ರೈತರು ಬೆಳೆಗಳನ್ನು ಬೆಳೆಯುವುದಕ್ಕಷ್ಟೇ ಸೀಮಿತವಾಗದೇ ಅವುಗಳ ಸಂಸ್ಕರಿಸಿ, ಮಾರಾಟ ಮಾಡುವ ಮೂಲಕ ಕೃಷಿ ಉದ್ಯಮ ಮಾಡಿಕೊಂಡು, ಉದ್ಯಮಿಗಳಾಗಿ ಹೊರ ಹೊಮ್ಮಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ದಾವಣಗೆರೆ (ಫೆ.5) : ರೈತರು ಬೆಳೆಗಳನ್ನು ಬೆಳೆಯುವುದಕ್ಕಷ್ಟೇ ಸೀಮಿತವಾಗದೇ ಅವುಗಳ ಸಂಸ್ಕರಿಸಿ, ಮಾರಾಟ ಮಾಡುವ ಮೂಲಕ ಕೃಷಿ ಉದ್ಯಮ ಮಾಡಿಕೊಂಡು, ಉದ್ಯಮಿಗಳಾಗಿ ಹೊರ ಹೊಮ್ಮಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಬೆಂಗಳೂರಿನ ಮೈಕ್ರೋಬಿ ¶ೌಂಡೇಷನ್ ಹಾಗೂ ಯುಎಸ್ ಕಮ್ಯುನಿಕೇಷನ್‌ನಿಂದ ಶನಿವಾರ ನಡೆದ ಕೃಷಿ ಮೇಳದಲ್ಲಿ ರೈತರೊ ಂದಿಗೆ ನಡೆದ ಸಂವಾದದಲ್ಲಿ ಮಾತನಾಡಿ, ಕೇವಲ ಒಂದು, ಎರಡೋ ಬೆಳೆಗಳಿಗೆ ಮಾತ್ರವೇ ಸೀಮಿತವಾಗದೇ, ಸಮಗ್ರ ಕೃಷಿ ಮಾಡುವ ಮೂಲಕ ಪ್ರಗತಿ ಹೊಂದಿ ಕೃಷಿ ಉದ್ಯಮಿಗಳಾಗಬೇಕು. ಆಗ ಮಾತ್ರ ರೈತರ ಜೇಬು ತುಂಬಲು ಸಾಧ್ಯ. ಸಾಕಷ್ಟುರೈತರು ಇಂದು ತಮ್ಮ ಸ್ವಂತ ಬಲದ ಮೇಲೆ ಕೃಷಿ ಉದ್ಯಮಿಗಳಾಗಿದ್ದಾರೆ. 2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ ಎಂದು ಹೇಳಿದರು.
undefined
ಟಾರ್ಗೆಟ್ ಮಾಡಿದವರನ್ನೇ ಸೋಲಿಸುತ್ತೇವೆ: ಬಿ.ಸಿ.ಪಾಟೀಲ್
ಸಮಗ್ರ ಕೃಷಿಯಿಂದ ಆರ್ಥಿಕ ಬಲ:
ರೈತರ ಆತ್ಮಹತ್ಯೆಗೆ ಮಳೆಯೇ ಕಾರಣವಲ್ಲ. ಕಡಿಮೆ ನೀರು ಹೊಂದಿರುವ ಕೋಲಾರ ಜಿಲ್ಲೆಗಿಂತಲೂ ಹೆಚ್ಚು ನೀರಾವರಿ ಪ್ರದೇಶವಿರುವ ಮಂಡ್ಯ ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ಮಂಡ್ಯದಲ್ಲಿ ಕೇವಲ ಭತ್ತ, ಕಬ್ಬು ಬೆಳೆಯುತ್ತಾರೆ. ಇವುಗಳಿಂದ ಆರ್ಥಿಕ ನಷ್ಟಹೊಂದಿದ ರೈತರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಅದೇ ಕೋಲಾರ ಭಾಗದ ರೈತರು ತಮ್ಮಲ್ಲಿರುವ ನೀರನ್ನೇ ಸದ್ಭಳಕೆ ಮಾಡಿ, ಸಮಗ್ರ ಕೃಷಿ ಮಾಡುವುದರಿಂದ ಒಂದು ಬೆಳೆಯಲ್ಲಿ ನಷ್ಟಹೊಂದಿದರೂ ಮತ್ತೊಂದು ಬೆಳೆ ರೈತರ ಕೈ ಹಿಡಿಯುತ್ತದೆ. ಆಗ ರೈತರ ಆರ್ಥಿಕತೆಯೂ ಸುಧಾರಣೆ ಕಂಡು, ಆತ್ಮಹತ್ಯೆ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈಕ್ರೋಬಿ ಸಮೂಹ ಸಂಸ್ಥೆ ಅಧ್ಯಕ್ಷ ಹುಲ್ಲು ನಾಚೇಗೌಡ ಮಾತನಾಡಿ, ಮಧ್ಯವರ್ತಿಗಳಿಲ್ಲದೇ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಅಪ್ಲಿಕೇಷನ್ ಆರಂಭಿಸಿದ್ದು, ಈಗಾಗಲೇ ಅದು ಚಾಲನೆಯಲ್ಲಿದೆ. ಉತ್ತಮ ಸ್ಪಂದನೆ, ಸಹಕಾರ ವ್ಯಕ್ತವಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆದ ಬೆಳೆಗಳ ಬೆವರಿಗೆ ತಕ್ಕ ಲಾಭವೂ ಸಿಗುತ್ತಿದೆ ಎಂದು ತಿಳಿಸಿದರು.
