ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಒಲವು ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕನ್ನಡ ಸೇನೆ ಆಗ್ರಹಿಸಿದೆ.
,ಚಿಕ್ಕಮಗಳೂರು (ಫೆ.5) : ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಒಲವು ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕನ್ನಡ ಸೇನೆ ಆಗ್ರಹಿಸಿದೆ.
ಈ ಸಂಬಂಧ ಸೇನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ್ ಕೆ. ಚಂದ್ರಶೇಖರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ, ಬಳಿಕ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಮಾತನಾಡಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಪರಿಗಣಿಸಲು ಕನ್ನಡ-ಸಂಸ್ಕೃತಿ ಇಲಾಖೆ ಕೈಗೊಂಡಿರುವ ಕ್ರಮ ಕೈಬಿಡಬೇಕು ಎಂದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಸಮಿತಿ ರಚಿಸಿದ ರಾಜ್ಯ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಟ್ವೀಟ್ ಹಾಗೂ ಮಾಧ್ಯಮದಲ್ಲಿ ರಾಜ್ಯ ಸರ್ಕಾರ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸುವ ಕುರಿತು ಸಮಿತಿ ರಚಿಸಿದ್ದು, ಶೀಘ್ರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ. ತುಳು ಭಾಷೆ, ದಕ್ಷಿಣ ಕನ್ನಡ ಜಿಲ್ಲೆಯ ಬಹುಜನರು ಮಾತನಾಡುವ ಭಾಷೆಯಾಗಿದ್ದು, ಸುಮಾರು 17 ಲಕ್ಷಕ್ಕಿಂತಲೂ ಹೆಚ್ಚು ಜನ ತುಳು ಮಾತನಾಡುವವರಿದ್ದಾರೆ, ಆದ್ದರಿಂದ ತುಳುವನ್ನು 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸ ಬೇಕೆಂಬುದು ತುಳುವರ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
ತುಳು ಭಾಷೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನರು ಮಾತನಾಡುವ ಭಾಷೆಯಾಗಿದೆಯೆ ಹೊರತು ಇಡೀ ರಾಜ್ಯದಲ್ಲಿ ಮೊದಲನೇ ಅಥವಾ ಎರಡನೇ ಪ್ರಾಮುಖ್ಯತೆ ಹೊಂದಿರುವ ಭಾಷೆಯಲ್ಲ. ತುಳು ಭಾಷೆಗೆ ಯಾವುದೇ ಸ್ವಂತ ಲಿಪಿ, ಸಾಹಿತ್ಯವಾಗಲಿ ಇಲ್ಲ, ರಾಜ್ಯದ ಇತರೆ ಯಾವುದೇ ಜಿಲ್ಲೆಗಳಲ್ಲಿಯೂ ಸಹ ಬಹುಜನರು ಮಾತನಾಡುವ ಭಾಷೆ ಆಗಿರುವುದಿಲ್ಲ ಎಂದು ಹೇಳಿದರು.
ತುಳು ಮಾತನಾಡುವವರ ಸಂಖ್ಯೆ 17 ಲಕ್ಷಕ್ಕಿಂತಲೂ ಹೆಚ್ಚಿದೆ ಎನ್ನುವುದವನ್ನೆ ಆಧಾರವಾಗಿಟ್ಟುಕೊಂಡು, ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವುದಾದರೆ, ರಾಜ್ಯದಲ್ಲಿರುವ ಉರ್ದು, ತಮಿಳು, ತೆಲುಗು, ಮರಾಠಿ ಹಾಗೂ ಮಲೆಯಾಳಂ ಮಾತನಾಡುವವರ ಸಂಖ್ಯೆ ತುಳು ಮಾತನಾಡುವವರ ಸಂಖ್ಯೆಗಿಂತಲೂ ಹೆಚ್ಚಿದೆ.ಈ ಮಾನದಂಡವನ್ನೇ ಇಟ್ಟುಕೊಳ್ಳುವುದಾದರೆ ಉಳಿದ ಭಾಷಿಗರನ್ನು ಸಹ ಪರಿಗಣಿಸಬೇಕಾಗುತ್ತದೆ ಎಂದರು.
ಕಾರ್ಕಳ ಪರಶುರಾಮ ಥೀಂ ಪಾರ್ಕ್ ಪ್ರವಾಸೋದ್ಯಮಕ್ಕೆ ಮುಕುಟಮಣಿ: ಸುನಿಲ್
ತುಳು ಭಾಗದ ಬೇಡಿಕೆ ಅಷ್ಟಕ್ಕೆ ನಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಹೆಸರನ್ನು ತುಳುನಾಡು ಎಂದು ಬದಲಾಯಿಸುವ ಜತೆಗೆ ದಕ್ಷಿಣ ಕನ್ನಡ ಜಿಲ್ಲೆ ಹಲವು ಊರುಗಳ ಈಗಿನ ಹೆಸರನ್ನು ತುಳು ಭಾ ಷೆಗೆ ಬದಲಾಯಿಸಬೇಕೆಂಬ ಬೇಡಿಕೆ ಮುಂದೊಂದು ದಿನ ಉದ್ಬವವಾಗಬಹುದೆಂದು ಆಲೋಚಿಸದೆ ಈ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ ಎಂದು ಹೇಳಿದರು.ಹಾಗಾಗಿ ಸರ್ಕಾರದ ನಿಲುವನ್ನು ಕೂಡಲೆ ಕೈ ಬಿಡಬೇಕು. ಕನ್ನಡವನ್ನು ಹೊರತುಪಡಿಸಿ ಇತರೆ ಯಾವುದೇ ಭಾಷೆಯನ್ನು ಸ್ಥಾನಮಾನದ ಅಧಿಕೃತ ಭಾಷೆ ಎಂದು ಪರಿಗಣಿಸುವುದು, ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದಂತಾಗುತ್ತದೆ. ಇದನ್ನೆ ಮುಂದುವರೆಸಿದರೆ, ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ನಗರ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಶಂಕರೇಗೌಡ, ಹರೀಶ್, ಮೂಡಿಗೆರೆ ಪ್ರಸನ್ನ, ಹರೀಶ್, ಮೂರ್ತಿ, ಮಂಜುನಾಥ್ ಉಪಸ್ಥಿತರಿದ್ದರು.