ಹತ್ತು ಸಾವಿರ ವಾಹನಗಳಲ್ಲಿ 3 ಸಾವಿರ ವಾಹನಗಳಿಗೆ ಮಾತ್ರ ಫಾಸ್ಟ್‌ಟ್ಯಾಗ್| ಕೊಪ್ಪಳ ಜಿಲ್ಲೆಯಲ್ಲಿವೇ ಒಟ್ಟು ಐದು ಟೋಲ್‌ಗೇಟ್‌ಗಳು|ಫಾಸ್ಟ್‌ಟ್ಯಾಗ್ ಅಳವಡಿಸಿದ ಗೇಟ್‌ಗಳಲ್ಲಿ ವಾಹನಗಳು ಸರಾಗವಾಗಿ ಸಾಗುತ್ತಿದ್ದವು|
ಕೊಪ್ಪಳ(ಡಿ.16): ಜಿಲ್ಲೆಯಲ್ಲಿರುವ ಐದು ಟೋಲ್‌ಗೇಟ್‌ಗಳಲ್ಲಿ ಭಾನುವಾರ ಮೊದಲ ದಿನ ಆಪರೇಟರ್‌ಗಳು, ಚಾಲಕರಿಗೆ ಸಮಸ್ಯೆಯಾಯಿತು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 13 (ಸೊಲ್ಲಾಪುರ-ಬೆಂಗಳೂರು)ರಲ್ಲಿ 3 ಹಾಗೂ ಗಂಗಾವತಿ ತಾಲೂಕಿನಲ್ಲಿ 2 ಟೋಲ್‌ಗೇಟ್ ಸೇರಿ ಐದು ಟೋಲ್‌ಗೇಟ್‌ಗಳಿವೆ.
ತಾಲೂಕಿನ ಹಿಟ್ನಾಳ, ವಣಗೇರಿ ಮತ್ತು ಕೆರೆಹಳ್ಳಿ ಗ್ರಾಮದ ಬಳಿ ಎರಡು ಪ್ರತ್ಯೇಕ ಟೋಲ್‌ಗೇಟ್, ಗಂಗಾವತಿ ತಾಲೂಕಿನ ಮರಳಿ ಹಾಗೂ ಹೇಮಗುಡ್ಡದ ಬಳಿ ರಾಜ್ಯ ಹೆದ್ದಾರಿಯಲ್ಲಿ 2 ಟೋಲ್‌ಗೇಟ್‌ಗಳು ಇವೆ. ಹಿಟ್ನಾಳ ಬಳಿ ಇರುವ ಟೋಲ್‌ಗೇಟ್‌ನಲ್ಲಿ 6 ಗೇಟ್‌ಗಳು ಇದ್ದು, ಅದರಲ್ಲಿ ಐದರಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದೆ. ಒಂದರಲ್ಲಿ ಹಣ ಪಾವತಿ ಮಾಡಿ, ಸಂಚರಿಸುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಬಹುತೇಕರು ಫಾಸ್ಟ್‌ಟ್ಯಾಗ್ ಹೊಂದಿರದ ಕಾರಣ ಸರದಿಯಲ್ಲಿ ನಿಲ್ಲಬೇಕಾಯಿತು. ಆದರೆ, ಸಂಚಾರ ದಟ್ಟಣೆ ಅಷ್ಟಾಗಿ ಇರದೆ ಇರುವುದರಿಂದ ಅಂಥ ಗಂಭೀರ ಸಮಸ್ಯೆಯೇನೂ ಆಗಲಿಲ್ಲ. ಅಲ್ಲದೆ ಫಾಸ್ಟ್‌ಟ್ಯಾಗ್ ಅಳವಡಿಸಿದ ಗೇಟ್‌ಗಳಲ್ಲಿ ವಾಹನಗಳು ಸರಾಗವಾಗಿ ಸಾಗುತ್ತಿದ್ದವು.
ಹೆದ್ದಾರಿಯಲ್ಲಿ ಇರುವ ಮೂರು ಟೋಲ್‌ಗೇಟ್‌ನಲ್ಲಿ ಹತ್ತು ಸಾವಿರ ವಾಹನ ಸಂಚಾರವಾಗಿದ್ದು, ಕೇವಲ 3 ಸಾವಿರ ವಾಹನಗಳು ಮಾತ್ರ ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ. ಶೇ. 30 ರಷ್ಟೇ ಫಾಸ್ಟ್‌ಟ್ಯಾಗ್ ವಾಹನಗಳು ಪಾಸ್ ಆಗಿವೆ ಎಂದು ಟೋಲ್‌ಗೇಟ್ ಎಂಡಿ ಮೌಲಾಲಿ ಹೇಳುತ್ತಾರೆ.
