Taralabalu Hunnime: ಮಠಗಳಿಗೆ ನೆರವು- ಟೀಕಾಕಾರರಿಗೆ ಸಿಎಂ ತಿರುಗೇಟು

By Kannadaprabha News  |  First Published Feb 5, 2023, 11:12 AM IST

ಮಠ ಮಾನ್ಯಗಳಿಗೆ ಅನುದಾನ ನೀಡುತ್ತಿರುವುದನ್ನು ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವು (ಮಠ ಮಾನ್ಯಗಳು) ಸಾವಿರಾರು ವರ್ಷಗಳಿಂದ ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ಅವಿರತವಾದ ಸೇವೆ ಸಲ್ಲಿಸುತ್ತಿವೆ. ಇವರಿಗೆ ಅನುದಾನ, ನೆರವು, ಪ್ರಾತಿನಿಧ್ಯ ನೀಡದೇ ಕೇವಲ ಕೊಳಲು ಟೀಕೆ ಮಾಡುವವರಿಗೆ ಪ್ರಾತಿನಿಧ್ಯ ನೀಡಬೇಕಿತ್ತೆ ಎಂದು ಪ್ರಶ್ನಿಸಿದ್ದಾರೆ.


ಜಿ.ಸೋಮಶೇಖರ

 ಕೊಟ್ಟೂರು (ಫೆ.5) : ಮಠ ಮಾನ್ಯಗಳಿಗೆ ಅನುದಾನ ನೀಡುತ್ತಿರುವುದನ್ನು ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವು (ಮಠ ಮಾನ್ಯಗಳು) ಸಾವಿರಾರು ವರ್ಷಗಳಿಂದ ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ಅವಿರತವಾದ ಸೇವೆ ಸಲ್ಲಿಸುತ್ತಿವೆ. ಇವರಿಗೆ ಅನುದಾನ, ನೆರವು, ಪ್ರಾತಿನಿಧ್ಯ ನೀಡದೇ ಕೇವಲ ಕೊಳಲು ಟೀಕೆ ಮಾಡುವವರಿಗೆ ಪ್ರಾತಿನಿಧ್ಯ ನೀಡಬೇಕಿತ್ತೆ ಎಂದು ಪ್ರಶ್ನಿಸಿದ್ದಾರೆ.

Latest Videos

undefined

ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ 8ನೇ ದಿನ ಶನಿವಾರದಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕೊಳ್ಳೇಗಾಲದಿಂದ ಬೀದರ ವರೆಗೂ ಮಠ, ಮಾನ್ಯಗಳು ಸರ್ಕಾರಕ್ಕೆ ಸಮನಾಗಿ ಕಾರ್ಯ ಮಾಡುತ್ತ ಅಕ್ಷರ, ಆರೋಗ್ಯ, ದಾಸೋಹ ಕ್ಷೇತ್ರದಲ್ಲಿ ಕಾರ್ಯವೆಸಗಿ ಬಡವರಿಗೆ ನೆರವಾಗುತ್ತಿವೆ. ಇದನ್ನು ಆಕ್ಷೇಪಿಸುವುದು ಮೂರ್ಖತನದ ಮಾತು ಎಂದರು.

ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

ಪ್ರತಿ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವ ನಾಡಿನ ವಿವಿಧಡೆಯಲ್ಲಿ ಜರುಗುವ ಮೂಲಕ ಸಂಸ್ಕೃತಿ ಮತ್ತು ಅರಿವನ್ನು ಸರ್ವರಲ್ಲಿ ಹರಡಿಸುತ್ತಿದೆ. ಇದೊಂದು ನಾಡಿಗೆ ಅರಿವು ಮೂಡಿಸುವ ಮಹೋತ್ಸವ ಎಂದು ಬಣ್ಣಿಸಿದರು. ಕೃಷಿ ನೀರಾವರಿ ಶಿಕ್ಷಣ, ದಾಸೋಹ ವಿಶೇಷವಾಗಿ ರೈತರ ಕಾಳಜಿ ವಹಿಸಿ ಅವರ ಪರ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಸಿರಿಗೆರೆ ಶ್ರೀಗಳು ಮಾಡುತ್ತಿದ್ದಾರೆ. ನಿಜಕ್ಕೂ ಈ ಮಠ ಜನಮುಖಿ ಎಂದರು.

ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಅನುಮತಿ

ಇದೇ ಸಂದರ್ಭದಲ್ಲಿ ಬಹು ಪ್ರಸ್ತಾಪಿತ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಬೃಹತ್‌ ಯೋಜನೆಗೆ ಸರ್ಕಾರದ ಮಂಜೂರಾತಿ ಭರವಸೆಯೊಂದಿಗೆ ತಾಲೂಕಿನ ಸಂಗಮೇಶ್ವರ, ಬಳಿಗನೂರು ಸೇತುವೆಗೆ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ನಿರ್ಮಿಸುವ ಯೋಜನೆಗೂ ಸಹ ಮಂಜೂರಾತಿ ನೀಡುವೆ ಎಂದು ಬೊಮ್ಮಾಯಿ ಘೋಷಿಸಿದರು.

ತರಳಬಾಳು ಮಹೋತ್ಸವಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ಸಂದರ್ಭದಲ್ಲಿ ಈ ಯೋಜನೆ ಸೂಕ್ತ ಅನುದಾನ ಒದಗಿಸಿ ಮಂಜೂರಾತಿ ನೀಡಬೇಕೆಂದು ತೀವ್ರ ಬಗೆಯ ಒತ್ತಡ ಹೇರಿದ್ದ ತರಳಬಾಳು ಜಗದ್ಗುರುಗಳ ಮಾತಿಗೆ ಸಿಎಂ ಸಹಮತ ವ್ಯಕ್ತಪಡಿಸುವ ಮೂಲಕ ನೆರೆದಿದ್ದ ಲಕ್ಷಾಂತರ ಭಕ್ತರ ಹರ್ಷೋದ್ಗಾರಕ್ಕೆ ಕಾರಣರಾದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ರೈತಮುಖಿ ಮಠವೆಂದೇ ಗುರ್ತಿಸಿಕೊಂಡಿರುವ ತರಳಬಾಳು ಮಠ ಮತ್ತು ಜಗದ್ಗುರುಗಳು ನಾಡಿನ ಕಳಸ ಇದ್ದಂತೆ, ಮಠಾಧೀಶರು ಮಡಿವಂತಿಕೆ ಬಿಟ್ಟು ಜನರ ಜತೆಗೆ ಬೇರೆತು ಅಭಿವೃದ್ದಿ ಕಾರ್ಯ ಕೈಗೊಳ್ಳುವತ್ತ ತೊಡಗಿಸಿಕೊಳ್ಳಬೇಕೆಂಬ ಸಂದೇಶವನ್ನು ಸಿರಿಗೆರೆ ಶ್ರೀಗಳು ತೋರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಅಧ್ಯಾತ್ಮಿಕ ತಳಹದಿಯಲ್ಲಿ ತರಳಬಾಳು ಹುಣ್ಣಿಮೆ ಆಚರಿಸುವ ಮೂಲಕ ಸರ್ವ ಜನಾಂಗದ ಮಹೋತ್ಸವವಾಗಿ ಮಾರ್ಪಟ್ಟಿದೆ ಎಂದರು.

ಬೃಹತ್‌ ನೀರಾವರಿ ಸಚಿವ ಗೋವಿಂದ್‌ ಕಾರಜೋಳ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಶ್ಯಾಮನೂರ್‌ ಶಿವಶಂಕರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ 250ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಮೂಲಕ ಶ್ರೀಮಠ ನಾಡಿನ ವಿವಿಧಡೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ ಎಂದು ಕೊಂಡಾಡಿದರು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ್‌ ಕೆ.ನಾವಲಗಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿದ್ದರೆ ತರಳಬಾಳು ಜಗದ್ಗುರುಗಳು ಈ ಮೊದಲಿನಿಂದಲೂ ಪೀಠದಲ್ಲಿ ನಡೆಸುತ್ತಿರುವ ಸರಳ ಅಂತಿಮ ಅಂಶಗಳನ್ನು ಅಳವಡಿಸಿಕೊಂಡು ನ್ಯಾಯ ನೀಡುತ್ತಿದೆ ಎಂದರು.

ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜ್ಯೋಷಿ, ಎನ್‌.ವೈ.ಗೋಪಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ಮಹೋತ್ಸವಗಳು ಕೆಲವೆ ಕೆಲ ಜನರ ಮನದಲ್ಲಿ ಮನೆ ಮಾಡಿದ್ದು ಅಂತಹವುದರುಗಳಲ್ಲಿ ತರಳಬಾಳು ಮಹೋತ್ಸವ ಸೇರಿದೆ.ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ತರಳಬಾಳು ಶ್ರೀಗಳು ನಾಡು ಅಭಿವೃದ್ಧಿ ಪಥದತ್ತ ಸಾಗಲು ಕಾರಣರಾಗಿದ್ದಾರೆ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಕಾದಂಬರಿಕಾರ ಬಿ.ಎಲ್‌.ವೇಣು ಬರೆದಿರುವ ಅಕ್ಕಮಹಾದೇವಿ ಪುಸ್ತಕ ಬಿಡುಗಡೆಗೊಳಿಸಿದರು.

ಸಾನ್ನಿಧ್ಯ ವಹಿಸಿದ್ದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಧರ್ಮ ಜೀವನದ ಭಾಗವಾಗಿದ್ದು, ಈ ಮೂಲಕ ಜನತೆ ನ್ಯಾ¿å ಬೇಡುತ್ತಿದ್ದಾರೆ. ಇಂತಹ ನಂಬಿಕೆಗೆ ಧರ್ಮಗುರುಗಳು ಖಂಡಿತ ನ್ಯಾಯ ಒದಗಿಸಿಕೊಡುತ್ತಾರೆ. ಪ್ರತಿಯೊಂದರಲ್ಲಿ ಧರ್ಮ ಇರಬೇಕು. ಧರ್ಮ ಜೀವನದ ಪದ್ದತಿ ರಾಜಕೀಯದಲ್ಲಿ ಧರ್ಮವಿರಬೇಕೆ ಹೊರತು ಧರ್ಮದಲ್ಲಿ ರಾಜಕೀಯವಿರಬಾರದು ಎಂದು ಹೇಳಿದರು.

ವಿಜಯನಗರ: ಅರಿವಿನ ಹಬ್ಬ ತರಳಬಾಳು ಹುಣ್ಣಿಮೆ, ಸಿಎಂ ಬೊಮ್ಮಾಯಿ

ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಸಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಆರ್ಶೀವಚನ ನೀಡಿದರು. ಸಚಿವರುಗಳಾದ ಸಿ.ಸಿ.ಪಾಟೀಲ್‌, ಭೈರತಿ ಬಸವರಾಜ್‌, ಮಾಜಿ ಶಾಸಕ ಎಚ್‌.ಆಂಜನೇಯ, ಕಿರುದಾಳದ ವೀರನಗೌಡ ರುದ್ರಗೌಡ ಪಾಟೀಲ್‌, ಡಾ.ವೀರನಗೌಡ ಸಾಧು-ಸದ್ಧರ್ಮ ಸಮಾಜದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ,ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಬಿ.ಸಿ ಮೂಗಪ್ಪ ವೇದಿಕೆಯಲ್ಲಿದ್ದರು. ರಾಘವೇಂದ್ರ ಸ್ವಾಗತಿಸಿದರು. ಕೊಟ್ರೇಶ, ಮರುಳಸಿದ್ದಯ್ಯ ವಂದಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಸಿರಿಗೆರೆ ತರಳಬಾಳು ಕ್ರೀಡಾ ಮೇಳ -2022ರ ಯೋಗಪಟುಗಳು ಬಹುಬಗೆಯ ವಿಧದ ಯೋಗ ಪ್ರದರ್ಶನ ನೀಡಿ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

click me!