಸಿ, ದಾವಣಗೆರೆಯ ಶಂಕರ್ ವಿಹಾರ್ ಬಡಾವಣೆಯಲ್ಲಿರುವ ಕಟ್ಟಡವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಅಕ್ಕಿಯನ್ನು ಪತ್ತೆ ಹಚ್ಚಿದ್ದಾರೆ. ದಾಳಿಯ ವೇಳೆ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಇದು ತೋರಿಸುತ್ತದೆ.

ಇಬ್ಬರ ವಿರುದ್ಧ FIR, ತನಿಖೆ ಆರಂಭ

ಈ ಪ್ರಕರಣದಲ್ಲಿ ಸಚಿವರ ಆಪ್ತ ಮೊಹಮ್ಮದ್ ಜಮೀರ್ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

FIR ಬಳಿಕ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ

ಪ್ರಕರಣದ ಎಫ್‌ಐಆರ್ ದಾಖಲಾಗುತ್ತಿದ್ದಂತೆ, ಬಿಜೆಪಿ ನಾಯಕರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರ ಹಾಗೂ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ ಹಾಗೂ ಆರೋಪಿಯಾದ ಮೊಹಮ್ಮದ್ ಜಮೀರ್ ಒಟ್ಟಿಗೆ ಇರುವ ಫೋಟೋಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.

“ದಾವಣಗೆರೆಯ ಅಕ್ರಮಗಳ ಪಿತಾಮಹ ಸಚಿವ ಮಲ್ಲಿಕಾರ್ಜುನ” – ಬಿಜೆಪಿ ಆರೋಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶವಂತರಾವ್ ಜಾಧವ್, “ದಾವಣಗೆರೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಪಿತಾಮಹ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೇ” ಎಂದು ತೀವ್ರ ಆರೋಪ ಮಾಡಿದರು. ಈಗಾಗಲೇ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಚಿವರ ಮತ್ತೊಬ್ಬ ಆಪ್ತ ಶಿವರಾಜ್ ಬಂಧನಕ್ಕೊಳಗಾಗಿರುವುದು ಜನತೆಗೆ ಗೊತ್ತಿರುವ ವಿಷಯ. ಇದೀಗ ಅನ್ನಭಾಗ್ಯ ಅಕ್ಕಿ ಅಕ್ರಮ ವಹಿವಾಟು ದಂಧೆಯಲ್ಲಿ ಮೊಹಮ್ಮದ್ ಜಮೀರ್ ಬಂಧನವಾಗಿರುವುದು, ಸಚಿವರ ಆಪ್ತರೇ ಅಕ್ರಮಗಳಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಮೊಹಮ್ಮದ್ ಜಮೀರ್ ಸಚಿವರ ಅತ್ಯಾಪ್ತ

ಬಿಜೆಪಿ ನಾಯಕರು, ಮೊಹಮ್ಮದ್ ಜಮೀರ್ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಅತ್ಯಂತ ಆಪ್ತ ವ್ಯಕ್ತಿಯಾಗಿದ್ದಾನೆ ಅಲ್ಲದೆ, ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಮೊಹಮ್ಮದ್ ಜಮೀರ್‌ಗೆ ರಾಖಿ ಕಟ್ಟಿದ ಫೋಟೋ ಕೂಡ ಇದೆ , ಈ ಸಂಬಂಧ ನೈತಿಕ ಹೊಣೆಗಾರಿಕೆಯನ್ನು ಸರ್ಕಾರ ಹೊರುವಂತೆ ಒತ್ತಾಯಿಸಿದ್ದಾರೆ.

ಕಠಿಣ ಕ್ರಮಕ್ಕೆ ಒತ್ತಾಯ

ಅಕ್ರಮ ಅನ್ನಭಾಗ್ಯ ಅಕ್ಕಿ ವಹಿವಾಟು ದಂಧೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಶವಂತರಾವ್ ಜಾಧವ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು ಮತ್ತು ಬಡವರ ಅನ್ನವನ್ನು ದೋಚಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಧಾರವಾಡದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿಗೂಢ ಹತ್ಯೆ, ವಿನಯ್ ಕುಲಕರ್ಣಿ ಡೈರಿ ಬಳಿ ಶವ ಪತ್ತೆ!
ಜೆಡಿಎಸ್ ಪಾಳಯದಲ್ಲಿ ಟಾಕ್ ವಾರ್: ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದ ಜಿಟಿಡಿ ವಿರುದ್ಧ ಮಂಜೇಗೌಡ ಕೆಂಡಾಮಂಡಲ