ಮಡಿಕೇರಿ: ಹಿಂದು ಜಾಗರಣ ವೇದಿಕೆ ಬೃಹತ್‌ ಪ್ರತಿಭಟನೆ

By Kannadaprabha News  |  First Published Jul 30, 2022, 10:27 AM IST

ಹಿಂದು ಕಾರ್ಯಕರ್ತರ ಮೇಲಿನ ರೌಡಿ ಶೀಟರ್‌ ತೆರವುಗೊಳಿಸಬೇಕು. ಕುಶಾಲನಗರ ಪೊಲೀಸ್‌ ಠಾಣಾ ವೃತ್ತ ನಿರೀಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.


ಮಡಿಕೇರಿ (ಜು.30) : ಹಿಂದು ಕಾರ್ಯಕರ್ತರ ಮೇಲಿನ ರೌಡಿ ಶೀಟರ್‌ ತೆರವುಗೊಳಿಸಬೇಕು. ಕುಶಾಲನಗರ ಪೊಲೀಸ್‌ ಠಾಣಾ ವೃತ್ತ ನಿರೀಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆಯಿಂದ ಶುಕ್ರವಾರ ಮಡಿಕೇರಿ ಚಲೋ ಬೃಹತ್‌ ಪ್ರತಿಭಟನೆ ನಡೆಯಿತು ನಗರದ ಜನರಲ್‌ ತಿಮ್ಮಯ್ಯ ವೃತ್ತದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ಹಿಂದು ಕಾರ್ಯಕರ್ತರು ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು.

ಪೊಲೀಸರು ಹಿಂದು ಕಾರ್ಯಕರ್ತ(Hindu Karyakarta)ರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿದ್ದಾರೆ. ಕಾರ್ಯಕರ್ತರ ಮನೆಗೆ ಅಕ್ರಮ ಪ್ರವೇಶ ಮಾಡಿ ಕಿರುಕುಳ ನೀಡಲು ಸೂಚಿಸಿದ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ನಗರದಲ್ಲಿ ಘೋಷಣೆ ಕೂಗಿದರು. ಜಿಲ್ಲೆಯಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುವುದರೊಂದಿಗೆ ಗೋಮಾಂಸ ಮಾರಾಟವಾಗುತ್ತಿದೆ. ಬಾಂಗ್ಲಾ ಮೂಲದ ಅಸ್ಸಾಂ ಹೆಸರಿನ ವಲಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮತಾಂತರ ಮತ್ತು ಲವ್‌ ಜಿಹಾದ್‌ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಗಾರರು ಆಗ್ರಹಿಸಿದರು.

Tap to resize

Latest Videos

ಅಕ್ರಮ ಮತಾಂತರ ಕೇಂದ್ರದ ಮೇಲೆ ಹಿಂದು ಜಾಗರಣ ವೇದಿಕೆ ದಾಳಿ : ಪೊಲೀಸರ ಮಧ್ಯಪ್ರವೇಶ

ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ಪ್ರತಿಭಟನಾ(Protest) ಮೆರವಣಿಗೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿತು. ಕೆಲವು ಪೊಲೀಸ್‌ ಅಧಿಕಾರಿಗಳು ಕಾರ್ಯಕರ್ತರನ್ನು ಸುಳ್ಳು ಕೇಸ್‌ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆಂದು ಪ್ರತಿಭಟನಾಕಾರರು ಪೊಲೀಸರಿಗೆ ದಿಕ್ಕಾರ ಹಾಕಿದರು. ಪ್ರತಿಭಟನೆ ಸಂದರ್ಭ ಹಿಂದು ಜಾಗರಣ ವೇದಿಕೆಯ ಪ್ರಮುಖ ಮಹೇಶ್‌ ಮಾತನಾಡಿ, ಪೊಲೀಸರಿಗೆ ನಾವು ಗೌರವ ಕೊಡುತ್ತೇವೆ. ಸಮಾಜದ ಸ್ಯಾಸ್ಥ್ಯ ಕಾಪಾಡಲು ಪೊಲೀಸ್‌ ಇಲಾಖೆ ಮುಖ್ಯ. ಆದರೆ ಒಂದೆರೆಡು ಪೊಲೀಸ್‌ ಅಧಿಕಾರಿಗಳಿಂದ ಇಡೀ ಪೊಲೀಸರಿಗೆ ಕೆಟ್ಟಹೆಸರು ಬರುವಂತಾಗಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ಹಾಕಿ ದೌರ್ಜನ್ಯ ಮಾಡಲಾಗುತ್ತಿದೆ. ಮಹಿಳೆಯರು, ಮಕ್ಕಳು ಮನೆಯಲ್ಲಿರುವಾಗ ರಾತ್ರೋರಾತ್ರಿ ಮನೆಗೆ ಹೋಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್‌ ಹಾಕಿ ದೌರ್ಜನ್ಯ ಮಾಡುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ ಅವರು, ವರ್ಗಾವಣೆ ಆಗದಿದ್ದಲ್ಲಿ ಎಸ್ಪಿ ಕಚೇರಿಯ ಮುಂಭಾಗದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದು ಜಾಗರಣ ವೇದಿಕೆ ಪ್ರಾಂತ ಸಂಯೋಜಕ ಲೋಹಿತ್‌ ಅರಸ್‌ ಮಾತನಾಡಿ, ನಮ್ಮ ಕಾರ್ಯಕರ್ತರ ಮೇಲೆ ಕೆಲವು ಪೊಲೀಸ್‌ ಅಧಿಕಾರಿಗಳು ಟಾರ್ಗೆಟ್‌ ಮಾಡಿ ಸುಳ್ಳು ಕೇಸ್‌ ದಾಖಲಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ. ಅವರನ್ನು ಇಲ್ಲಿಂದ ಅಮಾನತ್ತು ಮಾಡಬೇಕು. ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಕೂಡಲೇ ತೆರವುಗೊಳಿಸಬೇಕು. ನಮ್ಮ ಕಾರ್ಯಕರ್ತರು ಗೋಮಾತೆಯ ಸಂರಕ್ಷಣೆಗೆ, ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಗೂಂಡಾಗಳು, ರೌಡಿ ಶೀಟರ್‌ ಪಟ್ಟಕಟ್ಟಲಾಗುತ್ತಿದೆ ಎಂದು ಅಸಾಮಾಧಾನ ವ್ಯಕ್ತಪಡಿಸಿರು.

Praveen Nettaru Murder Case: ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ಮುತಾಲಿಕ್‌ ಎಚ್ಚರಿಕೆ

ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್‌, ವಿಹಿಂಪ ಕಾರ್ಯಾಧ್ಯಕ್ಷ ಸುರೇಶ್‌ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್‌, ಬಜರಂಗದಳದ ಸಹ ಸಂಚಾಲಕ ಚೇತನ್‌, ಆರ್‌ಎಸ್‌ಎಸ್‌ನ ಡಾಲಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್‌, ಮಾಜಿ ಅಧ್ಯಕ್ಷ ಭಾರತೀಶ್‌, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

* ದೂರವಾಣಿಯಲ್ಲಿ ಕಾರಂತ್‌ ಭಾಷಣ: ಒಂದು ತಿಂಗಳ ಗಡುವು

ಹಿಂದು ಜಾಗರಣ ವೇದಿಕೆ ಆಯೋಜಿಸಿದ್ದ ಮಡಿಕೇರಿ ಚಲೋ ಪ್ರತಿಭಟನೆಗೆ ಹಿಂದು ಜಾಗರಣ ವೇದಿಕೆಯ ಮುಖಂಡ ಜಗದೀಶ್‌ ಕಾರಂತ ಗೈರಾಗಿದ್ದರು. ಎಸ್ಪಿ ಕಚೇರಿಯಲ್ಲಿ ಪ್ರತಿಭಟನೆಯ ಸಂದರ್ಭ ದೂರವಾಣಿ ಮೂಲಕ ಜಗದೀಶ್‌ ಕಾರಂತ್‌ ಭಾಷಣ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿದ್ಯಾಮಾನದಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ನಾವು ಹಿಂದೂ ಸಮಾಜದ ಸುರಕ್ಷತೆ ಉದ್ದೇಶಕ್ಕೆ ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ. ಕುಶಾಲನಗರ ಠಾಣಾ ವೃತ್ತ ನಿರೀಕ್ಷಕ ಮಹೇಶ್‌ ವರ್ಗಾವಣೆ ಆಗಬೇಕು. ಇದಕ್ಕೆ ಒಂದು ತಿಂಗಳ ಗಡುವು ನೀಡುತ್ತೇವೆ. ಇಲ್ಲದಿದ್ದರೆ ರಾಜ್ಯದ ಇಡೀ ಜಿಲ್ಲೆಯಿಂದ ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

 ಕ್ರಮ ಭರವಸೆ ನೀಡಿದ ಎಸ್ಪಿ:

ಪ್ರತಿಭಟನಾಕಾರರ ಮಾತು ಆಲಿಸಿದ ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಯ್ಯಪ್ಪ ಮಾತನಾಡಿ, ಕಾರ್ಯಕರ್ತರ ಮೇಲಿರುವ ಕೇಸ್‌ಗಳ ಬಗ್ಗೆ ಪರಿಶೀಲನೆ ಮಾಡಿ ಪ್ರಕರಣ ಮುಕ್ತಾಯಗೊಳಿಸುವ ಸಂಬಂಧ ಈಗಾಗಲೇ ಪ್ರಕ್ರಿಯೆಯಲ್ಲಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ನನಗೆ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ಮೇಲಿನ ಅಧಿಕಾರಿಗಳಿಗೆ ತಿಳಿಸಬಹುದು. ಈ ಬಗ್ಗೆ ವರದಿ ಕಳುಹಿಸಲಾಗುವುದು. ಅಲ್ಲದೆ ಬೆಳಗ್ಗೆ ಕಾರ್ಯಕರ್ತರ ಮನೆಗೆ ತೆರಳಿದ ಪೊಲೀಸ್‌ ಸಿಬ್ಬಂದಿ ವಿರುದ್ಧ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಎಸ್ಪಿ ಕಚೇರಿಗೆ ಬಂದ ಸಂದರ್ಭ ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ನನ್ನ ಕಚೇರಿಯಲ್ಲ. ಇದು ಸಾರ್ವಜನಿಕರ ಕಚೇರಿ. ಇಲ್ಲಿ ಯಾರೂ ಬೇಕಾದರೂ ಬರಬಹುದು. ಕಚೇರಿಗೆ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ವೃದ್ಧರಿಗೆ ಭೇಟಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಅಲ್ಲದೆ ಮಕ್ಕಳು, ಮಹಿಳೆಯರಿಗೆ ಅವಕಾಶ ಮಾಡಲಾಗುತ್ತದೆ. ಆದರೆ ಹಿಂದು ಜಾಗರಣ ವೇದಿಕೆಯವರನ್ನು ನಾವು ಕಡೆಗಣಿಸಿಲ್ಲ. ಆದ್ದರಿಂದ ತಪ್ಪಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದರು

click me!