
ಸದ್ಯ ವಿಶ್ವಾದ್ಯಂತ ಬಿಕ್ಕಟ್ಟಿನ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ, ಭಾರತದ ಮೇಲೆಯೂ ಗಂಭೀರ ಪರಿಣಾಮ ಉಂಟಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕಳೆದ ವಾರ ಕೆಲವೊಂದು ಮಹತ್ವದ ಕರೆಕೊಟ್ಟಿದ್ದರು. ಅದರಲ್ಲಿ ಒಂದು ಡೀಸೆಲ್, ಪೆಟ್ರೋಲ್ ಬಿಕ್ಕಟ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾಧ್ಯವಿರುವಲ್ಲೆಲ್ಲಾ ಮೆಟ್ರೋ ಬಳಸಿ, ಸ್ವಂತ ವಾಹನ ಕಡಿಮೆ ಮಾಡಿ, ಒಂದೇ ಕಡೆ ಸಾಗುವುದಿದ್ದರೆ ಕಾರ್ ಪೂಲಿಂಗ್ ಮಾಡಿಕೊಂಡು ಹೋಗಿ ಎಂದೆಲ್ಲಾ ಕರೆ ನೀಡಿದ್ದರು. ಈ ಕರೆಯ ಬಗ್ಗೆ ಇದಾಗಲೇ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಿದೆ.
ಆದರೆ ಇದರ ಮಧ್ಯೆಯೇ ಖುದ್ದು ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತಗೊಳಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೇಶದ ಒಳಗೆ ಇರುವ ಭಯೋತ್ಪಾದಕರೇ ಭಾರಿ ಕಣ್ಣು ಇಟ್ಟಿದ್ದಾರೆ. ಅವರ ಸಾವಿಗೆ ದೇಶದ ಒಳಗಿದ್ದುಕೊಂಡು, ಕೇಂದ್ರ ಸರ್ಕಾರದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿರುವವರೇ ಸ್ಕೆಚ್ ಹಾಕುತ್ತಿದ್ದಾರೆ. ಆದ್ದರಿಂದ ಅವರಿಗೆ ಭಾರಿ ಭದ್ರತೆಯ ಅವಶ್ಯಕತೆ ಇದೆ. ಹಾಗೆಂದು ಮೋದಿ ಮಾತ್ರವಲ್ಲ, ಯಾರೇ ಪ್ರಧಾನಿಯಾಗಿದ್ದರೂ, ಸಿಎಂ ಆಗಿದ್ದರೂ ಅವರಿಗೆ ಶತ್ರುಗಳು ಹೆಚ್ಚಿರುತ್ತಾರೆ ಎನ್ನುವ ಕಾರಣಕ್ಕಾಗಿ ಪ್ರೊಟೋಕಾಲ್ ಅನ್ವಯ ಅಷ್ಟೇ ಭದ್ರತೆ ನೀಡಲಾಗುತ್ತದೆ. ಇದು ತಲೆತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇದರ ಹೊರತಾಗಿಯೂ ನರೇಂದ್ರ ಮೋದಿ ಅವರು ತಮ್ಮ ಬೆಂಗಾವಲು ವಾಹನದ ಸಂಖ್ಯೆಯಲ್ಲಿ ಕಡಿತಗೊಳಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಕೋರ್ಟ್ಗೆ ಸೈಕಲ್ನಿಂದ ಬರುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ನ್ಯಾಯಮೂರ್ತಿಗಳು ಕಾರ್ ಪೂಲಿಂಗ್ ಮಾಡಿಕೊಂಡು ಬರುತ್ತಿದ್ದಾರೆ. ಕೇಂದ್ರದ ಸಚಿವರು ಸೇರಿದಂತೆ ಉನ್ನತ ಸ್ಥಾನದಲ್ಲಿ ಇರುವವರು ಹಾಗೂ ದೇಶದ ಸಮಸ್ಯೆಯನ್ನು ಅರಿತಿರುವವರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಕಡೆಯಿಂದ ಆಗುವ ಸಹಾಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಚಿನ್ನ ಬಳಸಬೇಡಿ ಎಂದು ಕೊಟ್ಟ ಒಂದೇ ಕರೆಗೆ ಹೇಗೆ ಷೇರು ಪೇಟೆ ಅಲ್ಲೋಲ ಕಲ್ಲೋಲವಾಯಿತು ಎನ್ನುವುದು ಗೊತ್ತೇ ಇದೆ.
ಪ್ರಧಾನಿ ಅವರ ಕರೆಗೆ ಅತ್ತ ಕಾಂಗ್ರೆಸ್ಸಿಗರು ಸೇರಿದಂತೆ ಕೆಲವರು ಕೊಂಕು ಮಾತನಾಡುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರೂ, ವಿರಾಜಪೇಟೆ ಶಾಸಕರೂ ಆಗಿರುವ ಹೈಕೋರ್ಟ್ ವಕೀಲ ಎ.ಎಸ್.ಪೊನ್ನಣ್ಣ ಅವರೂ ಓಗೊಟ್ಟಿದ್ದಾರೆ. ಪಕ್ಷ ಬಳಿಕ, ದೇಶ ಮೊದಲು ಎನ್ನುವ ಮನೋಭಾವದಿಂದಾಗಿ ಅವರು ತಮ್ಮ ಬೆಂಗಾವಲು ವಾಹನದಲ್ಲಿ ಕಡಿತಗೊಳಿಸುವಂತೆ ಪತ್ರ ಬರೆದಿದ್ದಾರೆ. ತೈಲ ಬಿಕ್ಕಟ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಬೆಂಗಾವಲು ವಾಹನ ಕಡಿತಗೊಳಿಸುವಂತೆ ಅವರು, ಬರೆದಿರುವ ಪತ್ರವೀಗ ವೈರಲ್ ಆಗುತ್ತಿದೆ. ಇದಕ್ಕೆ ಭಾರಿ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಹೊರ ದೇಶಗಳಿಗೆ ಹೋಗಿ ದೇಶದ ಮರ್ಯಾದೆಯನ್ನು ತೆಗೆಯುವಲ್ಲಿ ನಿರತರಾಗಿರುವವರ ನಡುವೆ, ಪಕ್ಷವನ್ನು ಮರೆದು ದೇಶವೇ ಮೊದಲು ಎಂದು ಈ ನಿರ್ಧಾರ ತೆಗೆದುಕೊಂಡಿರುವ ಪೊನ್ನಣ್ಣ ಅವರ ಬಗ್ಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.