ಚಾಲಕರಿಗೆ ಮಾಹಿತಿ ಕೊರತೆ:
ಭಾನುವಾರದಿಂದ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಪ್ರಾರಂಭಿಸಿರುವ ಕುರಿತು ಲಾರಿ ಚಾಲಕರಿಗೆ ಮಾಹಿತಿ ಇರಲಿಲ್ಲ. ಇವರು ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿದ್ದರೂ ಟೋಲ್‌ಗಳಲ್ಲಿ ಹಣ ಪಾವತಿಸಲು ನಿಂತಿದ್ದರು. ಇದರಿಂದ ಫಾಸ್ಟ್‌ಟ್ಯಾಗ್ ಅಳವಡಿಸಿದ ಗೇಟ್‌ಗಳು ಖಾಲಿ ಇದ್ದರೂ ಕಾಯುತ್ತಾ ನಿಲ್ಲಬೇಕಾಯಿತು. ಇನ್ನು ಕೆಲವರು ಫಾಸ್ಟ್‌ಟ್ಯಾಗ್ ಹೊಂದಿದ್ದರು ಹಣ ಪಾವತಿಸಲು ಮುಂದಾಗಿದ್ದರು. ಟೋಲ್ ಸಿಬ್ಬಂದಿ ಇವರಿಗೆ ಗೇಟ್ ತೆಗೆದು ಹೋಗುವಂತೆ ತಿಳಿಸಿದ ಬಳಿಕ ಅವರಿಗೆ ಅರಿವಿಗೆ ಬಂದು ಹಣ ಪಾವತಿಸದೆ ತೆರಳಿದರು.
ಪರ-ವಿರೋಧ ಧ್ವನಿ:
ಫಾಸ್ಟ್‌ಟ್ಯಾಗ್ ಅವಳಡಿಕೆಗೆ ಪರ-ವಿರೋಧ ವ್ಯಕ್ತವಾಯಿತು. ದೂರ ಪ್ರಯಾಣ ಬೆಳೆಸುವರು ಇದರಿಂದ ಸಮಯದ ಉಳಿತಾಯ ಜತೆಗೆ ಚಿಲ್ಲರೆ ಹಣದ ಸಮಸ್ಯೆ ಎದುರಾಗುವುದಿಲ್ಲ. ಇದೊಂದು ಉತ್ತಮ ವ್ಯವಸ್ಥೆಯಾಗಿದೆ ಎಂದರೆ, ಟೋಲ್ ಅಕ್ಕಪಕ್ಕದ ಹಾಗೂ ವರ್ಷಕ್ಕೊಮ್ಮೆ ರಾಷ್ಟ್ರೀಯ ಹೆದ್ದಾರಿಗೆ ಬರುವ ವಾಹನಗಳ ಮಾಲೀಕರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮೂರು ಟೋಲ್‌ಗೇಟ್‌ನಲ್ಲಿ ಹತ್ತು ಸಾವಿರ ವಾಹನ ಸಂಚರಿಸಿದ್ದು ಕೇವಲ ಮೂರು ಸಾವಿರ ವಾಹನಗಳು ಮಾತ್ರ ಫಾಸ್ಟ್‌ಟ್ಯಾಗ್ ಹೊಂದಿವೆ ಎಂದು ಟೋಲ್ ಗೇಟ್ ಎಂಡಿ ಮೌಲಾಲಿ ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ಗಳಲ್ಲಿ ಸವಾರರ ಸಮಯ ಉಳಿತಾಯ ಹಾಗೂ ವಾಹನಗಳ ದಟ್ಟಣೆ ಕಡಿಮೆ ಮಾಡಲು ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಗೆ ತಂದಿರುವುದು ಉತ್ತಮವಾಗಿದೆ. ಇದರಿಂದ ಚಿಲ್ಲರೆ ಸಮಸ್ಯೆಯಾಗದು. ಇದರಿಂದ ನಮ್ಮ ಸಮಯ ಉಳಿತಾಯವೂ ಆಗಲಿದೆ ಎಂದು ಹಿಟ್ನಾಳ ಗ್ರಾಮದ ಚಾಲಕ ಸಂಜೀವಮೂರ್ತಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಫಾಸ್ಟ್‌ಟ್ಯಾಗ್ ಅಳವಡಿಸಿದ್ದು ಅತ್ಯುತ್ತಮವಾಗಿದೆ. ಆದರೆ, ಈ ವ್ಯವಸ್ಥೆಯನ್ನು ನಮ್ಮ ಲಾರಿಗೆ ಅಳವಡಿಸಿಕೊಳ್ಳದ ಕಾರಣ ಹಣ ನೀಡಿ ರಶೀದಿ ಪಡಿದಿದ್ದೇವೆ. ಶೀಘ್ರವೇ ವಾಹನಕ್ಕೆ ಫಾಸ್ಟ್‌ಟ್ಯಾಗ್ ಅಳವಡಿಸಲಾಗುವುದು ಎಂದು ತಮಿಳನಾಡು ಲಾರಿ ಚಾಲಕ ಮೋಹನ್ ಅವರು ಹೇಳಿದ್ದಾರೆ.
ಫಾಸ್ಟ್‌ಟ್ಯಾಗ್ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ನಮ್ಮದು ಕಾರಿದ್ದರೂ ನಾವು ಬಳಸುವುದು ಕಡಿಮೆ. ಸ್ನೇಹಿತರು, ಸಂಬಂಧಿಕರು ತೆಗೆದುಕೊಂಡು ಹೋಗುತ್ತಾರೆ. ಆಗ ನಮ್ಮ ಖಾತೆಯಲ್ಲಿರುವ ಹಣ ಕಡಿತವಾಗುತ್ತಿದೆ. ಇದನ್ನು ಅವರಿಂದ ಕೇಳಲು ಆಗುವುದಿಲ್ಲ ಎಂದು ಕಾರು ಮಾಲೀಕ ಪತ್ರೇಶ ಅವರು ತಿಳಿಸಿದ್ದಾರೆ.