ನಿಯಮ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟಿನ್‌ಗೆ ಒಳಪಡಿಸಲಾಗುವುದು: DC ಎಂ.ಎಸ್. ಅರ್ಚನಾ| ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಶನಿವಾರ ಮಾಗಡಿ ಪಟ್ಟಣದ 48 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದು ಕೊರೋನಾ ಸೋಂಕಿನಿಂದಲೇ|
ರಾಮನಗರ(ಜೂ.29): ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಹೊರಗೆ ಓಡಾಡುತ್ತಿದ್ದ ಎಂಟು ಮಂದಿಯ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ರಾಮನಗರ ತಾಲೂಕಿನ ಮತ್ತು ಕನಕಪುರ ತಾಲೂಕಿನ ತಲಾ ನಾಲ್ಕು ಮಂದಿಯ ಮೇಲೆ ಸಂಬಂಧಪಟ್ಟ ತಹಸೀಲ್ದಾರ್ ಆಯಾಯ ತಾಲೂಕು ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೋಂ ಕ್ವಾರಂಟಿನ್‌ನಲ್ಲಿ ಇರಬೇಕಾದವರು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುವುದು ಮತ್ತು ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗುವುದು ಇಲ್ಲವೇ ಇನ್ನಾರಿಗಾದರೂ ಮೊಬೈಲ್ ಕೊಟ್ಟಂತಹ ಸಂದರ್ಭಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾದರಿ ಮಾರ್ಗಸೂಚಿಗಳನ್ವಯ ಎಫ್.ಐ.ಆರ್ ದಾಖಲಿಸಲಾಗುವುದು. ಜೊತೆಗೆ ನಿಯಮ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟಿನ್‌ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಕೊರೋನಾ ಸೋಂಕಿತರ ಜತೆ ವಿಡಿಯೋ ಸಂವಾದ: ರೋಗಿಗಳಿಗೆ ಧೈರ್ಯ ತುಂಬಿದ DCM ಅಶ್ವತ್ಥ ನಾರಾಯಣ
2 ಕೋವಿಡ್ ಪ್ರಕರಣ:
ಜಿಲ್ಲೆಯಲ್ಲಿ ಭಾನುವಾರ 2 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ. ಮಾಗಡಿ ಹಾಗೂ ಚನ್ನಪಟ್ಟಣದಲ್ಲಿ ತಲಾ ಒಂದೊಂದು ಪ್ರಕರಣ ಕಂಡು ಬಂದಿದ್ದು,ಅವರನ್ನು ರಾಮನಗರ ಕೋವಿಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಒಂದೇ ದಿನ 23 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ಮೃತ ವ್ಯಕ್ತಿಗೆ ಸೋಂಕು ದೃಢ:
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಶನಿವಾರ ಮಾಗಡಿ ಪಟ್ಟಣದ 48 ವರ್ಷ ವಯಸ್ಸಿನ ವ್ಯಕ್ತಿ ಕೊರೋನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ದೃಢಪಡಿಸಿದ್ದಾರೆ. ಈ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾದಂತಾಗಿದೆ.