
ಉಡುಪಿ : ಶ್ರೀ ಕೃಷ್ಣಮಠದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಇನ್ನು ಮುಂದೆ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಅಂಗಿ ಮತ್ತು ಬನಿಯನ್ ತೆಗೆದಿಟ್ಟು ಪ್ರವೇಶಿಸಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ.
ಈ ಹಿಂದೆಯೂ ಇಲ್ಲಿ ಭಾಗಶಃ ವಸ್ತ್ರಸಂಹಿತೆ ಜಾರಿಯಲ್ಲಿತ್ತು, ಕೃಷ್ಣಮಠದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾಪೂಜೆ ನಡೆಯುತ್ತದೆ. ಅಲ್ಲಿವರೆಗೆ ಕೃಷ್ಣನ ದರ್ಶನ ಮಾಡುವವರು ಕಡ್ಡಾಯವಾಗಿ ಅಂಗಿ, ಬನಿಯನ್ ತೆಗೆದು ಪ್ರವೇಶಿಸಬೇಕಿತ್ತು. ಮಹಾಪೂಜೆ ನಂತರ ಕೃಷ್ಣನ ದರ್ಶನಕ್ಕೆ ಈ ಕಡ್ಡಾಯ ಇರಲಿಲ್ಲ.
ಆದರೆ ಈಗ ಶೀರೂರು ಮಠದ 2 ವರ್ಷಗಳ ಪರ್ಯಾಯ ಆರಂಭವಾಗಿದೆ. ಕೃಷ್ಣಮಠದಲ್ಲಿ ಪರ್ಯಾಯ ನಡೆಸುವ ಮಠಗಳು ತಮ್ಮ ನಿರ್ವಹಣೆಗೆ ತಕ್ಕಂತೆ 2 ವರ್ಷಗಳ ಅವಧಿಗೆ ಕೆಲ ನಿಯಮಗಳನ್ನು ಜಾರಿಗೊಳಿಸುವುದು ಇಲ್ಲಿ ಸಾಮಾನ್ಯ. ಅದರಂತೆ ಶೀರೂರು ಮಠದಿಂದ ಈ ವಸ್ತ್ರಸಂಹಿತೆ ಜಾರಿಯಾಗಿದೆ.
ಪುರುಷ ಭಕ್ತರು ಮಹಾಪೂಜೆ ಮತ್ತು ಇತರ ಸಮಯದಲ್ಲೂ ಕಡ್ಡಾಯವಾಗಿ ಅಂಗಿ, ಬನಿಯನ್ ಕಳಚಿ ಒಳ ಪ್ರವೇಶಿಸಬೇಕು, ಮಹಿಳೆಯರೂ ಸ್ವಚ್ಛಂದವಾದ ಬಟ್ಟೆಯನ್ನು ಧರಿಸುವಂತಿಲ್ಲ, ದೇವರ ದರ್ಶನಕ್ಕೆ ಬರುವಾಗ ಎಂತಹ ಬಟ್ಟೆಗಳನ್ನು ಧರಿಸಬೇಕೋ ಎನ್ನುವ ವಿವೇಚನೆಯಿಂದ ಬಟ್ಟೆ ಧರಿಸಿ ಬನ್ನಿ, ಪ್ಯಾಂಟು ಧರಿಸಬಹುದು, ಆದರೆ ತೀರಾ ಬರ್ಮುಡಾದಂತಹ ಬಟ್ಟೆಗಳು ಬೇಡ ಎಂದು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.