ಧಾರವಾಡದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿಗೂಢ ಹತ್ಯೆ, ವಿನಯ್ ಕುಲಕರ್ಣಿ ಡೈರಿ ಬಳಿ ಶವ ಪತ್ತೆ!

Published : Jan 21, 2026, 01:05 PM IST
Dharwad Zhakia Case

ಸಾರಾಂಶ

ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಧಾರವಾಡ (ಜ.21): ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಪರಾರಿಯಾಗಿರುವ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಘಟನೆಯ ವಿವರ:

ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ (19) ಕೊಲೆಯಾದ ದುರ್ದೈವಿ. ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿದ್ದ ಝಕಿಯಾ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವತಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.

ಹತ್ಯೆ ಮಾಡಿ ಶವ ಎಸೆದ ಶಂಕೆ:

ಇಂದು ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಬೇರೆ ಯಾವುದೋ ಸ್ಥಳದಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ಶವವನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕುಟುಂಬಸ್ಥರ ಆಕ್ರಂದನ:

ತಮ್ಮ ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. 'ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ಸ್ಥಿತಿ ಬರಬಾರದಿತ್ತು' ಎಂದು ಕಣ್ಣೀರಿಟ್ಟ ಕುಟುಂಬಸ್ಥರು, ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಯುವತಿಯ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೆ ಪ್ರೇಮ ಪ್ರಕರಣ ಕಾರಣವೇ ಅಥವಾ ಬೇರೆ ಯಾವುದಾದರೂ ದ್ವೇಷವಿದೆಯೇ ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

PREV
Read more Articles on
click me!

Recommended Stories

ಜೆಡಿಎಸ್ ಪಾಳಯದಲ್ಲಿ ಟಾಕ್ ವಾರ್: ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದ ಜಿಟಿಡಿ ವಿರುದ್ಧ ಮಂಜೇಗೌಡ ಕೆಂಡಾಮಂಡಲ
ಜ್ಞಾನಭಾರತಿ ಇನ್ಸ್ಪೆಕ್ಟರ್ ಸಸ್ಪೆಂಡ್ ಬೆನ್ನಲ್ಲೇ 'ಹವಾಲಾ' ಸ್ಫೋಟ: 1.05 ಕೋಟಿ ಹಣದ ಜಾಲದಲ್ಲಿ ಸಿಲುಕಿದ್ರಾ ರವಿ?