ಪ್ರಗತಿಪರ ರೈತ ಬಸವನ ಬಾಗೇವಾಡಿಯ ಶಿವಾನಂದ ಮಂಗಾನೂರರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಧಾರವಾಡ ಕೃಷಿ ವಿವಿ ಕೃಷಿ ವಿಸ್ತರಣಾ ನಿರ್ದೇಶಕ ಪ್ರೊ.ಆರ್.ಬಿ.ಬೆಳ್ಳಿ, ಬಾಗಲಕೋಟೆ ಸಂವಹನ ಕೇಂದ್ರ ಹಾಗೂ ತೋಟಗಾರಿಕೆ ವಿವಿ ಪ್ರಾಧ್ಯಾಪಕ ಡಾ.ಎಸ್.ಶಶಿಕುಮಾರ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಉಪ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ರೈತ ಮುಖಂಡರಾದ ಬಲ್ಲೂರು ರವಿಕುಮಾರ, ಸಾವಯವ ಕೃಷಿ ಸಲಹೆಗಾರ ಮಹದೇವಪ್ಪ ದಿದ್ದಿಗಿ, ಯುಎಸ್ ಕಮ್ಯುನಿಕೇಷನ್ಸ್ ಸಿಇಒ ಜೆ.ಎಂ.ಕಾರ್ತಿಕ್, ಕಕ್ಕರಗೊಳ್ಳ ವಿಶ್ವನಾಥ ಇತರರಿದ್ದರು.
ರಾಗಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ; ಸಿಎಂ ಬಳಿ ಚರ್ಚೆ
ದಾವಣಗೆರೆ: ರಾಗಿ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ನೀಡುತ್ತಿದ್ದು, ಅದನ್ನು 15 ಸಾವಿರಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಚರ್ಚಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕೇಂದ್ರದ ಬಜೆಟ್‌ನಲ್ಲಿ ರಾಗಿಗೆ ಪ್ರೋತ್ಸಾಹ ನೀಡಿದ್ದಾರೆ. ಒಂದು ಕಾಲದಲ್ಲಿ ನಾವು ಆಹಾರಕ್ಕಾಗಿ ಬಡಿದಾಡುತ್ತಿದ್ದೆವು. ಆದರೆ, ಈಗ ಪೋಷಕಾಂಶಯುಕ್ತ ಆಹಾರಕ್ಕಾಗಿ ಬಡಿದಾಡುವ ಸ್ಥಿತಿ ಇದೆ ಎಂದರು. ಪೋಷಕಾಂಶ, ನಾರಿನಾಂಶವು ಹೇರಳವಾಗಿರುವ ರಾಗಿಯು ಮನುಷ್ಯನ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದೇ ಕಾರಣಕ್ಕಾಗಿ ರಾಗಿಗೆ ಎಲ್ಲೆಡೆ ಪ್ರೋತ್ಸಾಹ ಸಿಗುತ್ತಿದೆ. ಹೊರ ರಾಷ್ಟ್ರದಲ್ಲೂ ರಾಗಿ ಬಗ್ಗೆ ಒಲವು ಹೆಚ್ಚಾಗುತ್ತಿದೆ ಎಂದು ವಿವರಿಸಿದರು.
