ಜಿಲ್ಲೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ಎಸಗುತ್ತಿದ್ದಾರೆ. ಮತಾಂಧ ಶಕ್ತಿಗಳಿಗೆ ಹೆದರಿ ಈ ರೀತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು (ಜು.30| : ಜಿಲ್ಲೆಯಲ್ಲಿ ಮೃತಪಟ್ಟಯುವಕರ ಮನೆಯವರಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ತಾರತಮ್ಯ ಎಸಗಿದ್ದಾರೆ. ಮತಾಂಧ ಶಕ್ತಿಗಳಿಗೆ ಹೆದರಿ ಈ ರೀತಿ ಮಾಡಿದ್ದಾರೆ. ಸತ್ತ ಮೂವರೂ ಅಮಾಯಕರು. ಆದರೆ ಸಿಎಂ ಒಬ್ಬರ ಮನೆಗೆ ಮಾತ್ರ ಹೋಗಿ ಪರಿಹಾರ ನೀಡಿದ್ದಾರೆ. ಮೃತಪಟ್ಟಎಲ್ಲ ಯುವಕರ ಮನೆಯವರಿಗೂ ಸಮಾನವಾಗಿ ಪರಿಹಾರ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ಎಲ್ಲರನ್ನೂ ಸಮಾನವಾಗಿ ನೋಡುವ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಈಗ ಅವರ ನಿಲುವು ನೋಡುವಾಗ ನಾಚಿಕೆಯಾಗುತ್ತದೆ. ಮುಖ್ಯಮಂತ್ರಿ ಪರಿಹಾರ ನೀಡುವುದು ತನ್ನ ಕಿಸೆಯಿಂದಲ್ಲ, ಜನರ ತೆರಿಗೆ ಹಣದಿಂದ. ಆದರೆ ಅವರು ಒಂದು ಕಡೆ ಮಾತ್ರ ಹೋಗಿ ಪರಿಹಾರ ನೀಡಿದ್ದಾರೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ಎಂದು ಪ್ರಶ್ನಿಸಿದರು.
ಹಫ್ತಾ ಕೊಡದ ಕಾರಣಕ್ಕೆ ಪಬ್ ಮೇಲೆ ದಾಳಿ: ಯು.ಟಿ.ಖಾದರ್ ಗಂಭೀರ ಆರೋಪ
ಸಿಎಂ ಸ್ಥಾನಕ್ಕೆ ಕಪ್ಪುಚುಕ್ಕೆ: ಸ್ವತಃ ಸಿಎಂ ಪಕ್ಷಪಾತದ ತೀರ್ಮಾನ ಮಾಡಿದರೆ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ತನಿಖೆ ನಡೆಸುವ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ ಯು.ಟಿ. ಖಾದರ್, ಇಂಥ ತಾರತಮ್ಯ ಮಾಡಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ಕಪ್ಪುಚುಕ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಬರುವಾಗ ಎಲ್ಲವೂ ಸರಿಯಾಗುತ್ತದೆ ಎನ್ನುವ ನಂಬಿಕೆ ಜನರದ್ದು. ಆದರೆ ಸಿಎಂ ಜಿಲ್ಲೆಯಲ್ಲಿರುವಾಗಲೇ ಮತ್ತೊಂದು ಹತ್ಯೆ ನಡೆದಿದೆ. ಇದು ಯಾರ ವೈಫಲ್ಯ? ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದಿರುವುದೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಹತ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಯಾವ ಮತಾಂಧ ಶಕ್ತಿಗಳು ಇದರ ಹಿಂದೆ ಇದ್ದರೂ ಮಟ್ಟಹಾಕಬೇಕು. ಮುಂದೆ ಇಂಥ ಕೃತ್ಯ ಆಗದಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ಹತ್ಯೆ ಹಿಂದಿನ ಶಕ್ತಿಗಳಿಗೆ ಶಿಕ್ಷೆಯಾಗಲಿ: ರಮಾನಾಥ ರೈ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆ ಮಾಡಿದವರಿಗೆ ಮಾತ್ರ ಶಿಕ್ಷೆಯಾಗುತ್ತಿದೆಯೇ ವಿನಾ ಹತ್ಯೆ ಹಿಂದೆ ಇರುವ ಶಕ್ತಿಗಳಿಗೆ ಏನೂ ಆಗುತ್ತಿಲ್ಲ. ಅವರೆಲ್ಲ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈಗ ಪ್ರವೀಣ್ ಮತ್ತು ಮಸೂದ್ ಎರಡೂ ಹತ್ಯೆಗಳ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಿದರೆ ಮಾತ್ರ ಮುಂದೆ ಇಂತಹ ಹತ್ಯೆಗಳನ್ನು ನಿಲ್ಲಿಸಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಪ್ರವೀಣ್ ಮೃತದೇಹದ ಮೆರವಣಿಗೆ: SDPI, PFI ಧ್ವಜಗಳ ತೆರವು, ಅಂತಿಮ ದರ್ಶನಕ್ಕೆ ವ್ಯವಸ್ಥೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಇದುವರೆಗೆ ನಡೆದ ಹತ್ಯೆಗಳಲ್ಲಿ ಬಹುಪಾಲು ಹಿಂದುಳಿದ ವರ್ಗದ ಯುವಕರು ಮತ್ತು ಮುಸ್ಲಿಮರೇ ಆಗಿದ್ದಾರೆ. ಜೈಲಿಗೆ ಹೋಗುವವರು ಕೂಡ ಇದೇ ಸಮುದಾಯದವರು. ಮಸೂದ್ ಹತ್ಯೆಯಲ್ಲಿ ಜೈಲಿಗೆ ಹೋದ 8 ಮಂದಿ ಕೂಡ ಹಿಂದುಳಿದ ವರ್ಗದವರೇ ಎಂದರು.
ತಾರತಮ್ಯವಿಲ್ಲದೆ ಪರಿಹಾರ ನೀಡಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ. ಬೆಳ್ಳಾರೆಯಲ್ಲಿ ಕೆಲ ದಿನಗಳ ಹಿಂದೆ ಕೊಲೆ ನಡೆದಾಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು ಎಂದು ಹೇಳಿದ ರಮಾನಾಥ ರೈ, ಎರಡೂ ಹತ್ಯೆಗಳು ಖಂಡನೀಯ. ಸರ್ಕಾರವು ಹತ್ಯೆಗೀಡಾದ ಯುವಕರ ಕುಟುಂಬಸ್ಥರಿಗೆ ತಾರತಮ್ಯವಿಲ್ಲದೆ ಗರಿಷ್ಠ ಪರಿಹಾರ ಘೋಷಣೆ ಮಾಡಬೇಕು, ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ವಿಶ್ವಾಸ್ ಕುಮಾರ್‌ದಾಸ್, ಪ್ರಕಾಶ್ ಸಾಲ್ಯಾನ್, ಹರಿನಾಥ್ ಬೋಂದೆಲ್, ಪದ್ಮನಾಭ ಅಮೀನ್, ಪುರುಷೋತ್ತಮ ಚಿತ್ರಾಪುರ, ನೀರಜ್‌ಪಾಲ್, ನಝೀರ್ ಬಜಾಲ್ ಮತ್ತಿತರರಿದ್ದರು.