
ರಾಯಚೂರು: ಜಿಲ್ಲೆಯಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ತಂದೆಯೊಬ್ಬ ತನ್ನದೇ ರಕ್ತವಾದ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ಈ ಅಮಾನವೀಯ ಘಟನೆ ಇಲ್ಲಿನ ಲಿಂಗಸೂಗೂರು ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದಿದೆ.
ಸುಮಾರು ಎರಡು ವರ್ಷಗಳ ಕಾಲ ನಿರಂತರವಾಗಿ ಅಪ್ರಾಪ್ತೆ ಮಗಳ ಮೇಲೆಯೇ ತಂದೆಯು ದೌರ್ಜನ್ಯ ಎಸಗಿದ್ದ. ಈ ಕೃತ್ಯವನ್ನು ಯಾರಿಗೂ ತಿಳಿಸಬಾರದು ಎಂದು ಮಗಳಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ , ಭಯ ಮತ್ತು ನೋವಿನಿಂದ ಬಾಲಕಿ ಮೌನವಾಗಿಯೇ ಎಲ್ಲವನ್ನು ಸಹಿಸಿಕೊಂಡಿದ್ದಳು. ಅಪ್ಪನ ಬೆದರಿಕೆಯಿಂದ ಬಾಲಕಿ ನೊಂದು ಹೋಗಿದ್ದಳು. ಆರೋಪಿಯು ತನ್ನ ಕೃತ್ಯವನ್ನು ಯಾರಿಗೂ ಹೇಳದಂತೆ ಮಾತ್ರವಲ್ಲ ಹೆತ್ತ ತಾಯಿಗೆ ವಿಷಯ ತಿಳಿಯಬಾರದೆಂದು ಮಗಳಿಗೆ ಧಮ್ಕಿ ಹಾಕುತ್ತಿದ್ದ, ಈ ಎಲ್ಲಾ ವಿಚಾರಗಳು ಈಗ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಬೆಚ್ಚಿಬೀಳಿಸುವ ಶಾಕಿಂಗ್ ಸಂಗತಿಯೆಂದರೆ, ಆರೋಪಿಯು ತನ್ನ ಸ್ನೇಹಿತನನ್ನೂ ಈ ಕೃತ್ಯದಲ್ಲಿ ಭಾಗಿಯಾಗಿಸಿದ್ದಾನೆ. ತಾನು ಅತ್ಯಾ*ಚಾರಗೈದಿದ್ದು ಮಾತ್ರವಲ್ಲ ತನ್ನ ಸ್ನೇಹಿತ ಜೊತೆಗೆ ತನ್ನ ಮಕ್ಕಳನ್ನ ಮಲಗಿಸಿದ್ದಾನೆ ಈ ಪಾಪಿತಂದೆ. ಇದರಿಂದ ರೋಸಿ ಹೋದ ಬಾಲಕಿ ಪೊಲೀಸರ ಮೊರೆ ಹೋಗಿದ್ದು, ದೂರು ಆಧರಿಸಿ ಅತ್ಯಾ*ಚಾರಗೈದ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಮರೇಶ್ (40) ಹಾಗೂ ಶೀನು (33) ಎಂದು ಗುರುತಿಸಲಾಗಿದೆ.
ಸದ್ಯ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಬಾಲಕಿಯ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಘಟನೆ ಸಮಾಜದಲ್ಲಿ ಆತಂಕ ಮೂಡಿಸಿದ್ದು, ಮಕ್ಕಳ ರಕ್ಷಣೆ ಹಾಗೂ ಕುಟುಂಬದ ಒಳಗಿನ ಹಿಂಸಾಚಾರ ತಡೆಯುವ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.