ಕೃಷಿ ಮೇಳಗಳು ರೈತರಿಗೆ ಉತ್ತೇಜನ ನೀಡುವಂತಹದ್ದಾಗಿದೆ. ಹೊಸ ತಂತ್ರಜ್ಞಾನ, ಆಧುನಿಕ ಕೃಷಿ, ನೀರಿನ ಮಿತ ಬಳಕೆ, ತಳಿಗಳನ್ನು ಪರಿಚಯಿಸುವ, ಪ್ರಗತಿಪರ ರೈತರನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಉಳಿದ ರೈತರಿಗೂ ಪ್ರೋತ್ಸಾಹ, ಪ್ರೇರಣೆ ನೀಡುವ ಕೆಲಸ ಕೃಷಿ ಮೇಳಗಳಿಂದ ಆಗುತ್ತಿದೆ ಎಂದರು. ಪ್ರತಿ ವಿಶ್ವ ವಿದ್ಯಾನಿಲಯಗಳಲ್ಲೂ ಕೃಷಿ ಮೇಳಗಳ ಆಯೋಜಿಸಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಜಮೀನಿಗೆ ವಾಹನ ಬಂದು ಉತ್ಪನ್ನ ಸಾಗಣೆ
ಕೃಷಿ ಸಂಜೀವಿನಿ ಯೋಜನೆಯಡಿ ರಾಜ್ಯಾದ್ಯಂತ 184 ವಾಹನಗಳನ್ನು ರಾಜ್ಯ ಸರ್ಕಾರ ಒದಗಿಸಿದ್ದು, ರೈತರು ಕರೆ ಮಾಡಿದ ತಕ್ಷಣ ಈ ವಾಹನಗಳು ಜಮೀನುಗಳಿಗೆ ಹೋಗಿ, ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸುತ್ತವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತ ವಿದ್ಯಾನಿಧಿ ಯೋಜನೆಯಡಿ 10.80 ಲಕ್ಷ ವಿದ್ಯಾರ್ಥಿಗಳ ಖಾತೆಗೆ 483 ಕೋಟಿ ರು. ಹಣ ಹಾಕಲಾಗಿದೆ. ಫೆ.22ರಿಂದ ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ. ಪ್ರಧಾನಿ, ಮುಖ್ಯಮಂತ್ರಿಗಳು ನೈಸರ್ಗಿಕ ಕೃಷಿ ಯೋಜನೆಯಡಿ ಒಂದು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ 1 ಸಾವಿರ ಹೆಕ್ಟೇರ್ ನಿಗದಿಪಡಿಸಿದ್ದು, 7 ಸಾವಿರ ರು.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕೃಷಿ ಮೇಳ
ಮುಖ್ಯಮಂತ್ರಿಯವರು ನನಗೆ ಅರಣ್ಯ ಇಲಾಖೆ ಕೊಟ್ಟಿದ್ದರು. ಆ ಖಾತೆ ಪಡೆದಿದ್ದರೆ ನಾನು ಆರಾಮವಾಗಿರಬಹುದಿತ್ತು. ಆದರೆ, ನಾನು ಕೃಷಿ ಸಚಿವನಾದೆ. ಕೃಷಿ ಮಂತ್ರಿಯಾದರೆ ಜೈಕಾರಕ್ಕಿಂತ ಧಿಕ್ಕಾರಗಳೇ ಹೆಚ್ಚಾಗಿ ಕೇಳಿಸುತ್ತದೆ. ಹಾಗಿದ್ದರೂ ನಾನು ಕೃಷಿ ಖಾತೆ ಕೇಳಿ ಪಡೆದವನು. ನಾನೂ ರೈತನ ಮಗನಾಗಿರುವುದೇ ಇದಕ್ಕೆ ಕಾರಣ. ನನಗೆ ಈಗ ಸಿಕ್ಕಿರುವ ಅವಕಾಶದಲ್ಲಿ ರಾಜ್ಯದ ರೈತರ ಕಣ್ಣೀರು ಒರೆಸಿ, ಜೀವನ ಸಾರ್ಥಕಪಡಿಸಿಕೊಳ್ಳುವುದೇ ನನ್ನ ಗುರಿ.
ಬಿ.ಸಿ.ಪಾಟೀಲ್, ಕೃಷಿ ಸಚಿವ