ದಾವಣಗೆರೆಯಲ್ಲಿ ಮತ್ತೆ 6 ಹೊಸ ಕೊರೋನಾ ಪಾಸಿಟಿವ್‌ ಕೇಸ್‌ ಪತ್ತೆ

By Kannadaprabha News  |  First Published Jun 29, 2020, 10:50 AM IST

ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ(ಜೂ.28) ಮತ್ತೆ ಹೊಸದಾಗಿ 6 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಸಂಖ್ಯೆ ಮತ್ತೆ 40 ಗಡಿ ದಾಟಿದೆ. ಈ ಕುರಿತಾದ ಒಂದು ರಿಫೋರ್ಟ್ ಇಲ್ಲಿದೆ ನೋಡಿ. 


ದಾವಣಗೆರೆ(ಜೂ.29): ಒಂದು ಹಂತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದ ಜಿಲ್ಲೆಯಲ್ಲಿ ಹೊಸದಾಗಿ 6 ಪಾಸಿಟಿವ್‌ ಕೇಸ್‌ಗಳು ದೃಢಪಟ್ಟಿವೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 42.

ನಗರದ ತರಳಬಾಳು ಬಡಾವಣೆ, 37 ವರ್ಷದ ಪುರುಷ (ಪಿ-11950), 64 ವರ್ಷದ ಪುರುಷ (11951), 30 ವರ್ಷದ ಮಹಿಳೆ (11952), 55 ವರ್ಷದ ಪುರುಷ (11953) ಈ ನಾಲ್ಕೂ ಜನರು ಬೆಂಗಳೂರು ಪ್ರವಾಸ ಹಿನ್ನೆಲೆ ಸೋಂಕಿಗೆ ತುತ್ತಾಗಿದ್ದಾರೆ.

Latest Videos

undefined

ಹಗೇದಿಬ್ಬ ಸರ್ಕಲ್‌ ಬಳಿಯ ವಾಸಿ 68 ವರ್ಷದ ಪುರುಷ (11954) ಬಫರ್‌ ಝೋನ್‌ನಲ್ಲಿ ತಪಾಸಣೆ ವೇಳೆ ಸೋಂಕು ಪತ್ತೆಯಾಗಿದೆ. ಹರಿಹರದ ಗಂಗಾ ನಗರದ ವಾಸಿ 65 ವರ್ಷದ ಪುರುಷ (11955) ಹಾವೇರಿ ಪ್ರವಾಸದ ಹಿನ್ನೆಲೆ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.

6 ಬಿಡುಗಡೆ:

ಚನ್ನಗಿರಿ ಕುಂಬಾರ ಬೀದಿಯ 31 ವರ್ಷದ ಪುರುಷ (ಪಿ-8799), ದಾವಣಗೆರೆ ಆನೆಕೊಂಡದ ವಾಸಿ 39 ವರ್ಷದ ಪುರುಷ (8800), ಚನ್ನಗಿರಿ ಕುಂಬಾರ ಬೀದಿಯ 56 ವರ್ಷದ ಮಹಿಳೆ (8803), 60 ವರ್ಷದ ಮಹಿಳೆ (8804), 59 ವರ್ಷದ ಪುರುಷ (8805) ಹಾಗೂ ಚನ್ನಗಿರಿ ಗೌಡರ ಬೀದಿಯ 47 ವರ್ಷದ ಪುರುಷ (8806) ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

SSLC ಪರೀಕ್ಷೆ ಬರೆದಿದ್ದ ಮತ್ತಿಬ್ಬರು ಮಕ್ಕಳಿಗೆ ಕೊರೋನಾ ಸೋಂಕು!

ಜಿಲ್ಲೆಯಲ್ಲಿ ಈವರೆಗೆ 295 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 7 ಜನರು ಸಾವನ್ನಪ್ಪಿದ್ದಾರೆ. 246 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈಗ 42 ಸಕ್ರಿಯ ಕೇಸ್‌ಗಳಿವೆ.

ಹರಿಹರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್‌ ಕೇಸ್‌

ಹರಿಹರ: ನಗರದ ಎಪಿಎಂಸಿ ಹಿಂಭಾಗದ ಗಂಗಾನಗರದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್‌ ಕಂಡುಬಂದಿದ್ದು, ಆ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಕಂಟೈನ್‌ಮೆಂಟ್‌ ಝೋನ್‌ಗೆ ಕ್ರಮ ಕೈಗೊಂಡಿದೆ.

ಕೂಲಿ ಕೆಲಸ ಮಾಡುವ 65 ವರ್ಷ ಈ ವ್ಯಕ್ತಿ ಕೆಲ ದಿನಗಳ ಹಿಂದೆ ಹಾವೇರಿ ತಾಲೂಕು ದೇವರಗುಡ್ಡ ಪಿಎಚ್‌ಸಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಭೇಟಿ ನೀಡಿದ್ದರು. ಆ ಮನೆಗೆ ಇವರ ಸಂಬಂಧಿಯಾದ ಮಂಡ್ಯದ ವ್ಯಕ್ತಿಯೊಬ್ಬರು ಬಂದಿದ್ದರು. ಈ ಮಾಹಿತಿ ತಿಳಿದ ಅಲ್ಲಿನ ಆರೋಗ್ಯ ಇಲಾಖೆಯವರು ಹೋಂ ಕ್ವಾರಂಟೈನ್‌ ಇರಲು ಸೂಚಿಸಿದ್ದರು. ಆದರೂ ಇವರು ಕಣ್ತಪ್ಪಿಸಿ ಇಲ್ಲಿನ ಗಂಗಾನಗರದ ಮಗಳ ಮನೆಗೆ ಆಗಮಿಸಿದ್ದಾರೆ. ಕೊಳಚೆ ಪ್ರದೇಶದಲ್ಲಿ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸುವಾಗ ಈ ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬದವರು ಪರೀಕ್ಷೆ ಮಾಡಿಸಿದ್ದರು.

ಶನಿವಾರ ಈ ವ್ಯಕ್ತಿಯಲ್ಲಿ ಸೋಂಕು ಇದೆ ಎಂದು ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಆತನನ್ನು ದಾವಣಗೆರೆ ಕೋವಿಡ್‌-19 ಆಸ್ಪತ್ರೆಗೆ ಸಾಗಿಸಿದ್ದರು. ಈತನ ಪ್ರಾಥಮಿಕ ಸಂಪರ್ಕದಲ್ಲಿರುವ ಐವರು, ದ್ವಿತೀಯ ಸಂಪರ್ಕದಲ್ಲಿರುವ ಇಬ್ಬರ ದ್ರವ ಮಾದರಿ ಸಂಗ್ರಹಿಸಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಈವರೆಗೆ ತಾಲೂಕಿನಲ್ಲಿ 17 ಪ್ರಕರಣಗಳು ಬೆಳಕಿಗೆ ಬಂದಿದ್ದು, ಆ ಪೈಕಿ ರಾಜನಹಳ್ಳಿಯ ಗರ್ಭಿಣಿ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿ ಗಂಗಾನಗರದಲ್ಲಿ ಸಂಚರಿಸಿ ನಿವಾಸಿಗಳಿಗೆ ಸೂಚನೆ ನೀಡಿದರು. ನಗರಸಭೆ ಸಿಬ್ಬಂದಿ ಸ್ವಚ್ಚತೆ ಕೈಗೊಂಡು ಕ್ರಿಮಿನಾಶಕ ಸಿಂಪರಣೆ ಮಾಡಿದ್ದಾರೆ.
 

click me!